ಮೈಸೂರಲ್ಲಿ ಸದ್ಯದಲ್ಲೇ ಉದ್ಯಮ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ
ಮೈಸೂರು

ಮೈಸೂರಲ್ಲಿ ಸದ್ಯದಲ್ಲೇ ಉದ್ಯಮ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ

June 15, 2018
  • ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಡಾ. ಮುತ್ತುಕುಮಾರ್ ಭರವಸೆ
  • ಮೈಸೂರು ಕೈಗಾರಿಕಾ ಸಂಘದಿಂದ ಅಭಿನಂದನೆ
  • ಕೈಗಾರಿಕಾ ವಲಯದಲ್ಲಿ ವಸತಿ ಸಮುಚ್ಛಯ ನಿರ್ಮಾಣ ತಡೆಗೆ ಮನವಿ

ಮೈಸೂರು:  ಕೇಂದ್ರ ಸರ್ಕಾರ, ಭಾರತೀಯ ಕೈಗಾರಿಕೆಗಳ ಒಕ್ಕೂ ಟಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಮೈಸೂರಿನಲ್ಲಿ ಕೌಶಲ್ಯಾಭಿ ವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವು ದಾಗಿ ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್ ಭರವಸೆ ನೀಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಕೈಗಾರಿಕೆಗಳ ಸಂಘ ಗುರುವಾರ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಸಿಐಐ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮೈಸೂರಿಗರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರಗಳಿಗೆ ಹೊಸದಾಗಿ ಪಾದಾರ್ಪಣೆ ಮಾಡುವ ವರಿಗೆ ಕೌಶಲ್ಯದ ಕೊರತೆ ಎದ್ದು ಕಾಣುತ್ತಿದೆ. ಕೈಗಾರಿಕಾ ಕ್ಷೇತ್ರಕ್ಕೆ ಬರುವ ಎಂಜಿನಿಯರ್ ಗಳಿಗೂ ತರಬೇತಿಯ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತೀಯ ಕೈಗಾರಿಕೆಗಳ ಒಕ್ಕೂಟಕ್ಕೆ 15 ಕೋಟಿ ರೂ. ಅನುದಾನ ನೀಡಿದೆ. ಇದರಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಬೇಕೆಂಬ ಉದ್ದೇಶ ಸಿಐಐ ಸಂಸ್ಥೆಯದ್ದಾಗಿದೆ. ಬೆಂಗಳೂರು ಮೈಸೂರಿ ನಲ್ಲಿ ಸ್ಥಾಪನೆ ಮಾಡಬೇಕೇ ಎಂಬ ಚಿಂತನೆ ನಡೆಯುತ್ತಿದೆ. ಆದರೆ ಕೈಗಾರಿಕಾಭಿವೃದ್ಧಿಗೆ ಪೂರಕವಾದ ವಾತಾವರಣ ಮೈಸೂರಿನಲ್ಲಿ ಹೆಚ್ಚಾಗಿರುವುದರಿಂದ ಶೀಘ್ರದಲ್ಲಿಯೇ ಮೈಸೂರಿ ನಲ್ಲಿಯೇ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಹೊಸದಾಗಿ ಸ್ಥಾಪಿಸುವ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಸ್ಥಳದ ಅವಶ್ಯಕತೆಯಿದೆ. ಮೈಸೂರಿ ನಲ್ಲಿ ಈ ಕೇಂದ್ರ ಸ್ಥಾಪಿಸುವುದರಿಂದ ಇಲ್ಲಿನ ಕೈಗಾರಿಕೋದ್ಯಮಿಗಳಿಗೆ ನೆರವಾಗಲಿದೆ ಎಂದರು.

