ನಟಿಯರಾದ ರಾಗಿಣಿ, ಸಂಜನಾಗೆ ಜಾಮೀನು ನೀಡಬೇಕು, ಡಿಜೆ ಹಳ್ಳಿ ಪ್ರಕರಣದ ಬಂಧಿತರ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಜಡ್ಜ್, ಅಧಿಕಾರಿಗಳ ಸ್ಫೋಟಿಸುವ ಬೆದರಿಕೆ
ಮೈಸೂರು

ನಟಿಯರಾದ ರಾಗಿಣಿ, ಸಂಜನಾಗೆ ಜಾಮೀನು ನೀಡಬೇಕು, ಡಿಜೆ ಹಳ್ಳಿ ಪ್ರಕರಣದ ಬಂಧಿತರ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಜಡ್ಜ್, ಅಧಿಕಾರಿಗಳ ಸ್ಫೋಟಿಸುವ ಬೆದರಿಕೆ

October 20, 2020

ಬೆಂಗಳೂರು, ಅ. 19- ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರಿಗೆ ಜಾಮೀನು ನೀಡಬೇಕು. ಡಿಜೆ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮತ್ತು ಪೊಲೀಸ್ ಆಯುಕ್ತರ ಕಚೇರಿಗೆ ಬೆದರಿಕೆ ಪತ್ರಗಳ ಜೊತೆ ಕಿಡಿಗೇಡಿಗಳು ಸ್ಫೋಟಕವನ್ನು ರವಾನೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್‍ಗೆ ಬಂದಿರುವುದು ಹುಸಿ ಸ್ಫೋಟಕ ವಲ್ಲ, ಅದು ಜೀವಂತ ಡಿಟೋನೇಟರ್ ಎಂದು ತಜ್ಞರು ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಶೋಧನಾ ಕಾರ್ಯಾಚರಣೆ ನಡೆಸಿ ಪ್ರಮಾಣ ಪತ್ರ ನೀಡು ವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ಪೊಲೀಸರಿಗೆ ಸೋಮವಾರ ಸಂಜೆ ಆದೇಶ ನೀಡಿದರು.

ಸಿಟಿ ಸಿವಿಲ್ ನ್ಯಾಯಾಲಯವು ಸುರಕ್ಷಿತವಾಗಿದೆ ಎಂದು ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಕೆಯಾದರೆ ಮಾತ್ರ ಮಂಗಳವಾರ ಕೋರ್ಟ್ ಕಲಾಪಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಹಕಾರದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ರಾತ್ರಿಯಿಡೀ ಸಿಟಿ ಸಿವಿಲ್ ನ್ಯಾಯಾ ಲಯದಲ್ಲಿ ಶೋಧನಾ ಕಾರ್ಯಾ ಚರಣೆ ನಡೆಯಿತು. ಸಿಟಿ ಸಿವಿಲ್ ಕೋರ್ಟ್‍ಗೆ ಬಂದಿರುವ ಪತ್ರದಲ್ಲಿ ಸಂಜನಾ ಮತ್ತು ರಾಗಿಣಿ ಅವರಿಗೆ ಜಾಮೀನು ನೀಡದಿದ್ದರೆ ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶ ರಾದ ಸೀನಪ್ಪ ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅದೇ ರೀತಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಪತ್ರದಲ್ಲಿ ಈ ಪ್ರಕರಣವನ್ನು ಇಷ್ಟಕ್ಕೇ ನಿಲ್ಲಿಸದಿದ್ದರೆ ಪೊಲೀಸ್ ಆಯುಕ್ತ ಕಮಲ್ ಪಂಥ್, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್ ಅವರುಗಳನ್ನು ಸ್ಫೋಟಿಸುವುದಾಗಿ ಬೆದರಿಸಲಾಗಿದ್ದು, ಕಲ್ಲು ಬಂಡೆ ಸ್ಫೋಟಿಸಲು ಬಳಸುವ ಮೂರು ವೈಯರ್‍ಗಳಿಂದ ಸಂಪರ್ಕ ನೀಡಲಾಗಿದ್ದ ಡಿಟೋನೇಟರ್ ರವಾನಿಸಲಾಗಿದೆ. ಇದು ಮಾತ್ರವಲ್ಲದೇ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲರನ್ನೂ ಬಿಡುಬಡೆ ಮಾಡಬೇಕು, ಪ್ರಕರಣದ ತನಿಖೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಸಲಾಗಿದೆ. ಈ ಎರಡೂ ಪತ್ರಗಳು ಕನ್ನಡದಲ್ಲಿ ಬರೆಯಲಾಗಿದ್ದು, ತುಮಕೂರಿನಿಂದ ಪೋಸ್ಟ್ ಮಾಡಲಾಗಿದೆ. ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಸಿ, ಡಿಟೋನೇಟರ್‍ಗೆ ಸಂಪರ್ಕ ಕಲ್ಪಿಸಿದ್ದ ವೈಯರ್‍ಗಳನ್ನು ತೆಗೆಯಲಾಗಿದೆ. ನ್ಯಾಯಾಲಯದಲ್ಲಿ ದೊರೆತದ್ದು ಜೀವಂತ ಡಿಟೋನೇಟರ್ ಆಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಸಂಜೆ ವೇಳೆಗೆ ಬಾಂಬ್ ನಿಷ್ಕ್ರಿಯ ದಳದ ತಜ್ಞರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣಪತ್ರ ಸಲ್ಲಿಸಿದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಸಂಪೂರ್ಣವಾಗಿ ಶೋಧನಾ ಕಾರ್ಯಾಚರಣೆ ನಡೆಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಶೋಧನಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

 

Translate »