ಬೆಳೆ ಕಾಯುತ್ತಿದ್ದ ರೈತ ಹಾರಿಸಿದ ಗುಂಡು ತಗುಲಿ `ಬಲರಾಮ’ನಿಗೆ ಗಾಯ
ಮೈಸೂರು

ಬೆಳೆ ಕಾಯುತ್ತಿದ್ದ ರೈತ ಹಾರಿಸಿದ ಗುಂಡು ತಗುಲಿ `ಬಲರಾಮ’ನಿಗೆ ಗಾಯ

December 17, 2022

ಮೈಸೂರು/ಹನಗೋಡು, ಡಿ.16(ಎಂಟಿವೈ, ದೀಪು)- ನಾಡ ಹಬ್ಬ ದಸರಾ ಮಹೋತ್ಸವದಲ್ಲಿ 13 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ನಿರ್ಮಿಸಿದ್ದ ಬಲರಾಮನ ಮೇಲೆ ರೈತ ಗುಂಡು ಹಾರಿಸಿದ್ದು, ಸಕಾಲದಲ್ಲಿ ಆನೆಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಲರಾಮನಿಗೆ ಒಂಟಿ ನಳಿಕೆ ನಾಡ ಬಂದೂಕಿನಿಂದ ಗುಂಡು ಹಾರಿಸಿದ ರೈತ ಎಂ.ಎ. ಸುರೇಶ್‍ನನ್ನು ಅರಣ್ಯಾಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತನ್ನ ಜಮೀನಿಗೆ ನುಗ್ಗಿ ಕಾಡಾನೆ ಬೆಳೆ ನಾಶಪಡಿ ಸುತ್ತಿದೆ ಎಂದು ಭಾವಿಸಿ ತಾನು ಬಲರಾಮನ ಮೇಲೆ ಗುಂಡು ಹಾರಿಸಿದ್ದಾಗಿ ಸುರೇಶ್ ಹೇಳಿಕೆ ನೀಡಿದ್ದಾನೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಹುಣಸೂರು ವನ್ಯಜೀವಿ ವಿಭಾಗದ ಭೀಮನಕಟ್ಟೆ ಸಾಕಾನೆ ಶಿಬಿರ ದಿಂದ ಕೇವಲ 200 ಮೀ. ಅಂತರದಲ್ಲಿರುವ ಪಿರಿಯಾಪಟ್ಟಣ ತಾಲೂಕು ಅಳಲೂರು ಗ್ರಾಮದ ಸರ್ವೆ ನಂ.27ರಲ್ಲಿ ಈ ಘಟನೆ ನಡೆದಿದೆ.
ವಿವರ: ಗುರುವಾರ ರಾತ್ರಿ 9.30ರಲ್ಲಿ ಭೀಮನಕಟ್ಟೆ ಆನೆ ಶಿಬಿರದಿಂದ ಬಲರಾಮನ ಮೇಯಲು ಕಾಡಿಗೆ ಬಿಡಲಾಗಿತ್ತು. ಆದರೆ, ಸುಮಾರು 30 ನಿಮಿಷದಲ್ಲೇ ಗುಂಡು ಹಾರಿದ ಹಾಗೂ ಆನೆ ಘೀಳಿಟ್ಟ ಶಬ್ದ ಕೇಳಿಸಿದ ಹಿನ್ನೆಲೆಯಲ್ಲಿ ಸಾಕಾನೆ ಶಿಬಿರದ ಸಿಬ್ಬಂದಿ ಶಬ್ದ ಬಂದ ಕಡೆ ತೆರಳಿದಾಗ ಶಿಬಿರಕ್ಕೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಬಲರಾಮ ಗಾಯಗೊಂಡು ಬಿದ್ದಿರುವ ದೃಶ್ಯ ಕಂಡು ಬಂದಿದೆ. ಸುತ್ತಮುತ್ತಲೂ ಪರಿಶೀಲಿಸಿದಾಗ ಅನತಿ ದೂರದಲ್ಲಿ ಮರದ ಮೇಲೆ ಕಟ್ಟಿದ್ದ ಅಟ್ಟಿಗೆಯ ಮೇಲೆ ರೈತ ಸುರೇಶ್ ಬಂದೂಕು ಸಮೇತ ಇರುವುದೂ ಕೂಡ ಕಂಡು ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಸುರೇಶ್‍ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪಶು ವೈದ್ಯ ಡಾ.