ಮೈಸೂರು: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ನಾಯಕರ ಜನ್ಮ ದಿನವನ್ನು ಆಚರಿಸಲು ಅವಕಾಶವಿದ್ದು, ಟಿಪ್ಪು ಸುಲ್ತಾನ್, ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧೀಜಿ ಸೇರಿದಂತೆ ಮಹಾನ್ ನಾಯಕರ ಜನ್ಮ ದಿನವನ್ನು ಆಚರಿಸುವುದರಿಂದ ಕೋಮು ಸೌಹಾರ್ದತೆ ಗಟ್ಟಿಗೊಳ್ಳುವುದರೊಂದಿಗೆ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಸಮಾಜ ಸೇವಕ ಅಜೀಜುಲ್ಲಾ ಅಜ್ಜು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನ.10ರಂದು ಆಚರಿಸಲು ಮುಂದಾಗಿರುವ ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಮುಖಂಡರು ಜನರನ್ನು ದಿಕ್ಕು ತಪ್ಪಿಸುವುದರೊಂದಿಗೆ ಕೋಮು ಸೌಹಾರ್ದತೆ ಹಾಳು ಮಾಡುವ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಈ ನಡವಳಿಕೆ ಯಿಂದ ಹಲವಾರು ವರ್ಷಗಳಿಂದ ಸಹೋದರರಂತೆ ಬಾಳ್ವೆ ನಡೆಸುತ್ತಿರುವ ಎರಡು ಧರ್ಮದ ಜನರ ನಡುವೆ ಸಾಮರಸ್ಯ ಹಾಳಾಗುವಂತಾಗಿದೆ. ಇಸ್ಲಾಂ ಧರ್ಮಿಯರು ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಬುದ್ದ, ಬಸವಣ್ಣ ಸೇರಿದಂತೆ ಹಲವಾರು ಮಹನೀಯರ ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದಾರೆ.
ಎಲ್ಲಾ ಜಯಂತಿ ಕಾರ್ಯ ಕ್ರಮಗಳಲ್ಲಿಯೂ ಭೇದ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೆ ನಿಮಗೆ ಇಷ್ಟವಿಲ್ಲದಿದ್ದರೆ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಳ್ಳಿ. ಅದನ್ನು ಹೊರತುಪಡಿಸಿ ಅಪಪ್ರಚಾರ ಮಾಡುವ ಮೂಲಕ ಶಾಂತಿ ಕದಲಬೇಡಿ ಎಂದು ಅವರು ಬಿಜೆಪಿ ಮುಖಂಡರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಜರತ್ ಸೂಫಿ ಅಜೀಮ್‍ವುಲ್ಲಾ ಷಾ, ಮೌಲಾನ ಖಲೀನದ ವುಲ್ಲಾ, ಮುಖಂಡರಾದ ರಿಯಾಜ್ ಪಾಶ, ಪರಶಿವಮೂರ್ತಿ ಇದ್ದರು.