ಮೈಸೂರು,ಆ.3(ಎಸ್‍ಪಿಎನ್)-ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳನ್ನು ಆ.31ರವರೆಗೆ ಮುಚ್ಚು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೋಮ ವಾರ ಅಧಿಕೃತ ಸುತ್ತೋಲೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೋವಿಡ್-19ರ ಮಾರ್ಗಸೂಚಿ ಯಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು ಮತ್ತು ತರಬೇತಿ ಸಂಸ್ಥೆಗಳನ್ನು ಆಗಸ್ಟ್ 31ರವರೆಗೆ ಮುಚ್ಚುವಂತೆ ಸೂಚಿಸಿ ರುವ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ನಡುವೆಯೂ ಮೈಸೂರು ಜಿಲ್ಲೆಯ ಆಯಾಯ ಬಿಇಓ ಕಚೇರಿ ವ್ಯಾಪ್ತಿಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಉಚಿತ ಮತ್ತು ಮಾರಾಟ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ ಎಂದು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದ್ದಾರೆ.
ಆ.4ರಂದು ನಿರ್ಧಾರ: ಪ್ರಾಥಮಿಕ ಶಾಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕೇ? ಬೇಡವೇ? ಹಾಗೂ ಶಿಕ್ಷಕರ ಕರ್ತವ್ಯ ನಿರ್ವಹಣೆ ಬಗ್ಗೆ ಮಂಗಳವಾರ ಸಂಜೆಯೊಳಗೆ ಇಲಾಖೆಯಿಂದ ಸ್ಪಷ್ಟನೆ ಸಿಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಕಟಣೆ ತಿಳಿಸಿದೆ.