ರಮೇಶ್ ಅವರನ್ನು ಕರೆಸಿ, ಬಲರಾಮನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ನಾಡ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಬಲರಾಮನ ಬಲ ಮುಂಗಾಲಿನ ಮೇಲೆ 35 ಚರ್ರೆಗಳು ಹೊಕ್ಕಿದ್ದವು. ಪಶು ವೈದ್ಯಾಧಿಕಾರಿಯು ಸ್ಥಳದಲ್ಲೇ ಬಲರಾಮನ ಮೈಗೆ ಹೊಕ್ಕಿದ್ದ ಚರ್ರೆ ಹಾಗೂ ಸೈಕಲ್ ಬಾಲ್‍ನಂತಹ ಗುಂಡುಗಳನ್ನು ಹೊರ ತೆಗೆದು ಡ್ರೆಸ್ಸಿಂಗ್ ಮಾಡಿದ್ದಲ್ಲದೇ ಚಿಕಿತ್ಸೆ ನೀಡಿದ್ದಾರೆ. ಕೆಲ ನಿಮಿಷಗಳಲ್ಲೇ ಚೇತರಿಸಿಕೊಂಡ ಬಲರಾಮನನ್ನು ಮಾವುತರು ಹಾಗೂ ಕಾವಾಡಿಗಳು ಶಿಬಿರಕ್ಕೆ ಕರೆತಂದಿದ್ದಾರೆ. ಬಲರಾಮ ಪ್ರಾಣಾಪಾಯದಿಂದ ಪಾರಾಗಿದ್ದು, ಶಿಬಿರದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾಡಿಗೆ ಹೊಂದಿಕೊಂಡಂತಿರುವ ತನ್ನ ಜಮೀನಿನಲ್ಲಿ ರೈತ ಸುರೇಶ, ಭತ್ತ ಮತ್ತು ಜೋಳ ಬೆಳೆದಿದ್ದಾನೆ. ರಾತ್ರಿ ವೇಳೆ ಕಾಡುಪ್ರಾಣಿಗಳು ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುವುದನ್ನು ತಡೆಯುವ ಸಲುವಾಗಿ ಜಮೀನಿನ ಮರದ ಮೇಲೆ ಅಟ್ಟಿಗೆ ಕಟ್ಟಿಕೊಂಡು ರಾತ್ರಿ ವೇಳೆ ನಾಡ ಬಂದೂಕು ಸಮೇತ ಕಾವಲು ಕಾಯುತ್ತಿದ್ದ. ಬಲರಾಮ ಜಮೀನಿಗೆ ನುಗ್ಗಿದಾಗ ಕಾಡಾನೆ ಬಂದಿರಬಹುದು ಎಂದು ಭಾವಿಸಿ ಅದರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿ ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರಿಂದ ಅಟ್ಟಿಗೆ ಮೇಲೆ ಇದ್ದ ಆತ ಸಿಕ್ಕಿಬಿದ್ದಿದ್ದಾನೆ. ಆನೆಯನ್ನು ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಬಹುದಿತ್ತಾದರೂ, ಈ ರೈತ ಆನೆಯ ಮೇಲೆಯೇ ಗುಂಡು ಹಾರಿಸಿದ್ದಾನೆ. ನಾಡ ಬಂದೂಕಿನಲ್ಲಿ ಗುಂಡು ಹಾರಿಸಿದರೆ ಆನೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಕಡಿಮೆ. ಆದರೆ ಬಂದೂಕಿನಿಂದ ಹೊರ ಬರುವ ಚರ್ರೆಗಳು ಆನೆಯನ್ನು ಗಾಯಗೊಳಿಸುತ್ತವೆ ಎಂದು ಹೇಳಲಾಗಿದೆ.

