ಮೈಸೂರು, ಜು.೮(ಜಿಎ)- ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕುರಿ ವ್ಯಾಪಾರ ಜೋರಾಗಿದೆ. ಪ್ರಮುಖವಾಗಿ ಬನ್ನಿಮಂಟಪ ಎಲ್‌ಐಸಿ ವೃತ್ತ(ಮಿಲೇನಿಯಂ ಸರ್ಕಲ್)ದಲ್ಲಿ ಕುರಿಗಳ ಭರ್ಜರಿ ವ್ಯಾಪಾರ ನಡೆದಿದ್ದು, ಮೈಸೂರಿನ ವಿವಿಧೆಡೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಕುರಿಗಳನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ.
ಈ ಬಾರಿಯೂ ಮಂಡ್ಯ, ಶ್ರೀರಂಗಪಟ್ಟಣ, ಬನ್ನೂರು, ಪಾಂಡವಪುರ, ಕೆಆರ್‌ಎಸ್, ಮದ್ದೂರು, ತಿ.ನರಸೀಪುರ, ಹೊಳೆನರಸೀಪುರ, ಚಾಮರಾಜನಗರ ಮತ್ತಿತರ ಭಾಗದ ವ್ಯಾಪಾರಿಗಳು ತಾವು ಸಾಕಿದ ವಿವಿಧ ತಳಿಯ ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಬನ್ನೂರು ಕುರಿ, ಬನ್ನೂರು ನಾಟಿ ಕುರಿ ಮತ್ತು ಬಂಡೂರು ಕುರಿಗಳಿಗೆ ಬೇಡಿಕೆ ಹೆಚ್ಚಿದ್ದು, ಬೆಲೆಯೂ ಅಧಿಕವಾಗಿದೆ. ಕೊರೊನಾ ಕಾರಣದಿಂದ ಕಳೆದೆರಡು ವರ್ಷ ಸರಳವಾಗಿ ಹಬ್ಬ ಆಚರಿಸಲಾಗಿತ್ತು. ಆದರೆ ಈ ಸಂಬAಧಿಕರೊಡಗೂಡಿ ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿರುವ ಪರಿಣಾಮ ಕುರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಳೆದ ಬಾರಿ ಬೆಲೆಗಿಂತ ಐದಾರು ಸಾವಿರ ರೂ. ಹೆಚ್ಚಾಗಿದೆ. ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್(ಜು.೧೦) ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವುದರಿಂದ ಮಿಲೇನಿಯಂ ವೃತ್ತ ಮಾತ್ರವಲ್ಲದೆ ಬನ್ನೂರು ರಸ್ತೆ, ತಿ.ನರಸೀಪುರ ರಸ್ತೆ ಸೇರಿದಂತೆ ಮೈಸೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳ ಖಾಲಿ ಸ್ಥಳದಲ್ಲೂ ಕುರಿಗಳ ಮಾರಾಟ ಮಾಡಲಾಗುತ್ತಿದೆ. ಆಯಾ ಭಾಗದ ವ್ಯಾಪಾರಿಗಳು ಹಾಗೂ ಗ್ರಾಹಕರಿಗೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಅಲ್ಲಲ್ಲಿ ಕುರಿಗಳ ಬಿಕರಿ ನಡೆಸಲಾಗುತ್ತಿದೆ. ಕುರಿಯ ಗಾತ್ರ, ವಯಸ್ಸು, ಅದರಿಂದ ಸಿಗಬಹುದಾದ ಮಾಂಸದ ಪ್ರಮಾಣವನ್ನು ಅಂದಾಜಿಸಿ ಬೆಲೆ ಕಟ್ಟಿ, ಕೊಳ್ಳುತ್ತಾರೆ. ಕೆಲವರು ಕುರಿಯ ಬೆನ್ನನ್ನು ಬಿಗಿಯಾಗಿ ಹಿಡಿದು ಮಾಂಸ ಎಷ್ಟು ಸಿಗಬಹುದೆಂದು ಅಂದಾಜಿಸುವುದೂ ಸಾಮಾನ್ಯವಾಗಿದೆ.
ಸೂಕ್ತ ಸ್ಥಳ ನೀಡಿ: ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗಳ ಬಳಿ ವಾಹನ ಹಾಗೂ ಜನದಟ್ಟಣೆ ಸಾಮಾನ್ಯ. ಆದರೆ ಮೈಸೂರು-ಬೆಂಗಳೂರು ಮುಖ್ಯರಸ್ತೆ ಮಿಲೇನಿಯಂ ವೃತ್ತದಲ್ಲಿ ಬಕ್ರೀದ್ ಸಂದರ್ಭದಲ್ಲಿ ಸೃಷ್ಟಿಯಾಗುವ ಸಮಸ್ಯೆ ವಿಭಿನ್ನ. ನಾಲ್ಕು ಕಡೆಗಳಿಂದ ಸಂಚರಿಸುವ ವಾಹನಗಳು ವೃತ್ತ ಬಳಸುವುದು ಕಷ್ಟ ಸಾಧ್ಯವಾಗುತ್ತದೆ. ವೃತ್ತದೆಲ್ಲೆಡೆ ಕುರಿಗಳೇ ಕಾಣುತ್ತವೆ. ಜೊತೆಗೆ ಕೊಳ್ಳುವವರು, ಮಾರುವವರು ಮಾತ್ರವಲ್ಲದೆ ಕುರಿಗಳನ್ನು ನೋಡುವ ಆಸಕ್ತಿವುಳ್ಳವರೂ ಸಿಕ್ಕಲ್ಲಿ ತಮ್ಮ ವಾಹನ ನಿಲ್ಲಿಸಿರುತ್ತಾರೆ. ಕುರಿಗಳನ್ನು ಕರೆತಂದ ವಾಹನಗಳೂ ಅಲ್ಲಲ್ಲೇ ನಿಂತಿರುತ್ತವೆ. ಪರಿಣಾಮ ೧೦-೧೫ ದಿನ ಸಂಜೆ ವೇಳೆ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ಜಿಲ್ಲಾಡಳಿತ ಕುರಿ ವ್ಯಾಪಾರಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ಟ್ರಾಫಿಕ್ ಸಮಸ್ಯೆ ತಪ್ಪುವುದರ ಜೊತೆಗೆ ಸುರಕ್ಷಿತವಾಗಿ ಕುರಿ ವ್ಯಾಪಾರ ನಡೆಸುವುದಕ್ಕೂ ಅನುಕೂಲವಾಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿದರು.