ಜಿಲ್ಲಾದ್ಯಂತ ಸಂಭ್ರಮ-ಸಡಗರದ ಬಕ್ರೀದ್ ಆಚರಣೆ
ಮಂಡ್ಯ

ಜಿಲ್ಲಾದ್ಯಂತ ಸಂಭ್ರಮ-ಸಡಗರದ ಬಕ್ರೀದ್ ಆಚರಣೆ

August 23, 2018
  • ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ
  • ಪರಸ್ಪರ ಶುಭಾಶಯ ವಿನಿಮಯ
  • ಕೊಡಗು ಸಂತ್ರಸ್ತರಿಗೆ ನೆರವಾಗಲು ಸಲಹೆ

ಮಂಡ್ಯ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಬುಧ ವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.

ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಿಸಲಾಯಿತು. ಸಕ್ಕರೆ ನಾಡು ಮಂಡ್ಯದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಶುಭ ಕೋರುತ್ತಿದ್ದ ದೃಶ್ಯ ಕಂಡು ಬಂತು. ಬೆಳಗಿನಿಂದಲೇ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಯಲ್ಲಿ ತೆರಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕೆ.ಆರ್.ಪೇಟೆ ವರದಿ: ತಾಲೂಕಿನ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪವಿತ್ರ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಣೆ ಮಾಡಿದರು. ಹಳೇ ಮಸೀದಿಯಿಂದ ಮೆರವಣಿಗೆ ಯಲ್ಲಿ ಹೊರಟ ಮುಸ್ಲಿಂ ಬಾಂಧವರು ಈದ್ಗಾ ಮೈದಾನದವ ರೆಗೆ ಧಾರ್ಮಿಕ ಗೀತೆ ಮತ್ತು ಅಲ್ಲಾ ಪರ ಘೋಷಣೆಗಳನ್ನು ಕೂಗುತ್ತಾ ಈದ್ಗಾ ಮೈದಾನ ತಲುಪಿದರು. ಬಳಿಕ, ಪರಸ್ಪರ ಬಕ್ರೀದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಧರ್ಮ ಗುರುಗಳಾದ ನೂರುಲ್ಲಾ ಷರೀಫ್ ಅವರು ಬಕ್ರೀದ್ ಹಬ್ಬದ ಸಂದೇಶವನ್ನು ನೀಡುತ್ತಾ ಬಕ್ರೀದ್ ಹಬ್ಬವು ದಾನ-ಧರ್ಮದ ಸಂಕೇತವಾಗಿದೆ. ಪ್ರತಿ ಮುಸ್ಲಿಂ ಬಂಧುಗಳು ಏನಾದರೊಂದು ವಸ್ತು ಅಥವಾ ಹಣವನ್ನು ಬಡವರಿಗೆ ದಾನವನ್ನು ನೀಡುವ ಮೂಲಕ ಸಂತೋಷ ಹೊಂದುವುದು ಸಂಪ್ರದಾಯವಾಗಿದೆ ಎಂದರು.

ಕೊಡಗು ಜಿಲ್ಲೆಯ ಜನರು ಭಾರೀ ಮಳೆಯಿಂದ ಸಂತ್ರಸ್ತ ರಾಗಿದ್ದಾರೆ. ಅವರ ನೆರವಿಗೆ ನಿಲ್ಲಬೇಕಾದುದು ಎಲ್ಲರ ಕರ್ತವ್ಯ ವಾಗಿದೆ. ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯವನ್ನು ಕೊಡಗು ಜಿಲ್ಲೆಯ ಸಂತ್ರಸ್ತ ಜನರಿಗೆ ನೀಡಲು ಮುಂದಾ ಗವುದು ಅಗತ್ಯವಿದೆ. ಈ ಮೂಲಕ ಕೊಡಗು ಜಿಲ್ಲೆಯ ಜನರಿಗೆ ಧೈರ್ಯ ತುಂಬಬೇಕು ಎಂದು ಹೇಳಿದರು.

ತಾಲೂಕಿನ ಸಿಂಧುಘಟ್ಟ, ಮಂದಗೆರೆ, ಸಂತೇಬಾಚಹಳ್ಳಿ, ಕಿಕ್ಕೇರಿ, ಆಲಂಬಾಡಿ ಕಾವಲು, ಅಕ್ಕಿಹೆಬ್ಬಾಳು, ತೆಂಡೇಕೆರೆ ಮತ್ತಿತರರ ಕಡೆಗಳಲ್ಲಿಯೂ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.

ಕಿಕ್ಕೇರಿ ವರದಿ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅಲ್ಲಾನನ್ನು ಪ್ರಾರ್ಥಿಸುವ ಮೂಲಕ ಬಕ್ರೀದ್ ಹಬ್ಬದ ಸಂಭ್ರಮವನ್ನು ಆಚರಿಸಿದರು. ಪಟ್ಟಣದಲ್ಲಿನ ಕೋಟೆ ಆಂಜನೇಯ, ಗಣಪತಿ ದೇಗುಲದ ಬಳಿ ಇರುವ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಸೇರಿ ಅಲ್ಲಾನ ಪ್ರಾರ್ಥನೆಯನ್ನು ಆರಂಭಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಾದ ಅಂಗಡಿಬೀದಿ, ಮಂದಗೆರೆ ರಸ್ತೆಯಲ್ಲಿ ಹೊಸಬಟ್ಟೆ ಧರಿಸಿ ಕೊಂಡು ಅಲ್ಲಾನ ಪ್ರಾರ್ಥಿಸುತ್ತ ಮೆರವಣಿಗೆಯಲ್ಲಿ ಸಾಗಿದರು.

