ಇಂದಿರಾ ಕ್ಯಾಂಟಿನ್‍ಗಳಿಂದ ಮೈಸೂರು ನಗರ ಪಾಲಿಕೆಗೆ ಲಕ್ಷಾಂತರ ರೂ. ನಷ್ಟ
ಮೈಸೂರು

ಇಂದಿರಾ ಕ್ಯಾಂಟಿನ್‍ಗಳಿಂದ ಮೈಸೂರು ನಗರ ಪಾಲಿಕೆಗೆ ಲಕ್ಷಾಂತರ ರೂ. ನಷ್ಟ

August 4, 2020

ಮೈಸೂರು, ಆ.3(ಎಸ್‍ಬಿಡಿ)- `ಇಂದಿರಾ ಕ್ಯಾಂಟಿನ್’ ಮೇಲ್ವಿಚಾರಣೆ ಕೊರತೆಯಿಂದ ಮೈಸೂರು ನಗರ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಸೋಮ ವಾರ ಕೌನ್ಸಿಲ್ ಸಭೆಯಲ್ಲಿ ದೂರಿದರು.

ಬಿಜೆಪಿ ಹಿರಿಯ ಸದಸ್ಯೆ ಸುನಂದಾ ಪಾಲ ನೇತ್ರ, ಇಂದಿರಾ ಕ್ಯಾಂಟಿನ್‍ಗಳ ಸಂಖ್ಯೆ, ನಿರ್ವ ಹಣೆ, ಮೇಲ್ವಿಚಾರಣೆ ಕುರಿತಂತೆ ಕೇಳಿದ್ದ ಪ್ರಶ್ನೆಗಳಿಗೆ ಸಭೆಯಲ್ಲಿ ಸ್ಪಷ್ಟನೆ ನೀಡುವಾಗ ಈ ಸಂಬಂಧ ಸುದೀರ್ಘ ಚರ್ಚೆಯಾಯಿತು.

ಮೈಸೂರು ನಗರದಲ್ಲಿ 11 ಇಂದಿರಾ ಕ್ಯಾಂಟಿನ್ ಗಳಿದ್ದು, 40-50 ಲಕ್ಷ ರೂ. ಅನುದಾನವನ್ನು ನೀಡಲಾಗಿದೆ. ಕ್ಯಾಂಟಿನ್‍ಗಳ ಬಳಿ ಜನರೇ ಇರುವುದಿಲ್ಲ, ಹೀಗಿರುವಾಗ ಇಷ್ಟೊಂದು ಹಣ ವೆಚ್ಚವಾಗಲು ಹೇಗೆ ಸಾಧ್ಯ? ಎಂದು ಸುನಂದಾ ಪಾಲನೇತ್ರ ಪ್ರಶ್ನಿಸಿದರು.

ಇದಕ್ಕೆ ಪೂರಕವಾಗಿ ಕಾರ್ಪೊರೇಟರ್ ಶಿವಕುಮಾರ್ ಮಾತನಾಡಿ, ಇಂದಿರಾ ಕ್ಯಾಂಟಿನ್ ಸೇವೆ ಸರ್ಕಾರದ ಯೋಜನೆಯಾದರೂ ಇದಕ್ಕೆ ಪ್ರತೀ ಹಂತದಲ್ಲೂ ಪಾಲಿಕೆ ಹಣ ಖರ್ಚಾ ಗಿದೆ. ಈಗಲೂ ಪಾಲಿಕೆಗೆ ಬರುವ ಎಸ್‍ಎಫ್‍ಸಿ ಹಣದಿಂದ ಶೇ.70 ಹಾಗೂ ಪಾಲಿಕೆ ಹಣ ದಿಂದ ಶೇ.30ರಷ್ಟು ಅನುದಾನವನ್ನು ಇಂದಿರಾ ಕ್ಯಾಂಟಿನ್ ನಿರ್ವಹಣೆಗೆ ಬಳಸಲಾಗುತ್ತಿದೆ. ಆದರೆ ಮೇಲ್ವಿಚಾರಣೆ ಯಾರದ್ದು ಎಂಬುದೇ ತಿಳಿಯುತ್ತಿಲ್ಲ. ಎಷ್ಟು ತಿಂಡಿ, ಊಟ ನೀಡುತ್ತಿ ದ್ದಾರೆ? ಅದರ ಗುಣಮಟ್ಟ ಹೇಗಿದೆ? ಎಂಬುದು ಯಾರಿಗೂ ಗೊತ್ತಿಲ್ಲ. ಕ್ಯಾಂಟಿನ್ ಬಳಿ ಜನರೇ ಕಾಣುವುದಿಲ್ಲ, ಆದರೂ ಗುತ್ತಿಗೆದಾರರಿಗೆ ಲಕ್ಷಾಂತರ ರೂ. ಪಾವತಿಸುತ್ತಿದ್ದೇವೆ. ಇಂದಿರಾ ಕ್ಯಾಂಟಿನ್‍ಗಳ ಪಾರದರ್ಶಕ ನಿರ್ವಹಣೆ ಹಾಗೂ ಸುಧಾರಣೆಗಾಗಿ ಪ್ರತ್ಯೇಕ ಸಾಫ್ಟ್‍ವೇರ್ ನಿರ್ಮಿಸಲೇಬೇಕೆಂದು ಸಲಹೆ ನೀಡಿದರು.

