ಭ್ರಷ್ಟಾಚಾರದ ವಿರುದ್ಧ ಜಾಗೃತಿ ಜಾಥಾ
ಮೈಸೂರು

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಜಾಥಾ

November 4, 2021

ಮೈಸೂರು, ನ.3(ಪಿಎಂ)- ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೇಂದ್ರ ವಿಚಕ್ಷಣ ಆಯೋಗದ ಜಾಗೃತಿ ಸಪ್ತಾಹದ ಅಂಗವಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಪ್ರಾದೇಶಿಕ ಕಾರ್ಯಾಲಯದ ವತಿಯಿಂದ ಬ್ಯಾಂಕಿನ ಉದ್ಯೋಗಿಗಳು ಬುಧವಾರ ಜಾಥಾ ನಡೆಸಿದರು.

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು `ಸ್ವತಂತ್ರ ಭಾರತ@75 ಸಮಗ್ರತೆಯ ಜೊತೆಯಲ್ಲಿ ಸ್ವಾವಲಂಬನೆ’ ಶೀರ್ಷಿಕೆಯಡಿ ಈ ಬಾರಿ ಅ.27ರಿಂದ ನ.2ರವರೆಗೆ ಜಾಗೃತಿ ಸಪ್ತಾಹ ಆಚರಿಸಲು ಕೇಂದ್ರ ವಿಚಕ್ಷಣ ಆಯೋಗ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಜಾಥಾ ನಡೆಸಲಾಯಿತು. ಮೈಸೂರಿನ ಬ್ಯಾಂಕ್‍ನ ಪ್ರಾದೇಶಿಕ ಕಚೇರಿ ಆವರಣದಲ್ಲಿ ಬ್ಯಾಂಕಿನ ಮುಖ್ಯ ವಿಜಿಲೆನ್ಸ್ ಅಧಿಕಾರಿ ಉಮೇಶ್‍ಕುಮಾರ್ ಸಿಂಗ್ ಮತ್ತು ಬ್ಯಾಂಕಿನ ಬೆಂಗಳೂರು ವಲಯ ಕಚೇರಿಯ ಕ್ಷೇತ್ರೀಯ ಪ್ರಧಾನ ವ್ಯವ್ಥಾಪಕ ಚಂದ್ರ ಮೋಹನ್ ರೆಡ್ಡಿ ಜಂಟಿಯಾಗಿ ಜಾಥಾಕ್ಕೆ ಚಾಲನೆ ನೀಡಿದರು.
ವಿನೋಬಾ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆಯಲ್ಲಿ ಸಾಗಿ ಮತ್ತೆ ಅದೇ ರಸ್ತೆಗಳಲ್ಲಿ ಹಿಂತಿರುಗಿ ಪ್ರಾದೇಶಿಕ ಕಚೇರಿಯ ಆವರಣ ದಲ್ಲಿ ಜಾಥಾ ಮುಕ್ತಾಯಗೊಂಡಿತು. ಭ್ರಷ್ಟಾಚಾರ ವಿರೋಧಿ ಫಲಕಗಳ ಪ್ರದರ್ಶನ ದೊಂದಿಗೆ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಪಾತ್ರದ ಮಹತ್ವದ ಕುರಿತು ಘೋಷಣೆಗಳನ್ನು ಕೂಗಲಾಯಿತು. ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ಡಿಜಿಎಂ ಆರ್.ಜ್ಯೋತಿ ಕೃಷ್ಣನ್, ವಿಜಿಲೆನ್ಸ್ ವಿಭಾಗದ ಮುಖ್ಯಸ್ಥ ಪಿ.ಬಸವರಾಜ್, ಎಜಿಎಂ ಯು.ಸೆಲ್ವಕುಮಾರ್ ಸೇರಿದಂತೆ ಬ್ಯಾಂಕಿನ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಶಾಖೆ ಮತ್ತು ಕಚೇರಿಗಳ ಉದ್ಯೋಗಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Translate »