ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಗೈಡ್‍ಗಳಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಗೈಡ್‍ಗಳಿಗೆ ದಿನಸಿ ಕಿಟ್ ವಿತರಣೆ

April 7, 2020

ಮೈಸೂರು,ಏ.6(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ದಿನದ ಸಂಪಾದನೆಯಿಲ್ಲದೆ ಕಂಗೆಟ್ಟಿರುವ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳಿರುವ ದಿನಸಿ ಕಿಟ್ ಅನ್ನು ವಿತರಿಸಲಾಯಿತು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸೂಚನೆ ಮೇರೆಗೆ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಪ್ರವಾಸಿ ಗೈಡ್(ಮಾರ್ಗದರ್ಶಿ)ಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಮೈಸೂರಲ್ಲಿ 45 ಮಂದಿ ನೋಂದಾಯಿತ ಗೈಡ್‍ಗಳಿದ್ದು, ಅವರಿಗೆ 10 ಕೆಜಿ ಅಕ್ಕಿ, ತೊಗರಿಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ರವೆ, ಅವಲಕ್ಕಿ, ಉಪ್ಪು, ಆಲೂಗಡ್ಡೆ, ಈರುಳ್ಳಿ ತಲಾ ಒಂದೊಂದು ಕೆಜಿ ಹಾಗೂ ಒಂದು ಲೀಟರ್ ಅಡುಗೆ ಎಣ್ಣೆಯನ್ನು ಸೋಮವಾರ ಮಧ್ಯಾಹ್ನ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಆವರಣದಲ್ಲಿ ಕೆಎಸ್‍ಟಿಡಿಸಿ ಪ್ರಾದೇಶಿಕ ವ್ಯವಸ್ಥಾಪಕ ಯು.ಬಿ.ಉದಯ್‍ಕುಮಾರ್ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರವಾಸೋ ದ್ಯಮ ಇಲಾಖೆ ಹಾಗೂ ಕೆಎಸ್‍ಟಿಡಿಸಿ ಜಂಟಿಯಾಗಿ ಅಧಿಕೃತ ಪ್ರವಾಸಿ ಗೈಡ್‍ಗಳಿಗೆ ಆಹಾರ ಪದಾರ್ಥ ನೀಡ ಲಾಗುತ್ತಿದೆ. ಮೈಸೂರಿನಲ್ಲಿ 45 ಗೈಡ್ ಮಾತ್ರವಲ್ಲದೆ, ಶ್ರೀರಂಗಪಟ್ಟಣ, ಬೇಲೂರು, ಹಳೇಬೀಡು, ಚಿತ್ರದುರ್ಗ, ಬಾದಾಮಿ, ಹಂಪಿ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಗೈಡ್‍ಗಳಿಗೂ ದಿನಸಿ ಕಿಟ್ ನೀಡು ತ್ತಿರುವುದಾಗಿ ತಿಳಿಸಿದರು.

ಸ್ಕಾಲ್ ಮೈಸೂರು ಉಪಾಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಪ್ರವಾಸಿ ಗೈಡ್‍ಗಳಿಗೆ ಆಹಾರ ಪದಾರ್ಥ ನೀಡಿರುವುದು ಶ್ಲಾಘನೀಯ. ಆದರೆ ಪ್ರವಾಸಿ ವಾಹನಗಳ ಚಾಲಕರು ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಯಾ ದಿನದ ಸಂಪಾ ದನೆಯನ್ನೇ ಪ್ರವಾಸಿ ವಾಹನಗಳ ಚಾಲಕರು ಅವ ಲಂಬಿಸಿದ್ದರು. ಆದರೆ ಕಳೆದ 2 ತಿಂಗಳಿಂದ ಪ್ರವಾಸಿ ಗರಿಲ್ಲದೆ ವಾಹನ ಚಾಲಕರು ಸಂಕಷ್ಟಕೀಡಾಗಿದ್ದಾರೆ. ಮೈಸೂರಲ್ಲಿ 800ಕ್ಕೂ ಹೆಚ್ಚು ಪ್ರವಾಸಿ ವಾಹನಗಳ ಚಾಲಕರಿದ್ದಾರೆ. ಇವರಿಗೂ ಅಗತ್ಯ ವಸ್ತುಗಳನ್ನು ಕೊಡುವುದಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗ ಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್, ಪ್ರವಾಸಿ ಗೈಡ್ ಸಂಘದ ಅಧ್ಯಕ್ಷ ಅಶೋಕ್‍ಕುಮಾರ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಗೌರ ವಾಧ್ಯಕ್ಷ ಸಿ.ಎ.ಜಯಕುಮಾರ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವಲಿಂಗಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »