ಅಯೋಧ್ಯೆ ಭೂಮಿಪೂಜೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್.ಕೆ.ಅಡ್ವಾಣಿ, ಎಂಎಂ ಜೋಶಿ ಭಾಗಿ
ಮೈಸೂರು

ಅಯೋಧ್ಯೆ ಭೂಮಿಪೂಜೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್.ಕೆ.ಅಡ್ವಾಣಿ, ಎಂಎಂ ಜೋಶಿ ಭಾಗಿ

August 3, 2020

ನವದೆಹಲಿ,ಆ.2-ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಶಿ ರಾಮಮಂದಿರ ಭೂಮಿಪೂಜೆ ಸಮಾರಂಭಕ್ಕಾಗಿ ಅಯೋಧ್ಯೆಗೆ ತೆರಳುತ್ತಿಲ್ಲ.ಆದರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಆ.5ರಂದು ನಡೆಯ ಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಉಭಯ ನಾಯಕರನ್ನು ದೂರವಾಣಿ ಮೂಲಕ ಶನಿವಾರ ಆಹ್ವಾನಿಸಲಾಗಿದೆ. ಸುಪ್ರೀಂಕೋರ್ಟ್‍ನಿಂದ ಸ್ಥಾಪಿಸಲಾಗಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಆಹ್ವಾನವನ್ನು ಕಳುಹಿಸಲಾಗಿದೆ. ಅಯೋಧ್ಯೆಯಲ್ಲಿ 1990ರಲ್ಲಿ ರಾಮಮಂದಿರ ನಿರ್ಮಾಣ ಆಂದೋಲನದ ಪ್ರಮುಖ ಪಾತ್ರ ವಹಿಸಿದ್ದ

ಎಲ್.ಕೆ.ಅಡ್ವಾಣಿ ಕಳೆದ ವಾರ ಲಖನೌನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಮಸೀದಿ ಧ್ವಂಸ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಪ್ರಕರಣದಲ್ಲಿ 92 ವರ್ಷದ ಅಡ್ವಾಣಿ ಕೂಡಾ ಆರೋಪಿಯಾಗಿದ್ದು, ಸುಮಾರು ನಾಲ್ಕೂವರೆ ಗಂಟೆಗಳ ಕಾಲ 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಎಲ್ಲ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ಮಸೀದಿ ಧ್ವಂಸ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಿಬಿಐ ಹೇಳಿತು. ರಾಜಕೀಯ ಕಾರಣದಿಂದ ತಮ್ಮ ಮೇಲೆ ತಪ್ಪು ಆರೋಪ ಗಳನ್ನು ಹೊರಿಸಲಾಗಿದೆ ಎಂದು ಎಂ.ಎಂ. ಜೋಷಿ ಹಾಗೂ ಉಮಾ ಭಾರತಿ ಅದೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆ ಸಮಾರಂಭಕ್ಕಾಗಿ ಅದ್ದೂರಿ ಸಿದ್ಧತೆ ಮಾಡಲಾಗುತ್ತಿದೆ. ಶಂಕುಸ್ಥಾಪನೆ ದಿನ 40 ಕೆಜಿ ಬೆಳ್ಳಿಯ ಇಟ್ಟಿಗೆಗಳನ್ನು ಇಡಲಾಗುತ್ತಿದ್ದು, ಕೊರೊನಾ ನಿರ್ಬಂಧದಿಂದಾಗಿ 50 ಮಂದಿ ಗಣ್ಯರನ್ನು ಆಹ್ವಾನಿಸಿರುವುದಾಗಿ ಟ್ರಸ್ಟ್ ತಿಳಿಸಿದೆ.

Translate »