ಪಾಂಡವಪುರ, ಡಿ. 16- ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಆದರೆ, ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮೂಲಕ ಗುಜರಾತ್ ಮಾದರಿಯಲ್ಲಿ ದಾಖಲೆ ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಹಳೇ ಮೈಸೂರು ಪ್ರಾಂತ್ಯ ದಲ್ಲಿ ಬಿಜೆಪಿ ಪರ್ವ ಆರಂಭಗೊಂಡಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರ ಸೇರಿ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳÀಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಯನ್ನು ಅಧಿಕಾರಕ್ಕೆ ತರುವ ಬದಲಾವಣೆ ಬಿರುಗಾಳಿ ಮಂಡ್ಯ ಜಿಲ್ಲೆಯಿಂದ ಆರಂಭವಾಗಲಿ ಎಂದು ಕರೆ ನೀಡಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಬಲ್ ಎಂಜಿನ್ ಸರ್ಕಾರ ಜನಪರ, ರೈತಪರ, ಮಹಿಳೆಯರ, ಯುವಕರ ಪರವಾಗಿ ಯಶಸ್ವಿ ಆಡಳಿತ ನಡೆಸುವ ಮೂಲಕ ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ರಾಜ್ಯದ 45 ಸಾವಿರ ನೇಕಾರರ ಖಾತೆಗೆ ತಲಾ 5 ಸಾವಿರ ರೂ. ಜಮೆ ಮಾಡುವ ಕಾರ್ಯಕ್ರಮಕ್ಕೆ ಈಗಷ್ಟೆ ಚಾಲನೆ ನೀಡಿ ಬಂದಿದ್ದೇನೆ. ಯುವಕರು, ಮಹಿಳಾ ಸಬಲೀಕರಣಕ್ಕೆ 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿದ್ದೇವೆ. ಕಿಸಾನ್ ಸನ್ಮಾನ್ ಯೋಜನೆಯಿಂದ ರೈತರ ಖಾತೆಗೆ 10 ಸಾವಿರ ಹಣ ನೀಡಲಾಗುತ್ತಿದೆ ಎಂದರು. ಮಂಡ್ಯ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಪಿಎಸ್‍ಎಸ್‍ಕೆ ಹಾಗೂ ಮೈಶುಗರ್ ಸಕ್ಕರೆ ಕಾರ್ಖಾನೆ ಪುನರಾರÀಂಭಿ ಸಿದ್ದು ಬಿಜೆಪಿ ಸರ್ಕಾರ. ಕಾರ್ಖಾನೆ ಆರಂಭಿಸುವಂತೆ ರೈತರು ಚಳವಳಿ ನಡೆಸಿದರೂ ಯಾವ ಸರ್ಕಾರಗಳೂ ಕ್ರಮ ವಹಿಸಲಿಲ್ಲ. ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಿ, ಕಬ್ಬಿನ ಪೇಮೆಂಟ್ ಅನ್ನು ಮೊದಲು 17 ಕೋಟಿ, ಇದೀಗ 4 ಕೋಟಿ ರೂ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೈಶುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಆರಂಭಿಸುವ ಮೂಲಕ ಶಾಶ್ವತವಾಗಿ ಕಾರ್ಖಾನೆ ಈ ಭಾಗದ ರೈತರ ಕಬ್ಬು ನುರಿಸುವಂತೆ ಮಾಡಲಾಗುವುದು. ಕೆಆರ್‍ಎಸ್ ಅಣೆಕಟ್ಟೆ 16 ಗೇಟ್‍ಗಳನ್ನು ದುರಸ್ತಿಪಡಿಸಿದ್ದೇವೆ ಮುಂದಿನ ದಿನಗಳಲ್ಲಿ ಕೆಆರ್‍ಎಸ್‍ನ ಎಲ್ಲಾ ಗೇಟ್ ದುರಸ್ತಿಪಡಿಸಲಾಗುವುದು. ಜಿಲ್ಲೆಯಲ್ಲಿ 184 ಕೆರೆ ತುಂಬಿಸುವ 450 ಕೋಟಿ ವೆಚ್ಚದ ಯೋಜನೆ ಮಂಜೂರು ಮಾಡಲಾಗುತ್ತಿದೆ. ಹೀಗೆ ನಮ್ಮ ಸರ್ಕಾರ ಜನಪರ, ರೈತಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ಭ್ರಮೆಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಗುಜರಾತ್ ಮಾದರಿ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿ ಸಂಘಟನೆಯಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನಸಂಕಲ್ಪ ಸಭೆಗೆ ಜನರು ಬಂದಿದ್ದಾರೆ. ಬಿಜೆಪಿ ಸಂಘಟನೆ ಮಾಡುತ್ತಿರುವ ಡಾ.ಇಂದ್ರೇಶ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬೆಂಬಲಿಸಬೇಕು. ಜಿಲ್ಲೆಯ ಏಳು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂಗಳನ್ನು ಮತಾಂತರ ಮಾಡಿದ ಟಿಪ್ಪುವನ್ನು ಹುಲಿ ಎಂದು ಸಂಬೋಧನೆ ಮಾಡುತ್ತಾರೆ. `ಕಾಂಗ್ರೆಸ್‍ನವರೇ ನೀವು ಟಿಪ್ಪುನನ್ನು ನೆಚ್ಚಿಕೊಂಡರೆ ಕೊನೆಗೆ ಟಿಪ್ಪು ಡ್ರಾಪ್ ಗತಿ’ ಎಂದು ಲೇವಡಿ ಮಾಡಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ನಿರ್ಮಾಣ ಮಾಡಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಮುಂದಿನ ದಿನಗಳಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿದರು.
ಪಾಂಡವಪುರದಲ್ಲಿ ವೀರಶೈವ ಲಿಂಗಾಯತ ಹಾಗೂ ಕುರುಬ ಸಮುದಾಯದ ಭವನಗಳನ್ನು ನಿರ್ಮಿಸಲು ಸಹಕಾರ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಡಾ.ಇಂದ್ರೇಶ್ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್ ಮಾತನಾಡಿದರು. ಎಂಎಲ್‍ಸಿ ರವಿಕುಮಾರ್, ಜಗದೀಶ್ ಹಿರೇಮನಿ, ಮುಖಂಡರಾದ ಅಶೋಕ್ ಜಯರಾಮು, ಸಿದ್ದರಾಮಯ್ಯ, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಮಹಿಳಾ ಮೋರ್ಚಾ ಕಾರ್ಯದರ್ಶಿ ಮಂಗಳ ನವೀನ್‍ಕುಮಾರ್, ಮೇಲುಕೋಟೆ ಮಂಡಲ ಅಧ್ಯಕ್ಷ ಎಸ್‍ಎನ್‍ಟಿ ಸೋಮಶೇಖರ್, ಮುಖಂಡ ನವೀನ್‍ಕುಮಾರ್, ಧನಂಜಯ್ ಸೇರಿದಂತೆ ಹಲವರು ಹಾಜರಿದ್ದರು.
ಕಪ್ಪು ಬಾವುಟ ಪ್ರದರ್ಶನ: ಕಬ್ಬಿನ ಹಾಗೂ ಹಾಲಿನ ದರ ಏರಿಕೆ ಮಾಡುವ ಸಂಬಂಧ ಸಿಎಂ ನೀಡಿದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಮಂಡ್ಯ ಸರ್ಕಲ್‍ನಲ್ಲಿ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲು ಮುಂದಾದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಬ್ಯಾರಿಕೇಡ್ ಹಾಕಿ ರಸ್ತೆ ಪಕ್ಕ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟು, ಸುತ್ತಲು ಪೊಲೀಸ್ ಸರ್ಪಗಾವಲು ಹಾಕಿದರು.