ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡಿ ಸರ್ಕಾರದ ಆದೇಶ
ಮೈಸೂರು

ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡಿ ಸರ್ಕಾರದ ಆದೇಶ

April 7, 2020

ಕೊರೊನಾ ಸೋಂಕಿತರ ಹೆಚ್ಚಳ ಹಿನ್ನೆಲೆಯಲ್ಲಿ  ಮೈಸೂರಿಗೆ ಅನ್ವಯಿಸುವುದು ಅನುಮಾನ
ಮೈಸೂರು, ಏ.6(ಪಿಎಂ)-ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ತಯಾರಿಕೆ, ಸಾಗಣೆ ಮತ್ತು ಚಿಲ್ಲರೆ ಮಾರಾಟಕ್ಕೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಅಗತ್ಯ ವಸ್ತುಗಳ ಪೂರೈಕೆ ಮತ್ತು ಸಾಗಣೆ ಜಾಲದ ನೋಡಲ್ ಅಧಿಕಾರಿ ರಾಜೇಂದ್ರ ಕಟಾರಿಯಾ, ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾ ಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಬೇಕರಿ ಉತ್ಪನ್ನಗಳು ಮತ್ತು ಸಂಬಂಧಿತ ತಿನಿಸುಗಳನ್ನು ರೋಗಿಗಳು, ವಯೋ ವೃದ್ಧರು ಹಾಗೂ ಮಕ್ಕಳು ಸೇವನೆ ಮಾಡುತ್ತಾರೆ. ಹೀಗಾಗಿ ಇದು ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರಲಿದೆ. ಈ ತಿನಿಸುಗಳ ತಯಾರಿಕೆ ಘಟಕಗಳ ಕಾರ್ಯ ನಿರ್ವಹಣೆಗೆ ಸರ್ಕಾರದ ಅನುಮತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಘಟಕಗಳು ತಮ್ಮ ಉದ್ಯೋಗಿಗಳ ಆರೋಗ್ಯ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪಾರ್ಸೆಲ್ ಸೇವ ಮಾತ್ರ ಒದಗಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ಉತ್ಪಾದನೆ, ಸರಬರಾಜಿನಲ್ಲಿ ಕನಿಷ್ಠ ಸಿಬ್ಬಂದಿ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜೊತೆಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾರ್ಗಸೂಚಿಗಳು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲಾ ಉದ್ಯೋಗಿಗಳು ಹಾಗೂ ಗ್ರಾಹಕರು ಘಟಕಗಳನ್ನು ಪ್ರವೇಶಿಸುವ ಮುನ್ನ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುದ್ಧೀಕರಿಸಿಕೊಳ್ಳಬೇಕು. ಎಲ್ಲಾ ಕೆಲಸಗಾರರಿಗೆ ಮಾಸ್ಕ್ ವ್ಯವಸ್ಥೆ ಮಾಡಿ, ಅವರು ಧರಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Translate »