ದೊಡ್ಡ ಮೋರಿಗೆ ಬಿದ್ದಿದ್ದ ಕುದುರೆಗೆ `ಅಭಯ’
ಮೈಸೂರು

ದೊಡ್ಡ ಮೋರಿಗೆ ಬಿದ್ದಿದ್ದ ಕುದುರೆಗೆ `ಅಭಯ’

November 4, 2021

ಮೈಸೂರು, ನ.3(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರದ ದೊಡ್ಡ ಮೋರಿ ಯೊಂದಕ್ಕೆ ಬಿದ್ದು ಒದ್ದಾಡುತ್ತಿದ್ದ ಕುದುರೆಯೊಂದನ್ನು ಮೈಸೂರು ನಗರಪಾಲಿಕೆ ಅಭಯ 1ನೇ ತಂಡದ ಸದಸ್ಯರು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿ ಆಹಾರ ಅರಸಿ ಜೆ.ಪಿ.ನಗರದ ದೊಡ್ಡಮೋರಿಯತ್ತ ಬಂದ ಕುದುರೆ ಆಕಸ್ಮಿಕವಾಗಿ ಮೋರಿಯೊಳಗೆ ಬಿದ್ದಿತು. ರಾತ್ರಿಯಾದ್ದರಿಂದ ಇದನ್ನು ಯಾರೂ ಗಮನಿಸಲಿಲ್ಲ. ಇದರಿಂದ ಕುದುರೆ ಮೋರಿಯಲ್ಲಿಯೇ ಇಡೀ ರಾತ್ರಿ ಕಳೆಯುವಂತಾಯಿತು.

ಬುಧವಾರ ಬೆಳಗ್ಗೆ ಸಾರ್ವಜನಿಕರಿಗೆ ಕುದುರೆ ನರಳುತ್ತಿದ್ದ ಶಬ್ದ ಕೇಳಿ ಸ್ಥಳಕ್ಕೆ ಹೋಗಿ ನೋಡಲಾಗಿ ಕುದುರೆ ಮೋರಿಗೆ ಬಿದ್ದಿರುವುದು ತಿಳಿಯಿತು. ತಕ್ಷಣ ಜನರು ಪಾಲಿಕೆ ಅಭಯ ತಂಡಕ್ಕೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿ ಕಾರ್ಯಪ್ರವೃತ್ತರಾದ ಅಭಯ 1ರ ತಂಡದ ಮಂಜುನಾಥ್ ಮತ್ತು ಇತರೆ ಸದಸ್ಯರು ಕುದುರೆಯನ್ನು ಹಗ್ಗದಿಂದ ಕಟ್ಟಿ ದೊಡ್ಡ ಮೋರಿಯಿಂದ ಮೇಲೆಳೆದು ರಕ್ಷಿಸಿ ಮಾನವೀಯತೆ ಮೆರೆದರು. ತಂಡದಲ್ಲಿ ಸಾಗರ್, ಶ್ರೇಯಸ್, ಸಿದ್ದಪ್ಪ, ಬೋರಯ್ಯ ಇದ್ದರು.

ಉರುಳಿದ ಮರ ತೆರವು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಹುಣಸೂರು ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಬಳಿ ಮರವೊಂದು ಉರುಳಿಬಿದ್ದಿದ್ದು ಯಾರಿಗೂ ಪ್ರಾಣಾಪಾಯವಾಗಿಲ್ಲ. ಶಿಥಿಲಗೊಂಡಿದ್ದ ಮರ ಬಿದ್ದಿರುವ ಬಗ್ಗೆ ಸಾರ್ವಜನಿಕರು ಅಭಯ ತಂಡಕ್ಕೆ ತಿಳಿಸಿದರು. ಕೂಡಲೇ ಅಭಯ ತಂಡದ ಸದಸ್ಯರು ಸ್ಥಳಕ್ಕೆ ಹೋಗಿ ಉರುಳಿ ಬಿದ್ದಿದ್ದ ಮರವನ್ನು ಕತ್ತರಿಸಿ, ತೆರವುಗೊಳಿಸಿದರು.

Translate »