ಈ ಸಂಬಂಧ ಸ್ಪಷ್ಟನೆ ನೀಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಕಳೆದ ಫೆಬ್ರವರಿವರೆಗೆ ಮಾತ್ರ ಗುತ್ತಿಗೆದಾರರಿಗೆ ಬಿಲ್ ನೀಡಲಾಗಿದೆ. ಅದರಲ್ಲೂ ಆಯುಕ್ತರ ನಿರ್ದೇ ಶನದಂತೆ ಪರಿಶೀಲಿಸಿ, ಒಟ್ಟು ಮೊತ್ತದಲ್ಲಿ 50 ಲಕ್ಷ ರೂ.ಗಳನ್ನು ಕಡಿತಗೊಳಿಸಲಾಗಿದೆ. ನಂತರದಲ್ಲಿ ಕಂಪ್ಯೂಟರ್ ಟೋಕನ್ ಸಿಸ್ಟಮ್ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾ ಗಿದೆ. ಆರೋಗ್ಯ ನಿರೀಕ್ಷಕರು, ಪರಿಸರ ಇಂಜಿನಿ ಯರ್‍ಗಳು ಪರಿಶೀಲನೆ ನಡೆಸುತ್ತಿರುತ್ತಾರೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟಿನ್ ಗಳಲ್ಲಿ ಗ್ರಾಹಕರು ಕಡಿಮೆಯಾಗಿದ್ದಾರೆ. ಅದ ರಲ್ಲೂ ನಗರದ ಮೂರ್ನಾಲ್ಕು ಕ್ಯಾಂಟಿನ್‍ಗಳಲ್ಲಿ ಗಣನೀಯ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ವರೆಗಿನ ಪೇಮೆಂಟ್ ಮಾಡಲಾಗಿದ್ದು, ನಂತರ ದ್ದನ್ನು ಟೋಕನ್ ಹಾಗೂ ಸಿಸಿಟಿವಿ ಫುಟೇಜ್ ಪರಿಶೀಲಿಸಿ, ಹಣ ಬಿಡುಗಡೆ ಮಾಡಬೇಕಾ ಗುತ್ತದೆ ಎಂದು ಸ್ಪಷ್ಟಪಡಿಸಿದರು.

`ನಂದಿ’ ಸ್ಮರಣೆ: ಮೈಸೂರು ನಗರ ಪಾಲಿಕೆಯ ಲಾಂಛನ `ನಂದಿ’. ಇದನ್ನು ಲೋಗೋ ಆಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಸ್ಮರಿಸುವ ನಿಟ್ಟಿನಲ್ಲಿ ಈವರೆಗೂ ಪ್ರಯತ್ನ ನಡೆದಿಲ್ಲ. ಪಾಲಿಕೆ ಸಮೀಪದ ವೃತ್ತದಲ್ಲಿ `ನಂದಿ’ ವಿಗ್ರಹ ಸಹಿತ ವೃತ್ತ ನಿರ್ಮಿಸಿ, ಇದೇ ಹೆಸರನ್ನು ನಾಮಕರಣ ಮಾಡಬೇಕೆಂದು ಕಾರ್ಪೊ ರೇಟರ್ ಸುನಂದಾ ಪಾಲನೇತ್ರ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಗುರು ದತ್ ಹೆಗ್ಡೆ, `ನೀವೇ ವೃತ್ತವನ್ನು ಗುರುತಿಸಿ, ಖಂಡಿತವಾಗಿ ಈ ಕಾರ್ಯವನ್ನು ಮಾಡೋಣ’ ಎಂದು ಭರವಸೆ ನೀಡಿದರು.

Translate »