ಅಯೋಧ್ಯೆ ರಾಮಮಂದಿರ ಸಂಬಂಧ ಪೇಜಾವರ ಶ್ರೀಗಳ ಹೇಳಿಕೆಗೆ  ಪ್ರೊ. ಬಿ.ಕೆ.ಚಂದ್ರಶೇಖರ್ ವಿಷಾದ
ಮೈಸೂರು

ಅಯೋಧ್ಯೆ ರಾಮಮಂದಿರ ಸಂಬಂಧ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರೊ. ಬಿ.ಕೆ.ಚಂದ್ರಶೇಖರ್ ವಿಷಾದ

November 10, 2018

ಮೈಸೂರು: ರಾಮಮಂದಿರ ನಿರ್ಮಾಣ ವಾಗಲೇಬೇಕೆಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಸಾರ್ವ ಜನಿಕವಾಗಿ ಮಾತನಾಡಬಾರದಿತ್ತು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಉಸ್ತು ವಾರಿ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರ ಶೇಖರ್ ಆಕ್ಷೇಪ ವ್ಯಕ್ತಪಡಿಸಿದರು.

ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್, ರಾಮ ಮಂದಿರದ ಭೂ ವಿವಾದದ ವಿಚಾರಣೆ ಮುಂದೂಡಿದ್ದಕ್ಕೆ ಶ್ರೀಗಳು, ಸಾರ್ವಜನಿಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡಬಾರದು. ಇದರಿಂದ ನಮ್ಮ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ. ಈ ಬಗ್ಗೆ ಶ್ರೀ ಗಳನ್ನು ಖುದ್ದು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರೆ ಹಿಂದೂ ಸಂಘಟನೆಗಳ ಮುಖಂಡರು, ಸಾಧು-ಸಂತರು, ಅಯೋಧ್ಯೆಯಲ್ಲಿ ರಾಮಮಂದಿರದ ಭೂ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸುತ್ತಿದ್ದಾರೆ. ಇವು ಸಂವಿಧಾನಕ್ಕೆ ಧಕ್ಕೆ ತರುವಂಥ ಘಟನೆಗಳು ಎಂದು ಹಿಂದೂ ಮುಖಂಡರ ನಡೆಯನ್ನು ಖಂಡಿಸಿದರು.

ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ಮುಖಂಡರು, ಪ್ರತಿಪಕ್ಷದ ಮುಖಂಡರ ಬಗ್ಗೆ ತೀರಾ ಕೆಳಮಟ್ಟದಲ್ಲಿ ಮಾತ ನಾಡುತ್ತಿದ್ದಾರೆ. ಖುದ್ದು ಪ್ರಧಾನಿ ಮೋದಿಯವರೇ ಈ ಮಟ್ಟದ ಭಾಷೆ ಪ್ರಯೋಗಿಸಿರು ವುದು ನಾಚಿಕೆಗೇಡಿನ ಸಂಗತಿ. ಅಲ್ಲದೆ, ವಿಶ್ವನಾಯಕ, ಮಾಜಿ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರು ಅವರ ಸಾಧನೆಯನ್ನು ತೀರಾ ಕಳಪೆ ಎಂಬಂತೆ ಬಿಂಬಿಸುತ್ತಿದ್ದಾರೆ.

ಎನ್‍ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂಧ ಮೇಲೆ ದೇಶದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಕೆಲಸವಾಗುತ್ತಿದೆ. ರಾಜಕೀಯ ದ್ವೇಷಕ್ಕಾಗಿ ಸಿಬಿಐ, ಇಡಿ, ಐಟಿ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿ ಸಿದೆ. ಅಲ್ಲದೆ, ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣ, ನಿರಂತರ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ತೀವ್ರ ಕುಸಿತದಿಂದಾಗಿ ಅಂತಾರಾಷ್ಟ್ರೀಯಮಟ್ಟದಲ್ಲಿ ಭಾರತ ಆರ್ಥಿಕ ನೀತಿ ಮತ್ತು ಅವೈಜ್ಞಾನಿಕ ವಿದೇಶಿ ನೀತಿಗಳ ಬಗ್ಗೆ ಋಣಾತ್ಮಕ ಚರ್ಚೆಯಾಗುತ್ತಿದೆ. ಇದರಿಂದ ನೆರೆಹೊರೆ ದೇಶಗಳ ವ್ಯವಹಾರ ಸಂಬಂಧ ಹದಗೆಟ್ಟು, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿದೆ. ಇದರ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು, ಸಾರ್ವಜನಿಕವಾಗಿ ಮಾತನಾಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು. ಗೋಷ್ಠಿ ಯಲ್ಲಿ ಕೆಪಿಸಿಸಿ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ರಾಜ್ಯ ವಕ್ತಾರ ಹೆಚ್.ಎ. ವೆಂಕಟೇಶ್, ಕಾರ್ಯದರ್ಶಿ ವರುಣಾ ಮಹೇಶ್ ಉಪಸ್ಥಿತರಿದ್ದರು.

Translate »