2.70.ಮೀ. ಎತ್ತರ 3.70 ಮೀ. ಉದ್ದ 4,980 ಕೆ.ಜಿ. ತೂಕವಿರುವ ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಸೌಮ್ಯ ಸ್ವಭಾವದ ಬಲಶಾಲಿ ಬಲರಾಮ 22 ವರ್ಷ ನಾಡ ಹಬ್ಬ ದಸರಾದಲ್ಲಿ ಭಾಗವಹಿಸಿದ್ದ ಅನುಭವ ಹೊಂದಿದ್ದಾನೆ. ದಸರೆಯಲ್ಲಿ ಅತೀ ಹೆಚ್ಚು ಬಾರಿ ಅಂಬಾರಿ ಹೊತ್ತಿರುವ ದ್ರೋಣನ ನಂತರದ ಸ್ಥಾನವನ್ನು ಪಡೆದಿದ್ದಾನೆ. ದ್ರೋಣ ಕಾಡಿನಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ನಂತರ ಅಂಬಾರಿ ಹೊರುವ ಹೊಣೆಯನ್ನು ಅರ್ಜುನನಿಗೆ ನೀಡಲಾಗಿತ್ತು. ಒಂದು ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ, ಎರಡನೇ ವರ್ಷ ದಸರೆಗೆ ಆಗಮಿಸಿದ್ದಾಗ ಮಾವುತನನ್ನು ಆಕಸ್ಮಿಕವಾಗಿ ತುಳಿದು ಕೊಂದ ಕಾರಣದಿಂದ ಅಂಬಾರಿ ಹೊರುವ ಹೊಣೆಗಾರಿಕೆಯನ್ನು ಬಲರಾಮನಿಗೆ ವಹಿಸಲಾಯಿತು. 1999ರಿಂದ 2011ರವರೆಗೂ ಸತತ 13 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗಿದ ಬಲರಾಮನಿಗೆ ವಯಸ್ಸಿನ ಕಾರಣದಿಂದ ಅಂಬಾರಿ ಹೊರುವ ಹೊಣೆಗಾರಿಕೆಯಿಂದ ಬಿಡಿಸಲಾಯಿತು. ಆನಂತರ 2018ರವರೆಗೆ ದಸರೆಯಲ್ಲಿ ನಿಶಾನೆ ಆನೆಯಾಗಿ ಜಂಬೂ ಸವಾರಿಯನ್ನು ಬಲರಾಮ ಮುನ್ನಡೆಸುತ್ತಿದ್ದ. 2018ರ ನಂತರ ದಸರೆಗೆ ಬಲರಾಮನನ್ನು ಕರೆತರುತ್ತಿಲ್ಲ. ಒಟ್ಟಾರೆ 22 ವರ್ಷ ಕಾಲ ಜಂಬೂ ಸವಾರಿಯಲ್ಲಿ ಭಾಗವಹಿಸಿದ ದಾಖಲೆಯನ್ನು ಹೊಂದಿರುವ ಬಲರಾಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದರೂ, 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಸೇರಿದಂತೆ 1100 ಕೆ.ಜಿ. ಭಾರವನ್ನು ಹೊತ್ತು ಸುಮಾರು 2 ಗಂಟೆಗಳ ಕಾಲ ನಿಂತು ನಂತರ ಅರಮನೆಯಿಂದ ಬನ್ನಿಮಂಟಪದವರೆಗೂ ಅದನ್ನು ಹೊತ್ತು ಸಾಗುವ ಸಾಮಥ್ರ್ಯ ಹೊಂದಿದ್ದ.

Translate »