ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅನುಪಸ್ಥಿತಿಯಲ್ಲಿ ಸರ್ಕಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಟಿಪ್ಪು ಜಯಂತಿ ಆಚರಿಸಿತು.
ಜಯಂತಿ ಆಚರಣೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತಾದರೂ, ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದ ಸರ್ಕಾರ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಆಚರಣೆ ನಡೆಸಿ, ಆ ಸಮು ದಾಯವನ್ನು ತೃಪ್ತಿಪಡಿಸಿದೆ. ಕೆಲವು ಕೇಂದ್ರಗಳಲ್ಲಿ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಯಂತಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಸೂಚನೆ ಮೇರೆಗೆ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಿ, ಕೇವಲ ಸಭಾಂಗಣದಲ್ಲಿ ಜಯಂತಿ ನಡೆಸಿದ್ದರಿಂದ ಅಹಿತಕರ ಘಟನೆಗಳಿಗೆ ಅವಕಾಶವಾಗಲಿಲ್ಲ.
ರಾಜಧಾನಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅನುಪಸ್ಥಿತಿಯಲ್ಲೇ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕøತಿ ಸಚಿವೆ ಜಯ ಮಾಲಾ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್, ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿಜೃಂಭಣೆಯಿಂದಲೇ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಕುಮಾರ್, ರಾಜಕೀಯ ಕಾರಣಕ್ಕಾಗಿ ವಿರೋಧಿಸುವ ಬದಲು ಕೇಂದ್ರದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದ್ದು, ಇನ್ನು ಮುಂದೆ ಟಿಪ್ಪು ಜಯಂತಿ ಆಚರಣೆ ಬೇಡ ಎಂದು ಫರ್ಮಾನು ಹೊರಡಿಸಲಿ ಎಂದರು.
ಬಿಜೆಪಿಯವರು ಕೋಮು ಸೌಹಾರ್ದ ಹಾಳುಗೆಡವಿ ರಾಜಕೀಯ ಮಾಡುವ ಏಕೈಕ ಉದ್ದೇಶದಿಂದ ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅವರಿಗೆ ಟಿಪ್ಪು ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಅದನ್ನು ಮನವರಿಕೆ ಮಾಡಿಕೊಟ್ಟು ಇನ್ನು ಮುಂದೆ ಜಯಂತಿ ಆಚರಿಸಬಾರದು ಎಂದು ಫರ್ಮಾನು ಹೊರಡಿಸಿ, ನಾವು ಸುಮ್ಮನಾಗುತ್ತೇವೆ. ಈ ಹಿಂದೆ ಯಡಿಯೂರಪ್ಪನವರು,ಅಶೋಕ್, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ನಾಯಕರು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿರುವುದಕ್ಕೆ ಸಾಕ್ಷ್ಯ ನನ್ನ ಬಳಿ ಇದೆ. ಬೇಕಿದ್ದರೆ ಅದನ್ನು ಕಳುಹಿಸಿ ಕೊಡುತ್ತೇನೆ. ನಿಮ್ಮ ಮಾತುಗಳನ್ನೆಲ್ಲ ವಾಪಸ್ ಪಡೆದುಕೊಳ್ಳಿ, ಆಮೇಲೆ ಜಯಂತಿ ಯನ್ನು ವಿರೋಧ ಮಾಡಿ ಎಂದರು. ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ದೇಶಭಕ್ತ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿಧಾನಮಂಡಲದ 60ನೇ ವರ್ಷಾಚರಣೆ ವೇಳೆ ಜಂಟಿ ಅಧಿವೇಶನ ಉದ್ದೇಶಿಸಿ 20 ನಿಮಿಷ ಭಾಷಣ ಮಾಡಿದ್ದರು. ಅದರಲ್ಲಿ 4 ನಿಮಿಷ ಟಿಪ್ಪು ಕುರಿತು ಹೊಗಳಿದ್ದಾರೆ.
