ಐಷರಾಮಿ ಟೆಂಟ್‌ಗಳ ಸೊಬಗು
ಮೈಸೂರು

ಐಷರಾಮಿ ಟೆಂಟ್‌ಗಳ ಸೊಬಗು

July 9, 2022

ತದ ನಂತರವೇ ಖಾಸಗಿಯವರಿಗೆ ವಹಿಸಿಕೊಡಲು ತೀರ್ಮಾನ

ಹೋಟೆಲ್‌ಗೆ ಸೇರಿದ ೫೪ ಎಕರೆಯಲ್ಲಿ ಪ್ರವಾಸೋದ್ಯಮ ಸ್ನೇಹಿ ಟೆಂಟ್ ನಿರ್ಮಾಣಕ್ಕೆ ನಿರ್ಧಾರ

ಬೆಂಗಳೂರು, ಜು.೮(ಕೆಎಂಶಿ)-ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ ಸುಸಜ್ಜಿತ ಹಾಗೂ ಐಷಾರಾಮಿ ಟೆಂಟುಗಳು ತಲೆ ಎತ್ತಲಿವೆ. ಸಮರ್ಪಕ ನಿರ್ವ ಹಣೆ ಇಲ್ಲದೆ ಸೊರಗಿರುವ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಮರು ಜೀವ ಕೊಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಟಾಟಾ ಇಲ್ಲವೆ ವಿಶ್ವದ ಹೆಸರಾಂತ ಹೋಟೆಲ್ ಉದ್ಯಮಕ್ಕೆ ಇದನ್ನು ವಹಿಸಿಕೊಡುವ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟದ ಉಪ ಸಮಿತಿಯ ಸೂಚನೆ ಯಂತೆ ಪ್ರವಾಸೋದ್ಯಮ ಇಲಾಖೆಯು ಲಲಿತಮಹಲ್ ಪ್ಯಾಲೇಸ್ ಹೋಟೆಲನ್ನು ಖಾಸಗಿಯವರಿಗೆ ಹಸ್ತಾಂತರಿಸಲು ವಿಶ್ವ ಮಟ್ಟದ ಟೆಂಡರ್ ಕರೆದಿದೆ. ಹೋಟೆಲ್‌ನಲ್ಲಿ ಕೇವಲ ೫೪ ರೂಮ್‌ಗಳು ಇರುವುದರಿಂದ ಲಾಭದಾಯಕವಲ್ಲವೆಂದು ಯಾವ ಹೋಟೆಲ್ ಉದ್ದಿಮೆದಾರರು ಇದನ್ನು ವಹಿಸಿಕೊಳ್ಳಲು ಬರುತ್ತಿಲ್ಲ. ಈ ಕಾರಣದಿಂದ ಹೋಟೆಲ್ ಆವರಣ ೫೪ ಎಕರೆ ಇದ್ದು, ಪ್ರವಾಸಿಗರನ್ನು ಆಕರ್ಷಿಸುವ,
ಆ ಮೂಲಕ ಹೆಚ್ಚು ಆದಾಯ ಪಡೆಯುವ ದೃಷ್ಟಿಯಿಂದ ೫೪ ಟೆಂಟುಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ರಾಜಸ್ತಾನ ಹಾಗೂ ಮಧ್ಯ ಪ್ರದೇಶದಲ್ಲಿ ಓಬೆರಾಯ್ ಹೋಟೆಲ್ ಸಮೂಹ ಅಲ್ಲಿನ ಪ್ರವಾಸಿ ಕೇಂದ್ರಗಳಲ್ಲಿ ಇಂತಹ ಐಷರಾಮಿ ಟೆಂಟುಗಳನ್ನು ನಿರ್ಮಾಣ ಮಾಡಿದೆ. ಅದೇ ಮಾದರಿಯಲ್ಲಿ ನಾವು ಟೆಂಟ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟು ಹೋಟೆಲ್ ಉದ್ಯಮ ಲಾಭದಾಯವಾಗಿ ನಡೆಯಲು ಅನುವು ಮಾಡಿಕೊಡಲಾಗುವುದು. ಮೇಲ್ನೊಟಕ್ಕೆ ಟೆಂಟು ಎಂದು ಕಂಡು ಬಂದರೂ ಒಳಗೆ ಅತ್ಯಂತ ಭವ್ಯ ಮತ್ತು ಐಷರಾಮಿ ಕೊಠಡಿಯಿಂದ ಕೂಡಿರುತ್ತದೆ. ಲಲಿತ ಮಹಲ್ ಹೋಟೆಲ್‌ನಲ್ಲಿ ಸದ್ಯಕ್ಕಿರುವ ಕೊಠಡಿಗಳು ಮದುವೆಯಂತಹ ಸಮಾರಂಭಗಳಿಗೆ ಬರುವವರಿಗೆ ಸಾಲುತ್ತಿಲ್ಲ ಎಂದ ಅವರು, ಕನಿಷ್ಟ ಪಕ್ಷ ನೂರು ಕೊಠಡಿಗಳ ಸೌಲಭ್ಯವಾದರೂ ಇದ್ದರೆ ಅನುಕೂಲವಾಗುತ್ತದೆ ಎಂದರು. ಲಲಿತ ಮಹಲ್ ವ್ಯಾಪ್ತಿಯಲ್ಲಿ ಒಂದು ಮರವನ್ನೂ ಕಡಿಯದೆ ಇಂತಹ ಟೆಂಟುಗಳನ್ನು ನಿರ್ಮಿಸಲಾಗುವುದು.

ಈಗಂತೂ ಲಲಿತ್ ಮಹಲ್ ಹೋಟೆಲ್ ಪರಿಸ್ಥಿತಿ ಕೆಟ್ಟಿದೆ. ನಾನು ಹೋದಾಗ ಒಂದು ಕಡೆ ಹೋಟೆಲ್‌ನ ಜಂತಿಯೇ ಕುಸಿಯಿತು. ಇದನ್ನು ನೋಡಿದರೆ ಯಾರಿಗಾದರೂ ಹೊಟ್ಟೆ ಉರಿಯಬೇಕು.ಇಂತಹ ಐತಿಹಾಸಿಕ ಹೋಟೆಲ್‌ನ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ನುಡಿದರು.

Translate »