ಅರಮನೆಯಲ್ಲಿ ಇಂದು ಆಯುಧ ಪೂಜೆ
ಮೈಸೂರು

ಅರಮನೆಯಲ್ಲಿ ಇಂದು ಆಯುಧ ಪೂಜೆ

October 7, 2019

ಮೈಸೂರು, ಅ.6(ಎಂಟಿವೈ) – ಅರಮನೆಯಲ್ಲಿ ನಾಳೆ (ಅ.7) ಬೆಳಿಗ್ಗೆ 6.15ರಿಂದ 9ರವರೆಗೆ ಚಂಡಿ ಹೋಮ, ಆಯುಧ ಪೂಜೆ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ.

ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಕಳೆದ ಎಂಟು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯ ಜರುಗುತ್ತಿದೆ. ಅದರ ಅಂಗವಾಗಿ ನಾಳೆ ಬೆಳಿಗ್ಗೆ 6.15ಕ್ಕೆ ಅರಮನೆಯ ಒಳಾವರಣದಲ್ಲಿ ಚಂಡಿ ಹೋಮ ಆರಂಭವಾಗಲಿದೆ.

6.45ಕ್ಕೆ ಆನೆ ಸವಾರಿ ಬಾಗಿಲಿಗೆ ಪಟ್ಟದ ಆನೆ ವಿಕ್ರಮ, ಸಾಲಾನೆ ಗೋಪಿ, ಅರಮನೆ ಆನೆಗಳಾದ ಸೀತಾ, ರೂಬಿ, ಚಂಚಲ್, ಪ್ರೀತಿ ಆನೆಯೊಂದಿಗೆ ಪಟ್ಟದ ಹಸು, ಪಟ್ಟದ ಕುದುರೆ, ಒಂಟೆಯನ್ನು ಕರೆತರಲಾಗುತ್ತದೆ.

ನಂತರ ಅವುಗಳೊಂದಿಗೆ ಖಾಸ ಆಯುಧವನ್ನು ಕೋಡಿ ಸೋಮೇಶ್ವರ ದೇವಾಲಯದತ್ತ ಕರೆದೊಯ್ಯಲಾಗುತ್ತದೆ. ಅಲ್ಲಿ ಕೋಡಿ ಸೋಮೇಶ್ವರ ಹಾಗೂ ಕೋಡಿ ಭೈರವಸ್ವಾಮಿ ದೇವಾ ಲಯಕ್ಕೆ ಪೂಜೆ ಸಲ್ಲಿಸಿ, ಬಾವಿ ಹಾಗೂ ಕಳಸಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 7.40ರೊಳಗೆ ಕಳಸ ಹೊತ್ತ ಮುತೈದೆ ಯರೊಂದಿಗೆ ಪಟ್ಟದ ಆನೆ, ಕುದುರೆ, ಹಸು, ಒಂಟೆಯೊಂದಿಗೆ ಖಾಸ ಆಯುಧ ಹಾಗೂ ದೇವರನ್ನು ಅರಮನೆಯ ಆನೆ ಬಾಗಿಲಿಗೆ ತರಲಾಗುತ್ತದೆ. ಬಳಿಕ ಅರಮನೆಯ ಪುರೋ ಹಿತರು ಅದನ್ನು ಸ್ವೀಕರಿಸಿ, ಕಲ್ಯಾಣ ಮಂಟಪಕ್ಕೆ ಕೊಂಡೊ ಯ್ಯಲಿದ್ದಾರೆ. ಬಳಿಕ 9.30ಕ್ಕೆ ಪಟ್ಟದ ಆನೆ, ಹಸು, ಕುದುರೆ ಯನ್ನು ಸವಾರಿ ತೊಟ್ಟಿಗೆ ಕರೆತರಲಾಗುತ್ತದೆ.

ಬೆಳಿಗ್ಗೆ 10.10ರಿಂದ 10.35ರೊಳಗೆ ಕಲ್ಯಾಣಮಂಟಪದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಒಳಗೊಂಡಂತೆ ಆಯುಧ ಪೂಜೆ ನೆರವೇರಿಸಲಿದ್ದಾರೆ. ನಂತರ ಸವಾರಿ ತೊಟ್ಟಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸುತ್ತಿದ್ದ ಎಲ್ಲಾ ವಾಹನಗಳನ್ನು ಪೂಜಿಸಿ, ಪುಷ್ಪಾರ್ಚನೆ ಮಾಡಲಾಗುತ್ತದೆ. ಈ ವೇಳೆ ಅರಮನೆಯ ಮೇಲ್ಮಡಿಯ ಕಿಟಿಕಿಯಿಂದ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ರಾಜವಂಶಸ್ಥರು ಆಯುಧ ಪೂಜೆಯನ್ನು ವೀಕ್ಷಿಸಲಿದ್ದಾರೆ.

ಬಳಿಕ ಸಂಜೆ ಖಾಸಗಿ ದರ್ಬಾರ್ ಬಳಿಕ ಸಿಂಹ ವಿಸರ್ಜನೆ ಮಾಡಲಾಗುತ್ತದೆ. ಅಲ್ಲದೆ ಖಾಸ ದೇವರ ಮನೆಯಲ್ಲಿ ಯದು ವೀರರು ಕಂಕಣ ವಿಸರ್ಜನೆ ಮಾಡಲಿದ್ದಾರೆ. ವಾಣಿವಿಲಾಸ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಕಂಕಣ ವಿಸರ್ಜಿಸಲಿದ್ದಾರೆ. ಇದಾದ ಬಳಿಕ ಅಮಲ ದೇವತಾ ಸನ್ನಿಧಿಯಲ್ಲಿ ದರ್ಶನ ಪಡೆಯಲು ಆಗಮಿಸುವರು. ರಾತ್ರಿ ವರೆಗೂ ವಿವಿಧ ಧಾರ್ಮಿಕ ಕಾರ್ಯ ಜರುಗಲಿದೆ.

Translate »