ದೇಶದ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರನ್ನು ಉಲ್ಲೇಖಿಸಲಾಗಿದೆ. ಅದು ಇತಿಹಾಸ. ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಬೇಡಿ. ನಮ್ಮಲ್ಲಿ ಐಕ್ಯತೆ, ಏಕತೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಟಿಪ್ಪು ಜಯಂತಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ನಮಗಿಲ್ಲ. ರಾಜಕೀಯಕ್ಕಾಗಿ ವಿರೋಧ ಮಾಡುವುದನ್ನು ಬಿಡಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಯಾವುದೇ ಧರ್ಮ, ಪೂಜೆಯಾದರೂ ಅದರ ಮೂಲ ಉದ್ದೇಶವೊಂದೇ. ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಸಮಾಜ ಒಡೆಯಬಾರದು. ಜಗತ್ತಿನ ಯಾವುದೇ ಭಾಗದಲ್ಲಿರುವ ಮನುಷ್ಯರಾದರೂ ಅವರ ರಕ್ತದ ಬಣ್ಣ ಒಂದೇ. ಕಣ್ಣೀರಿನ, ಬೆವರಿನ ರುಚಿ ಒಂದೇ. ನಮ್ಮ ಮಕ್ಕಳಿಗೆ ಇತಿಹಾಸದ ಬಗ್ಗೆ ತಪ್ಪು ಸಂದೇಶ ಕೊಡಬಾರದು ಎಂದು ಹೇಳಿದರು.
ಸಚಿವೆ ಜಯಮಾಲಾ ಮಾತನಾಡಿ, ರಾಜ್ಯ ಸರ್ಕಾರ ಜಯಂತಿ ಆಚರಣೆ ಮೂಲಕ ಟಿಪ್ಪುವನ್ನು ಉದ್ಧಾರ ಮಾಡುತ್ತಿಲ್ಲ. ಇತಿಹಾಸವನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು. ಮೈಸೂರು ವಿವಿಯ ಪ್ರೊ.ಕೆ.ಸದಾಶಿವ ಅವರು ಟಿಪ್ಪು ಸುಲ್ತಾನ್ ಕುರಿತು ಸಮಗ್ರ ವಿವರಣೆ ನೀಡಿದರು.
ಮೈಸೂರಲ್ಲೂ ಟಿಪ್ಪು ಸುಲ್ತಾನ್ ಸ್ಮರಣೆ
ಮೈಸೂರು: ಮೈಸೂ ರಿನ ಕಲಾಮಂದಿರದಲ್ಲಿ ಇಂದು ಏರ್ಪ ಡಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಯಶಸ್ವಿ ಯಾಗಿ ನೆರವೇರಿತು.
ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿ ಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಲಾಮಂದಿರದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಿತ್ತು.
ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಜûರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಬೆಳಿಗ್ಗೆ 11.30 ಗಂಟೆಗೆ ನಿಗದಿ ಯಾಗಿತ್ತಾದರೂ, 15 ನಿಮಿಷ ತಡವಾಗಿ, 11.45 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.30 ಗಂಟೆಗೆ ಮುಕ್ತಾಯಗೊಂಡಿತು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಕಾರ್ಯಕ್ರಮವನ್ನು ದೀಪ ಬೆಳಗಿ ಸುವ ಮೂಲಕ ಉದ್ಘಾಟಿಸಿ, ನಂತರ ಟಿಪ್ಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಟಿಪ್ಪು ಸುಲ್ತಾನರ ಸಾಧನೆ, ಶೌರ್ಯ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ಕೊಂಡಾಡಿದರು.
