ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ : ಗೃಹ ಕಾರ್ಮಿಕ ಮಹಿಳೆಯರಿಂದ ಜಾಥಾ, ಬೀದಿ ನಾಟಕ
ಮೈಸೂರು

ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ : ಗೃಹ ಕಾರ್ಮಿಕ ಮಹಿಳೆಯರಿಂದ ಜಾಥಾ, ಬೀದಿ ನಾಟಕ

June 28, 2018

ಮೈಸೂರು:  ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ಮತ್ತು ಧ್ವನಿ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಮೈಸೂರಿನಲ್ಲಿ ಬುಧವಾರ ಜಾಥಾ ಮತ್ತು ಬೀದಿ ನಾಟಕದ ಮೂಲಕ ವಿಶ್ವ ಗೃಹ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಜಾಥಾದಲ್ಲಿ ಗೃಹ ಕಾರ್ಮಿಕರಿಗೆ ಸಿಗಬೇಕಾದ ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನ, ಸಾಮಾಜಿಕ ಭದ್ರತೆ ನೀಡಬೇಕೆಂದು ಆಗ್ರಹಿಸುವ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ಗೃಹ ಕಾರ್ಮಿಕರನ್ನು ಗೌರವದಿಂದ ಕಾಣಿರಿ, ಕನಿಷ್ಟ ವೇತನ ಜಾರಿಗೆ ಬರಲಿ, ಮನೆ ಕೆಲಸವನ್ನು ಉದ್ಯೋಗÀ ಎಂದು ಪರಿಗಣಿಸಿ ಎಂಬ ಘೋಷ ವಾಕ್ಯಗಳುಳ್ಳ ಬಿತ್ತಿಪತ್ರಗಳನ್ನು ಹಿಡಿದಿದ್ದ ನೂರಕ್ಕೂ ಹೆಚ್ಚು ಗೃಹ ಕಾರ್ಮಿಕ ಮಹಿಳೆಯರು, ನಮಗೂ ಗೌರವ ಇದೆ ಎಂಬುದನ್ನು ಸಾರುವ ಬೀದಿ ನಾಟಕ ಪ್ರದರ್ಶಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಹೊರಟ ಜಾಥಾ, ದೊಡ್ಡ ಗಡಿಯಾರ, ಗಾಂಧಿ ಚೌಕ, ಚಿಕ್ಕ ಗಡಿಯಾರ, ಡಿ.ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ತಲುಪಿತು. ಜಾಥಾದಲ್ಲಿ ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ಅಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಚಂದ್ರಮ್ಮ, ಜಿಲ್ಲಾ ಸಂಯೋಜಕಿ ಪ್ರೇಮಲತಾ, ಯೋಜನಾ ಸಂಯೋಜಕ ರವಿಚಂದ್ರ, ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷ ನಳಿನಾಕುಮಾರಿ, ಕಾರ್ಯದರ್ಶಿ ಶಿವಮ್ಮ ಇನ್ನಿತರರು ಉಪಸ್ಥಿತರಿದ್ದರು.

ಗೃಹ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್

ಬಳಿಕ ಇಂಜಿನಿಯರುಗಳ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಇಲಾಖೆ ಇನ್ಸ್‍ಪೆಕ್ಟರ್ ಗೀತಾ ಮಾತನಾಡಿ, ಸರ್ಕಾರ ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಗೃಹ ಕಾರ್ಮಿಕರಿಗೂ ನೀಡುವ ಬಗ್ಗೆ ಚಿಂತಿಸಿ, ಗೃಹ ಕಾರ್ಮಿಕರನ್ನು ಗುರುತಿಸಿ, ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನಿಸಿದೆ ಎಂದರು.

ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಯಾಗಿರುವ ಮೈಸೂರಿನ 55,000 ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಅದೇ ರೀತಿ ಗೃಹ ಕಾರ್ಮಿಕರು ಸರ್ಕಾರಿ ಸೌಲಭ್ಯ ಪಡೆಯಲು ಸ್ಮಾರ್ಟ್ ಕಾರ್ಡ್ ಪಡೆಯಬೇಕು ಎಂದರು.

ಸಭೆಯಲ್ಲಿ ಆರ್‍ಎಲ್‍ಹೆಚ್‍ಪಿ ನಿರ್ದೇಶಕಿ ಸರಸ್ವತಿ, ಟ್ರೇಡ್ ಯೂನಿಯನ್ ಅಧ್ಯಕ್ಷೆ ಗಿರಿಜಮ್ಮ, ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಳಿನಾಕುಮಾರಿ, ಕಾರ್ಮಿಕ ಇಲಾಖೆ ಇನ್ಸ್‍ಪೆಕ್ಟರ್ ವೀಣಾ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಮಿಕ ಇಲಾಖೆ ಕಚೇರಿಯಲ್ಲಿ 50 ರೂ. ನೀಡಿ ನೋಂದಣಿಯಾಗಿ, ಪ್ರತೀ ವರ್ಷ ಕಾರ್ಡ್ ನವೀಕರಿಸಬೇಕು. ಅಪಘಾತದಲ್ಲಿ ಸಾವಿಗೀಡಾದರೆ 3 ಲಕ್ಷ ರೂ, ಕಾಯಿಲೆ ಇದ್ದು ಚಿಕಿತ್ಸೆ ಪಡೆದವರಿಗೆ ಆಸ್ಪತ್ರೆ ವೆಚ್ಚ, ಮೃತರ ಅಂತ್ಯಕ್ರಿಯೆಗೆ ರೂ. 35,000, ಹೆರಿಗೆಗೆ ರೂ.20,000, ಕೆಲಸಕ್ಕೆ ಪೂರಕ ಸಾಮಗ್ರಿ ಕೊಳ್ಳಲು ರೂ.15,000 , ಮನೆ ಕಟ್ಟಿಸಲು ರೂ.2 ಲಕ್ಷ, ಕಾರ್ಮಿಕರ ಶಾಲಾ ಮಕ್ಕಳಿಗೆ ಪ್ರತಿ ವರ್ಷ ರೂ.2000 ಸಹಾಯಧನ ಸೇರಿದಂತೆ ಅನೇಕ ಸೌಲಭ್ಯಗಳಿವೆ. 60 ವರ್ಷ ತುಂಬಿದವರಿಗೆ ಪಿಂಚಣಿ ಸೌಲಭ್ಯ, ಫಲಾನುಭವಿಗಳಿಗೆ ಪ್ರತಿ ತಿಂಗಳು ರೂ.1000 ಪಿಂಚಣಿ ದೊರೆಯುತ್ತದೆ. – ಗೀತಾ, ಕಾರ್ಮಿಕ ಇಲಾಖೆ ಇನ್ಸ್‍ಪೆಕ್ಟರ್

Translate »