ಮೈಸೂರು, ಆ.3(ಆರ್‍ಕೆ)- ಭಾನುವಾರದ ಲಾಕ್‍ಡೌನ್, ರಾತ್ರಿ ಕಫ್ರ್ಯೂ ಜಾರಿಯಲ್ಲಿದ್ದ ಕಾರಣ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಎಲ್ಲಾ ವಾಣಿಜ್ಯ ಮಳಿಗೆಗಳ ಜುಲೈ ಮಾಹೆಯ ಪರ ವಾನಗಿ ಶುಲ್ಕ (ಬಾಡಿಗೆ) ಪಾವತಿಯಿಂದ ಸಂಪೂರ್ಣ ವಿನಾ ಯಿತಿ ನೀಡಲಾಗಿದೆ. ಈ ಕುರಿತು ರಾಜ್ಯದ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ)ದ ಕೇಂದ್ರ ಕಚೇರಿ ಮುಖ್ಯ ಸಂಚಾರ ವ್ಯವಸ್ಥಾಪಕರು, ಭಾನುವಾರಗಳಂದು ಸಂಪೂರ್ಣ ಲಾಕ್‍ಡೌನ್, ಉಳಿದ ದಿನಗಳಂದು ರಾತ್ರಿ ಕಫ್ರ್ಯೂ ವಿಧಿಸಿದ್ದ ಕಾರಣ ಸಾರಿಗೆ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಓಡಾಟದಲ್ಲಿ ವ್ಯತ್ಯಯವಾದ ಕಾರಣ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ರುವ ಎಲ್ಲಾ ಬಗೆಯ ವಾಣಿಜ್ಯ ಪರವಾನಗಿದಾರರಿಗೆ ಜುಲೈ ಮಾಹೆಯ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜೂನ್ ಮಾಹೆಯಲ್ಲಿ ಶೇ.10 ಹಾಗೂ ಆಗಸ್ಟ್ ತಿಂಗಳಲ್ಲಿ ಬಸ್ ನಿಲ್ದಾಣಗಳ ಉಪಾಹಾರ ಗೃಹಗಳಿಗೆ ಶೇ.10ರಷ್ಟು ಹಾಗೂ ಇನ್ನುಳಿದ ಎಲ್ಲಾ ವಾಣಿಜ್ಯ ಮಳಿಗೆ (ಎಟಿಎಂ ಮತ್ತು ಮೊಬೈಲ್ ಟವರ್ ಹೊರತುಪಡಿಸಿ) ಶೇ.15ರಷ್ಟು ಪರವಾನಗಿ ಶುಲ್ಕ ಪಾವತಿಸುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು ಪತ್ರದಲ್ಲಿ ತಿಳಿಸಿದ್ದಾರೆ. ಈ ಮೂರು ತಿಂಗಳ ರಿಯಾಯಿತಿ ದರಗಳು ಎಟಿಎಂ ಕೌಂಟರ್ ಮತ್ತು ಮೊಬೈಲ್ ಟವರ್‍ಗಳಿಗೆ ಅನ್ವಯಿ ಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.