ಶಾಸಕ ತನ್ವೀರ್‍ಸೇಟ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಮೇಯರ್ ಗಳಾದ ಎ.ಆರಿಫ್ ಹುಸೇನ್, ಹೆಚ್.ಎನ್. ಶ್ರೀಕಂಠಯ್ಯ, ಆಯೂಬ್‍ಖಾನ್, ಮಾಜಿ ಉಪ ಮೇಯರ್ ಪುಷ್ಪಲತಾ ಜಗನ್ನಾಥ್, ಪತಂಜಲಿ ಯೋಗ
ಶಿಕ್ಷಣ ಕೇಂದ್ರದ ಪ್ರಕಾಶ ಯೋಗಿ, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಬ್ರಾಹ್ಮಣ ಸಂಘದ ಕೆ.ರಘುರಾಂ, ಕಾರ್ಪೋರೇಟರ್‍ಗಳಾದ ಕೆ.ವಿ.ಶ್ರೀಧರ್, ಶಾಂತಕುಮಾರಿ, ಅನ್ವರ್‍ಪಾಷಾ, ಶೌಕತ್ ಪಾಷ, ಸೋಹಬ್‍ಖಾನ್, ಅಫ್ತಾಬ್ ಅನ್ವರ್ ಬೇಗಂ, ಹಮ್ಜತ ಪಾಷಾ ಸೇರಿದಂತೆ ಹಲವು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜ್ಯೋತಿ, ಉಪವಿಭಾಗಾಧಿಕಾರಿ ಶಿವೇಗೌಡ, ತಹಸೀಲ್ದಾರ್ ಟಿ.ರಮೇಶ್‍ಬಾಬು, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕೆ.ಆರ್. ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಡಿ.ಉಮಾಶಂಕರ್ ಟಿಪ್ಪು ಸುಲ್ತಾನ್ ಕುರಿತು ಪ್ರಧಾನ ಭಾಷಣ ಮಾಡಿದರು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಭಾರೀ ಭದ್ರತೆ: ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಬಹುದೆಂಬ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕಲಾಮಂದಿರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಕಲಾಮಂದಿರದ ಪ್ರವೇಶದ್ವಾರದಲ್ಲಿ ಎರಡು ಮೆಟಲ್ ಡೋರ್ ಡಿಟೆಕ್ಟರ್‍ಗಳನ್ನು ಅಳವಡಿಸಿ ಪ್ರತಿಯೊಬ್ಬರನ್ನೂ ಪೊಲೀಸರು ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದರು. ಕಲಾಮಂದಿರದ ಒಳ ಆವರಣ, ವೇದಿಕೆ, ಹೊರಾಂಗಣ ಹಾಗೂ ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ 19 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸುಚಿತ್ರಾ ಕಲಾ ಗ್ಯಾಲರಿ ಬಳಿ ಟಿವಿಗಳಿರಿಸಿ ಕ್ಯಾಮರಾಗಳು ಸೆರೆ ಹಿಡಿದ ಲೈವ್ ದೃಶ್ಯಾವಳಿಗಳನ್ನು ಪೊಲೀಸರು ವೀಕ್ಷಿಸುತ್ತಿದ್ದರು. ಮೊಬೈಲ್ ಕಮಾಂಡ್‍ಸೆಂಟರ್ ವಾಹನ, ಅಶ್ವಾರೋಹಿ ದಳ, ಚಾಮುಂಡಿ ಕಮಾಂಡೋ ಪಡೆ, ಶ್ವಾನ ದಳ, ಕೆಎಸ್‍ಆರ್‍ಪಿ, ಸಿಎಆರ್ ತುಕಡಿಗಳು ಸೇರಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಡಿಸಿಪಿಗಳಾದ ಡಾ.ಎನ್.ವಿಷ್ಣುವರ್ಧನ, ಡಾ.ವಿಕ್ರಂ ವಿ.ಅಮಟೆ, ಎನ್.ಆರ್.ಉಪವಿಭಾಗದ ಎಸಿಪಿ ಸಿ.ಗೋಪಾಲ್ ಸ್ಥಳದಲ್ಲಿ ಹಾಜರಿದ್ದು, ಬಂದೋಬಸ್ತ್ ಮೇಲ್ವಿಚಾರಣೆ ನಡೆಸಿದರು. ಜಯಲಕ್ಷ್ಮಿಪುರಂ ಠಾಣೆ ಇನ್‍ಸ್ಪೆಕ್ಟರ್ ಪ್ರಕಾಶ ಸೇರಿ ಐವರು ಪೊಲೀಸ್ ಇನ್‍ಸ್ಪೆಕ್ಟರ್‍ಗಳೂ ಭದ್ರತೆಗೆ ನಿಯೋಜನೆಗೊಂಡಿದ್ದರು. ಮೈಸೂರು ನಗರದಾದ್ಯಂತ ಎಲ್ಲೂ ಮೆರವಣಿಗೆ, ಪ್ರತಿಭಟನೆ, ಇನ್ನಿತರೆ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಒಟ್ಟಾರೆ ತೀವ್ರ ಆತಂಕ ಸೃಷ್ಟಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಮೈಸೂರಿನಲ್ಲಿ ಶಾಂತಿಯುತ ಹಾಗೂ ಯಶಸ್ವಿಯಾಗಿ ನೆರವೇರಿತು.
ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದ ಟಿಪ್ಪು ಅಪ್ರತಿಮ ದೇಶಭಕ್ತ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಗುಣಗಾನ
ಮೈಸೂರು: ರಾಜ್ಯಾದ್ಯಂತ ಹಿಂದೂ ದೇವಾಲಯಗಳನ್ನು ಜೀರ್ಣೋ ದ್ದಾರ ಮಾಡಿ, ಸಂರಕ್ಷಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಓರ್ವ ಅಪ್ರತಿಮ ದೇಶ ಭಕ್ತರಾಗಿದ್ದರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಗುಣಗಾನ ಮಾಡಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಇಂದು ನಡೆದ 269ನೇ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶೃಂಗೇರಿಯ ಶಾರದಾಂಭ ದೇಗುಲ ಸೇರಿದಂತೆ ಹಲವು ಹಿಂದೂ ದೇವಾಲಯಗಳನ್ನು ಜೀರ್ಣೋ ದ್ದಾರ ಮಾಡಿ ಸಂರಕ್ಷಿಸಿದ ಟಿಪ್ಪು ಸುಲ್ತಾನ್, ದೇಶ ರಕ್ಷಣೆಗಾಗಿ 9 ವರ್ಷಗಳ ಕಾಲ ಯುದ್ಧ ಮಾಡಿ ಪ್ರಾಣತ್ಯಾಗ ಮಾಡಿದ ಮಹಾ ದೇಶಭಕ್ತ ಎಂದು ಬಣ್ಣಿಸಿದರು. ತನ್ನ ಆಳ್ವಿಕೆಯಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದರಲ್ಲದೆ, ಉಳುವವನಿಗೆ ಭೂಮಿ ಕೊಡಿಸಿದ್ದರು. ಕೆರೆಕಟ್ಟೆಗಳ ಅಭಿವೃದ್ಧಿ ಯೋಜನೆ
ಜಾರಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶ ರಕ್ಷಣೆಗಾಗಿ ಮಾಡಿದ ಅವರ ಸೇವೆ ಅವಿಸ್ಮರಣೀಯ ಎಂದರು. 1750ರ ನವೆಂಬರ್ 10ರಂದು ಜನಿಸಿದ ಟಿಪ್ಪು, ತಂದೆ ಹೈದರಾಲಿಯರೊಂದಿಗೆ ಬೆರೆತು ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಮೈಗೂಡಿಸಿಕೊಂಡಿದ್ದರಲ್ಲದೆ, ಯುದ್ಧ ಕೌಶಲ್ಯ ಕರಗತ ಮಾಡಿಕೊಂಡು ತಮ್ಮ ಅಧಿಕಾರಾವಧಿಯಲ್ಲಿ ದೇಶ ಸಂರಕ್ಷಣೆಗಾಗಿ 9 ವರ್ಷಗಳ ಕಾಲ ಯುದ್ಧ ಮಾಡಿ ಪ್ರಾಣತ್ಯಾಗ ಮಾಡಿದ ಅಪರೂಪದ ದೊರೆ ಎಂದೂ ಜಿ.ಟಿ.