ಈದ್ಗಾ ಮೈದಾನದಲ್ಲಿ ಧರ್ಮಗುರು ಫಕ್ರೀಯಾ ಆಲಂ ಅವರು ಧಾರ್ಮಿಕ ಗ್ರಂಥವಾದ ಕುರಾನ್ ಪಠಣೆ ಮಾಡಿದರು. ಕೊಡಗು, ಕೇರಳ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಸಾವು-ನೋವು ಪುನಃ ಬಾರದಂತೆ ಪ್ರಾರ್ಥಿಸಿದರು. ಬಳಿಕ, ಮಸ್ಲಿಂ ಸಮುದಾಯದ ಸ್ಮಶಾನಕ್ಕೆ ತೆರಳಿ ಕೆಲಹೊತ್ತು ಹಿರಿಯರು, ಪಿತೃಗಳ ಸಮಾಧಿಗೆ ನಮಿಸಿ, ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.
ಮಕ್ಕಳು, ಯುವಕರು, ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅತಿಥಿಗಳಿಗೆ ಬಕ್ರೀದ್ ಹಬ್ಬದ ಮಾಂಸದೂಟದ ಆತಿಥ್ಯ ನೀಡಲಾಯಿತು. ಮುಖಂಡರಾದ ರಷೀದ್, ರಿಯಾಜ್, ಏಜಸ್, ಇಸೂಫ್‍ಖಾನ್, ಮಹ ಬೂಬ್‍ಪಾಷ, ಜಬ್ಬರ್, ಅಬ್ಬಾಸ್ ಹಾಜರಿದ್ದರು.

ಮದ್ದೂರು ವರದಿ: ಪಟ್ಟಣದ ಈದ್ಗಾ ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಜೊತೆಗೆ ಚಿಕ್ಕ ಚಿಕ್ಕ ಮಕ್ಕಳು ಮತ್ತು ಮುಸ್ಲಿಂ ಬಾಂಧವರು ಹೊಸ ವಸ್ತ್ರ ತೊಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಪಟ್ಟಣದ ಹೊಳೆ ಬೀದಿಯಲ್ಲಿರುವ ಮಸೀದಿಯಿಂದ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರ ಪ್ರಮುಖ ಬೀದಿ ಗಳಲ್ಲಿ ಸಂಚಾರ ಮಾಡಿ ಅಲ್ಲಾನ ಪರ ಘೋಷಣೆಗಳನ್ನು ಕೂಗುತ್ತಾ ಮಳವಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿದರು. ಮುಸ್ಲಿಂ ಗುರುಗಳಾದ ಸೈಯದ್ ಅಹಮದ್, ಮುಖಂಡರಾದ ಫೈರೋಜ್, ಗಿನಿಯೂರ್‍ರಾಮನ್, ನಾಸೀರ್, ಆರೀಪ್, ಅಸ್ಲಂ, ಆದಿಲ್, ಪರ್ವೀಜ್ ಹಾಜರಿದ್ದರು.

ಪಾಂಡವಪುರ ವರದಿ: ಮಹಾಮಳೆಗೆ ತತ್ತರಿಸಿರುವ ಕೊಡಗು ಮತ್ತು ಕೇರಳ ನಿರಾಶ್ರಿತರಿಗಾಗಿ ಇಲ್ಲಿನ ಈದ್ಗಾ ಮೈದಾನ ದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಕ್ರೀದ್ ಹಬ್ಬದ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನ ದಲ್ಲಿ ನಡೆದ ವಿಶೇಷ ಈದ್ ನಮಾಜ್ ಸಲ್ಲಿಕೆ ಸಂದರ್ಭದಲ್ಲಿ ಮೌಲಾನ ಸಲ್ಮಾನ್ ರಝಾ ಮಾತನಾಡಿ, ಕೊಡಗು ಮತ್ತು ಕೇರಳ ನಿರಾಶ್ರಿತರಿಗಾಗಿಯೇ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ ರಲ್ಲದೇ, ಹಬ್ಬದ ಸಂಭ್ರಮವನ್ನು ಕೊಂಚ ಕಡಿಮೆ ಮಾಡಿ ನಿರಾಶ್ರಿತರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

ವಕ್ಫ್ ಸಲಹಾ ಸಮಿತಿ ಸದಸ್ಯ ನಜೀರ್ ಅಹಮದ್, ಮಸ್ಜೀದೇ ಆಲಾ ಮಸೀದಿ ಆಡಳಿತ ಮಂಡಳಿಯ ಮಹಮ್ಮದ್ ಹನೀಫ್, ಸಮಿಯುಲ್ಲಾ ಹಾಜಿ, ಗೌಸ್, ಫಾರೂಖ್, ವಸೀಂ, ಮುಮ್ತಾಜ್, ಮುನಾವರ್, ಜಾಹಿದ್ ಹುಸೇನ್ ಇದ್ದರು.

ಶ್ರೀರಂಗಪಟ್ಟಣ ವರದಿ: ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಬುಧವಾರ ಪಟ್ಟಣದ ಹೊರವಲಯದ ಚಂದಗಾಲು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬಳಿಕ, ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿ ಕೊಂಡರು. ಶ್ರೀರಂಗಪಟ್ಟಣದ ಚಂದಗಾಲು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಈದ್ಗಾ ಮೈದಾನ ಸೇರಿದಂತೆ ಪಾಲಹಳ್ಳಿ, ಹುಲಿ, ಕೆಆರ್‍ಸಾಗರ, ಅರಕೆರೆ, ಕೆ.ಶೆಟ್ಟಹಳ್ಳಿ ಇತರ ಭಾಗದ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ತಮ್ಮ ಹತ್ತಿರದ ಗ್ರಾಮಗಳಿಗೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಆಚರಿಸಿದರು.

Translate »