ಬಿಎಸ್‍ವೈ ಬೆನ್ನಿಗೆ  ಮಠಾಧೀಶರು
News

ಬಿಎಸ್‍ವೈ ಬೆನ್ನಿಗೆ ಮಠಾಧೀಶರು

July 21, 2021

ರಾಜ್ಯದ ಈ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಮಾಡಬಾರದು. ಸಿಎಂ ಬದಲಾವಣೆಗೆ ಈಗ ಪರಿಸ್ಥಿತಿ ಅನುಕೂಲಕರವಾಗಿಲ್ಲ. ನಾಯಕತ್ವ ಬದಲಾವಣೆ ಈಗ ಸೂಕ್ತವಲ್ಲ. ಇಷ್ಟು ಸಮಯ ಯಡಿಯೂರಪ್ಪ ಚೆನ್ನಾಗಿ ನಾಯಕತ್ವ ಮಾಡಿದ್ದಾರೆ. ಕೋವಿಡ್ ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿ ದ್ದಾರೆ. ಬಿಜೆಪಿ ಪಕ್ಷದ ಆಂತರಿಕ ವಿಚಾರ ನಮಗೆ ಗೊತ್ತಿಲ್ಲ. ಅಲ್ಲಿ ಏನು ಚರ್ಚೆಯಾಗಿದೆ ಎಂದು ನನಗೆ ಮಾಹಿತಿ ಇಲ್ಲ. -ವಿಶ್ವಪ್ರಸನ್ನತೀರ್ಥರು, ಪೇಜಾವರ ಮಠ

ಬೆಂಗಳೂರು, ಜು.20-ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಅವರನ್ನು ಬದಲಾವಣೆ ಮಾಡಲು ದೆಹಲಿ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಈಗ ಮಠಾಧೀಶರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಇಂದು 30ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಮುಂದಿನ ಎರಡು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಸಮುದಾಯ ಮತ್ತು ಮಠಾಧೀಶರ ಬೆಂಬಲ ನಿಮಗಿದೆ ಎಂಬ ಅಭಯ ನೀಡಿ ದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಬಾಳೆಹೊಸೂರು ಮಠದ ದಿಂಗಾ ಲೇಶ್ವರ ಸ್ವಾಮೀಜಿ, ಯಡಿಯೂರಪ್ಪನವರನ್ನು ಅವಧಿಗೆ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮುಂಬರುವ ದಿನ ಗಳಲ್ಲಿ ಬಿಜೆಪಿಗೆ ಬಹಳ ಕೆಟ್ಟ ದಿನಗಳು ಎದುರಾಗಲಿವೆ. ಯಡಿ ಯೂರಪ್ಪ ಇದ್ದರೆ ಮಾತ್ರ ಬಿಜೆಪಿ, ಇಲ್ಲವಾದರೆ ಎಲ್ಲವೂ ಸರ್ವನಾಶ ವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಈಗ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಶ್ರೀಗಳು, ಇಲ್ಲಿ ಕೇವಲ ಲಿಂಗಾಯಿತರ ಪ್ರಶ್ನೆಯಲ್ಲ. ಬಿಜೆಪಿಗಾಗಿ ಯಡಿಯೂರಪ್ಪ ಸುಮಾರು 4 ದಶಕಗಳ ಕಾಲ ತ್ಯಾಗ ಮಾಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಬದಲಾವಣೆಯ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು. ಈ ಹಿಂದೆಯೂ ಸಹ ಅವರನ್ನು ನಾನಾ ಸಬೂಬು ಮುಂದಿಟ್ಟು ಕೊಂಡು ಬದಲಾವಣೆ ಮಾಡಲಾಗಿತ್ತು. ಈಗಲೂ ಸಹ ಅನಗತ್ಯ ವಿಷಯಗಳನ್ನು ಮುಂದೆ ಮಾಡಿ ಅವರನ್ನು ಬದಲಾಯಿಸಲು ಮುಂದಾಗಿರುವುದು ಸರಿಯಲ್ಲ ಎಂದರು.
ಬೇರೆ ಪಕ್ಷದ ಶಾಸಕರನ್ನು ತಂದು ಸರ್ಕಾರ ಮಾಡಿದ್ದಾರೆ. ನೆರೆ ಮತ್ತು ಕೊರೊನಾ ವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹಾಗಾಗಿ ಯಡಿಯೂರಪ್ಪನವರನ್ನು ಮುಂದು ವರೆಸಿ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತೇವೆ. ಈಗಲೂ ಕಾಲ ಮಿಂಚಿಲ್ಲ. ಒಂದು ವೇಳೆ ವರಿಷ್ಠರು ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಂದೆ ನಿಮಗಾದ ಪರಿಸ್ಥಿತಿಯೇ ಮತ್ತೆ ಮರುಕಳಿಸಲಿದೆ ಎಂದು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದರು. ಒಂದು ವೇಳೆ ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಯತ್ನಗಳು ಮುಂದುವರೆದಲ್ಲಿ ಸಧ್ಯದಲ್ಲೇ ಬೆಂಗಳೂರಿನಲ್ಲಿ 400 ರಿಂದ 500 ಮಠಾಧೀಶರು ಸಭೆ ಸೇರಿ ನಮ್ಮ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಇಂದು ಕೇವಲ ಲಿಂಗಾಯಿತ ಮಠಾಧೀಶರು ಮಾತ್ರ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬಂದಿಲ್ಲ. ಇನ್ನಿತರ ಸಮುದಾಯದ ಸ್ವಾಮೀಜಿಗಳೂ ಬಂದಿದ್ದಾರೆ. ಯಾವ ರಾಜಕೀಯ ಪಕ್ಷಗಳೂ ಸಹ ಲಿಂಗಾಯಿತ ಸಮುದಾಯವನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಈಗ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಇಡೀ ಲಿಂಗಾಯಿತ ಸಮುದಾಯವೇ ಬಿಜೆಪಿಯಿಂದ ದೂರವಾಗಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ಇದು ನಮ್ಮ ಹೇಳಿಕೆ ಆಲ್ಲ. ರಾಜ್ಯದ ಬಹುಸಂಖ್ಯಾತ ಜನರ ಮಾತುಗಳಿವು ಎಂದು ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದೆಂಬುದು ಬರೀ ಸ್ವಾಮೀಜಿಗಳ ಬಯಕೆಯಲ್ಲ. ಇಡೀ ರಾಜ್ಯದ ಜನರ ಬಯಕೆಯೂ ಆಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಡದಂತೆ ನಾವು ಯಡಿಯೂರಪ್ಪ ಅವರಿಗೆ ಸಂದೇಶ ನೀಡಿದ್ದೇವೆ. ಹಾಗಾಗಿ ಯಡಿಯೂರಪ್ಪ ಅವರು ತಮ್ಮ ಅವಧಿ ಪೂರ್ಣಗೊಳಿಸಲಿ.

