ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಕೊಡಗು

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ

August 23, 2018

ಕುಶಾಲನಗರ : ಕಳೆದ ಏಳು ದಿನಗಳ ಕಾಲ ಮುಳುಗಡೆ ಯಾಗಿದ್ದ ಜನವಸತಿ ಪ್ರದೇಶಗಳಲ್ಲಿ ಈಗ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗಿದ್ದು, ಕುಶಾಲನಗರ ಪಟ್ಟಣ ಸಹಜ ಸ್ಥಿತಿಗೆ ಮರಳಿದೆ. ಆದರೆ ಕಾವೇರಿ ನದಿ ಹಾಗೂ ಮಳೆಯ ನೀರಿನಿಂದ ಜಲಾವೃತ್ತವಾಗಿದ್ದ ಪ್ರದೇಶಗಳಲ್ಲಿ ಗಿಡ-ಗಂಟೆಗಳು, ಕಸ-ಕಡ್ಡಿಗಳು ಕರಗಿ ನೀರು ಸಂಪೂರ್ಣ ಕಲುಷಿತ ಗೊಂಡಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಕೆಸರುಮಿಶ್ರಿತ ನೀರಿ ನಿಂದ ಬಡಾವಣೆಗಳ ಮನೆ ಹಾಗೂ ರಸ್ತೆಗಳು ಕೆಸರಿ ನಿಂದ ಆವೃತ್ತವಾಗಿವೆ. ಅಲ್ಲದೆ ಜಲಚರ ಜೀವಿಗಳಾದ ಹಾವು, ಚೇಳು, ಮೀನು ಮತ್ತಿತರ ಪ್ರಾಣಿಗಳು ಸತ್ತಿವೆ. ಜನವಸತಿ ಪ್ರದೇಶಗಳಲ್ಲಿ ನೀರು ಸಂಪೂರ್ಣ ಇಳಿಕೆ ಯಾಗಿದ್ದರೂ ಹಳ್ಳಕೊಳ್ಳಗಳಲ್ಲಿ ಮಾತ್ರ ಹಾಗೆಯೇ ನಿಂತಿದೆ. ಈಗ ಸೊಳ್ಳೆ ಹಾವಳಿ ವ್ಯಾಪಕವಾಗಿವೆ.

ಮನೆಗಳನ್ನು ಸ್ವಚ್ಛ ಮಾಡಲು ನೀರಿನ ಕೊರತೆ ಉಂಟಾಗಿದ್ದು, ಹಾನಿಯಾಗಿರುವ ಮನೆಯ ವಸ್ತು ಗಳನ್ನು ನಿವಾಸಿಗಳು ರಸ್ತೆ ಬದಿ ತಂದು ಎಲ್ಲೆಂದರಲ್ಲಿ ರಾಶಿರಾಶಿ ಸುರಿಯುತ್ತಿದ್ದಾರೆ. ಎಲ್ಲಿ ನೋಡಿ ದರೂ ಕಸ ಹಾಗೂ ಕೆಸರುಮಯವಾಗಿ ಗೋಚರಿಸುತ್ತಿವೆ. ಸಂಪೂರ್ಣ ಮುಳುಗಡೆಯಾಗಿದ್ದ ಶ್ರೀಸಾಯಿಬಾಬ ಲೇಔಟ್, ಕುವೆಂಪು ಬಡಾವಣೆ, ರಸಲ್ ಲೇಔಟ್,ಸೀಗಾರಮ್ಮ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ವಿವೇಕಾನಂದ ಬಡಾವಣೆ, ಯೋಗಾ ನಂದ ಬಡಾವಣೆ, ಆದಿ ಶಂಕರಚಾರ್ಯ ಬಡಾವಣೆಗಳ ನಿವಾಸಿಗಳು ಇದೀಗ ತಮ್ಮ ತಮ್ಮ ಮನೆಗಳ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಮನೆಗಳನ್ನು ಕ್ಲೀನ್ ಮಾಡಿದ ನೀರು ಕೂಡ ಅಲ್ಲಿಯೇ ಚರಂಡಿಯಲ್ಲಿ ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿ ಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಉಂಟಾಗಿದೆ.

ಜಿಲ್ಲಾಡಳಿತ ಹಾಗೂ ಸಂಘಸಂಸ್ಥೆಗಳ ಸ್ವಯಂ ಸೇವಕರು ವಿವಿಧೆಡೆ ಬ್ಲೀಚಿಂಗ್ ಪೌಡರ್ ಹಾಗೂ ಫಿನಾಯಿಲ್ ಸಿಂಪಡಣೆ ಮಾಡುತ್ತಿದ್ದರೂ ಭಾಗಶಃ ಪಟ್ಟಣವೇ ಮುಳುಗಡೆಯಾಗಿರುವುದ ರಿಂದ ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಇದರಿಂದ ಬಡಾವಣೆಗಳ ನಿವಾಸಿಗಳಿಗೆ ಎಲ್ಲಿ ಸಂಕ್ರಾಮಿಕ ರೋಗಗಳು ಹರುತ್ತವೆಯೋ ಎಂಬ ಆತಂಕ ಉಂಟಾಗಿದೆ. ಪರಿಹಾರ ಕೇಂದ್ರಗಳಲ್ಲಿ ರುವ ನಿರಾಶ್ರಿತರ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ಘಟಕ ಗಳನ್ನು ಆರಂಭಿಸಲಾಗಿದೆ.ಆದರೆ ಬಡಾವಣೆಗಳನ್ನು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಹರಸಾಹಸ ಮಾಡಬೇಕಾದ ಸ್ಥಿತಿ ಎದುರಾಗಿದೆ.

Translate »