ದೇವೇಗೌಡರು ಇದೇ ವೇಳೆ ನುಡಿದರು. ಸರ್ವಜನಾಂಗಕ್ಕೂ ಶಾಂತಿ ಸಂದೇಶ ಸಾರುವ ಕುವೆಂಪು ಅವರ ನಾಡಗೀತೆಯ ಸಾಲುಗಳಂತೆ ಎಲ್ಲಾ ಜಾತಿ-ಧರ್ಮ ಪಂಗಡಗಳ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಸರ್ಕಾರ ಆಚರಿಸುತ್ತಾ ಬಂದಿರುವುದು ನಾಡಿನ ಶಾಂತಿಯ ಸಂಕೇತವಾಗಿದೆ ಎಂದ ಅವರು, ಇಂದು ವೇದಿಕೆ ಮೇಲಿರುವ ಗಣ್ಯರೇ ಒಟ್ಟಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ದೇಶದ 130 ಕೋಟಿ ಜನರು ಒಪ್ಪಿ ಪ್ರಜಾಪ್ರಭುತ್ವದಡಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಕಾರ್ಯನಿರ್ವಹಿಸುವುದನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದ ಜಿ.ಟಿ.ದೇವೇ ಗೌಡರು, ಡಾ.ಅಂಬೇಡ್ಕರ್, ಬಸವಣ್ಣ, ಜಗಜೀವನ್ ರಾಮ್, ವಾಲ್ಮೀಕಿ, ಕನಕ, ವಿಶ್ವಕರ್ಮ, ಕೆಂಪೇಗೌಡರಂತಹ ಮಹಾ ವ್ಯಕ್ತಿಗಳ ಜಯಂತಿಯಂತೆ ಟಿಪ್ಪು ಜಯಂತಿಯನ್ನೂ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಇದು ಸರ್ವ ಧರ್ಮ ಸಮನ್ವಯದ ಸಂಕೇತವಾಗಿದೆ ಎಂದರು. ತಾಳ್ಮೆ, ಪ್ರೀತಿ, ಸಹಬಾಳ್ವೆಗೆ ಮೈಸೂರು ಖ್ಯಾತಿಯಾಗಿದೆ. ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್, ಯೋಗ ಗುರು ಪ್ರಕಾಶ್ ಯೋಗಿ, ಬ್ರಾಹ್ಮಣ ಸಮಾಜದ ಕೆ.ರಘುರಾಂ, ಮುಸ್ಲಿಂ ಸಮುದಾಯದ ತನ್ವೀರ್ ಸೇಠ್ ಎಲ್ಲರೂ ಸೇರಿ ಟಿಪ್ಪು ಜಯಂತಿ ಆಚರಿಸುತ್ತಿರುವುದೇ ಬಾಂಧವ್ಯಕ್ಕೆ ಸಾಕ್ಷಿ ಎಂದ ಜಿ.ಟಿ.ದೇವೇಗೌಡರು, ರಾಜಕಾರಣಕ್ಕಾಗಿ ಜಾತಿ, ಧರ್ಮ ಮುಂದಿಟ್ಟುಕೊಂಡು ಟಿಪ್ಪು ಜಯಂತಿ ವಿರೋಧಿಸುವುದರಿಂದ ಶಕ್ತಿ ಬರುವುದಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಜಾತೀಯತೆಯಿಂದ ಓಟು ಸಿಗುವುದಿಲ್ಲ. ಎಲ್ಲರೂ ಈಗ ವಿದ್ಯಾವಂತರಾಗಿದ್ದಾರೆ. ಕೋಮುವಾದದಿಂದ ಮತ ಗಳಿಸಲು ಆಗುವುದಿಲ್ಲ. ಮುಂದೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಟಾಂಗ್ ನೀಡಿದ ಸಚಿವರು, ಉದ್ವೇಗದಿಂದ ಸಮಾಜದ ಶಾಂತಿ ಕದಡಿದರೆ ಜನ ನಿಮಗೆ ಬೆಂಬಲ ನೀಡಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.