ಇಂದು ಕೇವಲ ಎಚ್ಚರಿಕೆ ನೀಡುತ್ತಿದ್ದೇವೆ. ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು.
ಹೈಕಮಾಂಡ್ ಮಾತಿಗೆ ತಲೆ ಬಾಗಬೇಡಿ: ತಮ್ಮ ಭೇಟಿಯ ವೇಳೆ ಯಡಿಯೂರಪ್ಪ ನವರು ನನ್ನ ಕೈಯ್ಯಲ್ಲಿ ಏನೂ ಇಲ್ಲ. ಹೈಕಮಾಂಡ್ ಏನು ಹೇಳುತ್ತದೋ, ಹಾಗೆ ನಾನು ಕೇಳಬೇಕು ಎಂದು ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ಹಂತದಲ್ಲಿ ಹೈಕಮಾಂಡ್ ಮಾತಿಗೆ ನೀವು ತಲೆ ಬಾಗಬೇಡಿ. ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರೆಯಿರಿ. ನಾವೆಲ್ಲಾ ನಿಮ್ಮ ಬೆಂಬಲಕ್ಕೆ ನಿಂತಿದ್ದೇವೆ. ಹೈಕಮಾಂಡ್ ಮೇಲೂ ಒತ್ತಡ ತರುತ್ತೇವೆ ಎಂದು ಮಠಾಧೀಶರು ಅಭಯ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾದ ಮಠಾಧೀಶರಲ್ಲಿ ಬೋವಿ ಮಠದ ಇಮ್ಮಡಿ ಸಿದ್ಧೇಶ್ವರ ಸ್ವಾಮೀಜಿ, ಮಾದಾರ ಮಠದ ಬಸವಮೂರ್ತಿ ಸ್ವಾಮೀಜಿ, ಶಿವಯೋಗಾಶ್ರಮದ ಶರಣ ಬಸವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರಿದ್ದರು.

 

Translate »