ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ
ಮೈಸೂರು

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ

July 1, 2018
  • ಮೈಸೂರು ಪತ್ರಕರ್ತರ ಸಂಘದಿಂದ ವೇದಿಕೆ
  • ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಉತ್ತರ
  • ಬೆಂಬಲಿಗರು, ಸಾರ್ವಜನಿಕರಿಗೆ ಅವಕಾಶವಿಲ್ಲ; ಪತ್ರಕರ್ತರ ಸಮ್ಮುಖದಲ್ಲಿ ಸವಾಲ್‍ಗೆ ಜವಾಬ್

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಹಗರಣ ಕುರಿತಂತೆ ಬಹಿರಂಗ ಚರ್ಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹಾಕಿದ್ದ ಸವಾಲನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವೀಕರಿಸಿದ್ದು, ಜು.3ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುಖಾಮುಖಿಯಾಗಲಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವೇದಿಕೆಯಲ್ಲಿ ನಡೆಯುವ ಬಹಿರಂಗ ಚರ್ಚೆಯಲ್ಲಿ ಮಧುಸೂದನ್ ಹಾಗೂ ಪ್ರೊ. ರಂಗಪ್ಪ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಉತ್ತರ ನೀಡಲಿದ್ದಾರೆ.

ಪ್ರೊ.ಕೆ.ಎಸ್.ರಂಗಪ್ಪ ಅವರು ಮುಕ್ತ ವಿವಿ ಕುಲಪತಿಗಳಾಗಿದ್ದಾಗ ನಿಯಮ ಗಾಳಿಗೆ ತೂರಿ, ದೇಶ-ವಿದೇಶಗಳಲ್ಲಿ ಅಧ್ಯಯನ ಕೇಂದ್ರ ಆರಂಭಿಸಿ ವಿವಿಧ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಲಕ್ಷ ಲಕ್ಷ ರೂ. ಪಡೆದು ಪ್ರಮಾಣ ಪತ್ರ ವಿತರಿಸಿದ್ದರು. ಯುಜಿಸಿ ಮಾನ್ಯತೆ ಇಲ್ಲದೆ ನಡೆಸಿದ ವಿವಿಧ ಕೋರ್ಸ್‍ಗಳ ಪ್ರಮಾಣ ಪತ್ರ ಪಡೆದ ಸುಮಾರು 3.50 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇಂತಹ ಪ್ರಮಾಣ ಪತ್ರ ನೀಡಿ, ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದವರು, ಮುಂಬಡ್ತಿ ಪಡೆದಿದ್ದವರ ಜೀವನ ಡೋಲಾಯಮಾನವಾಗಿದೆ. ಅಲ್ಲದೆ, ಸ್ವಜಾತಿ ಪ್ರೇಮ ಮೆರೆದು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದರು ಎಂದು ಗೋ.ಮಧುಸೂದನ್ ಆರೋಪಿಸಿದ್ದರಲ್ಲದೆ, ಈ ಹಗರಣ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲೆಗಳು ನನ್ನ ಬಳಿಯಿದ್ದು, ಬಹಿರಂಗ ಚರ್ಚೆಗೆ ಬಂದು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದರು.

ಅಕ್ರಮ ನೇಮಕಾತಿ ಹಾಗೂ ವಿವಿಧ ಹಗರಣ ಸಂಬಂಧ ಕೇಳಿ ಬಂದಿದ್ದ ಆರೋಪಕ್ಕೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಪ್ರತಿಕ್ರಿಯೆ ನೀಡಿ, ನನ್ನ ಏಳ್ಗೆ ಸಹಿಸದೆ ಇರುವವರು ಸುಳ್ಳು ಆರೋಪ ಮಾಡಿದ್ದಾರೆ. ಮುಕ್ತ ವಿವಿ ಹಾಗೂ ಮೈಸೂರು ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ಎಲ್ಲಾ ಕೆಲಸವನ್ನು ನಿಯಮಾನುಸಾರವೇ ಮಾಡಿದ್ದೇನೆ. ಕುಲಪತಿಯ ವ್ಯಾಪ್ತಿಯನ್ನು ಬಿಟ್ಟು ಯಾವುದೇ ಕೆಲಸ ಮಾಡಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದರೆ ಇಷ್ಟು ದಿನ ವಿರೋಧಿಗಳು ಸುಮ್ಮನಿರುತ್ತಿರಲಿಲ್ಲ. ನಾನು ಮಾಡಿರುವ ಎಲ್ಲಾ ಕೆಲಸಗಳು, ಆರಂಭಿಸಿರುವ ಹೊಸ ಕೋರ್ಸ್‍ಗಳು, ಮಾಡಿದ ನೇಮಕಾತಿಗಳು ನಿಯಮಾನುಸಾರವೇ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದ್ದಿದ್ದರು.

ಈ ಇಬ್ಬರ ನಡುವೆ ಕಳೆದ ಮೂರು ವರ್ಷಗಳಿಂದ ಆರೋಪ-ಪ್ರತ್ಯಾರೋಪ ನಡೆಯುತ್ತಿತ್ತು. ಇದಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಬಹಿರಂಗ ಚರ್ಚೆಗೆ ವೇದಿಕೆ ಕಲ್ಪಿಸಿದ್ದು, ಗೋ.ಮಧುಸೂದನ್ ಹಾಗೂ ಪ್ರೊ.ಕೆ.ಎಸ್.ರಂಗಪ್ಪ ಜಿಲ್ಲಾ ಪತ್ರಕರ್ತರ ಭವನಕ್ಕೆ ಬರಲು ಸಮ್ಮತಿಸಿದ್ದಾರೆ. ಈ ಇಬ್ಬರ ಮುಖಾಮುಖಿಗೆ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ವ್ಯವಸ್ಥೆ ಕಲ್ಪಿಸಿದ್ದಾರೆ. ಹಿರಿಯ ಪತ್ರಕರ್ತ ಬಿ.ಎಸ್.ಪ್ರಭುರಾಜನ್ ಹಾಗೂ ಇನ್ನಿತರ ಪತ್ರಕರ್ತರು, ಈ ಇಬ್ಬರು ಗಣ್ಯರು ನೀಡುವ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜು.3ರಂದು ಬೆಳಿಗ್ಗೆ 10 ಗಂಟೆಗೆ ಗೋ.ಮಧುಸೂದನ್ ಹಾಗೂ ಪ್ರೊ.ಕೆ.ಎಸ್.ರಂಗಪ್ಪ ಮುಖಾಮುಖಿಯಾಗಲಿದ್ದಾರೆ. ಇಬ್ಬರು ನಾಯಕರು ತಮ್ಮ ಬೆಂಬಲಿಗರನ್ನು ಕರೆತರಬಾರದು. ಪತ್ರಕರ್ತರನ್ನು ಹೊರತುಪಡಿಸಿದರೆ ಬೇರ್ಯಾರಿಗೂ ಅವಕಾಶವಿಲ್ಲ. ಈ ಚರ್ಚೆಯಲ್ಲಿ ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ರದ್ದು ಹಾಗೂ ನಂತರ ಲಕ್ಷಾಂತರ ವಿದ್ಯಾರ್ಥಿಗಳು ಪಡೆದಿರುವ ವಿವಿಧ ಪದವಿ ಪ್ರಮಾಣ ಪತ್ರಗಳ ಅನೂರ್ಜಿತಗೊಂಡ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಕ್ಕೆ ತಾರ್ಕಿಕ ಅಂತ್ಯ ಹಾಡುವ ಉದ್ದೇಶವಷ್ಟೇ. – ಸಿ.ಕೆ.ಮಹೇಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ

Translate »