ಗುಡ್ಡ ಕುಸಿದು ಬೆಂಗಳೂರು-ಮಂಗಳೂರು ರೈಲುಸಂಚಾರ ಕೆಲ ಕಾಲ ಸ್ಥಗಿತ
ಮೈಸೂರು

ಗುಡ್ಡ ಕುಸಿದು ಬೆಂಗಳೂರು-ಮಂಗಳೂರು ರೈಲುಸಂಚಾರ ಕೆಲ ಕಾಲ ಸ್ಥಗಿತ

June 15, 2018

ಮೈಸೂರು: ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ-ಶಿರಿವಾಗಿರಿ ರೈಲ್ವೆ ನಿಲ್ದಾಣಗಳ ಮಧ್ಯೆ ಇಂದು ಬೆಳಿಗ್ಗೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಕಾರವಾರ-ಯಶವಂತಪುರ ಎಕ್ಸ್‍ಪ್ರೆಸ್ ರೈಲು ಸುಬ್ರಹ್ಮಣ್ಯ ಸ್ಟೇಷನ್‍ಗೆ ಆಗಮಿಸಿದ ವೇಳೆ ಗುಡ್ಡ ಕುಸಿದ ಕಾರಣ ಈ ರೈಲು ಸಂಚಾರವನ್ನು ಇಂದು ರದ್ದುಗೊಳಿಸಲಾಯಿತು. ಪ್ರಯಾಣ ಕರ ಟಿಕೆಟ್ ದರವನ್ನು ಹಿಂದಿರುಗಿಸಲಾಯಿತು. ಮಂಗಳೂರಿಗೆ ವಾಪಸ್ ತೆರಳಲು ಸಿದ್ಧರಿದ್ದ ಪ್ರಯಾಣಿಕರಿಗೆ ರೈಲಿನಲ್ಲಿ ತೆರಳಲು ಅವಕಾಶ ಕಲ್ಪಿಸಲಾಯಿತು. ಪ್ರಯಾಣಿಕರಿಗಾಗಿ ಆಹಾರ ಪೊಟ್ಟಣ, ಕಾಫಿ, ಟೀ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ಯಶವಂತಪುರ-ಮಂಗಳೂರು ಗೊಮ್ಮಟೇಶ್ವರ ಎಕ್ಸ್‍ಪ್ರೆಸ್ ಸಂಚಾರವನ್ನೂ ಸಹ ಇಂದು ರದ್ದುಗೊಳಿಸಲಾಯಿತು. ಈ ರೈಲು ಸಂಚಾರವನ್ನು ಕಡಗರವಳ್ಳಿ ಸ್ಟೇಷನ್‍ನಲ್ಲಿ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಹಾಸನಕ್ಕೆ ತೆರಳಲು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಕಡಗರಹಳ್ಳಿ ಸ್ಟೇಷನ್‍ನಲ್ಲಿ ಸಂಚಾರ ಸ್ಥಗಿತಗೊಂಡ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಸಕಲೇಶಪುರ ರೈಲ್ವೆ ನಿಲ್ದಾಣದಿಂದ ರೈಲು ಎಂಜಿನ್ ಮೂಲಕ ಆಹಾರ, ಕಾಫಿ, ಟೀ ಮತ್ತು ನೀರಿನ ಬಾಟಲಿಗಳನ್ನು ಸರಬರಾಜು ಮಾಡಲಾಯಿತು. ಸಂಜೆ 5.30ಕ್ಕೆ ಗುಡ್ಡವನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಹಳಿಯನ್ನು ಮುಕ್ತಗೊಳಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Translate »