ಸಾಂಸ್ಕೃತಿಕ ಹಾಗೂ ಸ್ವಚ್ಛ ನಗರಿಯಾಗಿರುವ ಮೈಸೂರಿನಲ್ಲಿ ಕೈಗಾರಿಕಾ ಸ್ನೇಹಿ ವಾತಾ ವರಣವಿದೆ. ಇದರಿಂದಾಗಿಯೇ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಈ ನಡುವೆ ಹಣ ಗಳಿಸುವುದಕ್ಕಾಗಿಯೇ ಕೈಗಾರಿಕೆಗಳಿವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ಶೇ.90ರಷ್ಟು ಕೈಗಾರಿಕೆಗಳು ಸಮಾಜದ ಅಭಿವೃದ್ಧಿ, ಸೇವೆಗೂ ಶ್ರಮಿಸುತ್ತಿವೆ. ಕೈಗಾರಿಕೆಗಳಿಂದ ಸುಲಭವಾಗಿ ಹಣ ಸಂಪಾದಿ ಸಬಹುದು ಎಂದು ತಿಳಿಯುವುದು ತಪ್ಪು. ಹಲವಾರು ಸವಾಲುಗಳು ಕೈಗಾರಿ ಕೋದ್ಯಮಿಗಳಿಗೆ ಹೆಜ್ಜೆ ಹೆಜ್ಜೆಗೂ ಎದುರಾಗುತ್ತವೆ. ಕೈಗಾರಿಕಾ ಕ್ಷೇತ್ರಕ್ಕೆ ಬರುವ ಹೊಸಬರಿಗೆ ಇದು ಸುವರ್ಣಯುಗವಾಗಿದೆ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಸಹ ಕೈಗಾರಿ ಕೋದ್ಯಮಿಗಳು ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವವರಿಗೆ ಕೌಶಲ್ಯ ಗಳ ಬಗ್ಗೆ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಮೈಸೂರಿನಲ್ಲಿಯೇ ಸ್ಥಾಪಿಸುವ ಅಗತ್ಯವಿದೆ. ಕೇಂದ್ರದ ಸ್ಥಾಪನೆಗೆ ಮೈಸೂರಿನೊಂದಿಗೆ ಬೆಂಗಳೂರಿನ ಹೆಸರು ಕೇಳಿ ಬರುತ್ತಿದೆ. ಆದರೆ ಮೈಸೂರಿನಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿದರು.
ಪ್ರಾಮಾಣಿಕ ಅಧಿಕಾರಿಗಳ ಕೊರತೆ: ಇದೇ ವೇಳೆ ಸಿಐಐ ಅಧ್ಯಕ್ಷ ಡಾ. ಎನ್.ಮುತ್ತು ಕುಮಾರ್ ಅವರನ್ನು `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು ಸನ್ಮಾನಿಸಿದರು. ನಂತರ ಅವರು ಮಾತನಾಡಿ, ಮೈಸೂರು ಸೇರಿದಂತೆ ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಕಾರ್ಯಕ್ರಮ ಗಳನ್ನು ರೂಪಿಸಿದ್ದರು. ತೀವ್ರ ವಿರೋಧದ ನಡುವೆಯೂ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಸಾವಿರಾರು ಕುಟುಂಬಗಳಿಗೆ ನೆರವಾದರು. ಆ ಅವಧಿಯಲ್ಲಿ ಅಧಿಕಾರಿಗಳು ಕೈಗಾರಿಕಾಭಿವೃದ್ಧಿಗೆ ಪ್ರಾಮಾಣ ಕವಾಗಿ ಸಹಕರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದರಿಂದ, ಪ್ರಾಮಾಣ ಕ ಅಧಿಕಾರಿಗಳ ಸಂಖ್ಯೆ ವಿರಳವಾಗಿದ್ದು, ಕೈಗಾರಿಕೆಗಳ ಅಭಿವೃದ್ಧಿಗೆ ತೊಡಕಾಗಿದೆ ಎಂದು ವಿಷಾದಿಸಿದರು.

ಮುದ್ರಣ ಮಾಧ್ಯಮ ಉದ್ಯಮ ಸ್ಥಾಪಿಸಿ ನಾಲ್ಕು ದಶಕಗಳಿಂದ ನಾನು ಅನುಭವಿಸಿದಂತೆ ನೀವೂ ಸಂಕಷ್ಟ ಅನುಭವಿಸಿದ್ದೀರಿ ಎಂದು ಭಾವಿಸುತ್ತೇನೆ. ಆ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸುವುದಕ್ಕೆ ದೇವರು ನಿಮಗೆ ಶಕ್ತಿ ನೀಡಲಿ ಎಂದು ಹರಸಿದರು.

ರಫ್ತು ಕೇಂದ್ರ: ಮೈಸೂರಿನ ಹೆಬ್ಬಾಳು ಕೈಗಾರಿಕಾ ಬಡಾವಣೆಯಲ್ಲಿ ಮೈಸೂರು ರಫ್ತು ಕೇಂದ್ರ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕೇಂದ್ರವನ್ನು 8 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಕೇಂದ್ರ 3 ಕೋಟಿ ರೂ, ರಾಜ್ಯ ಒಂದು ಕೋಟಿ ಹಾಗೂ ಮೈಸೂರು ಕೈಗಾರಿಕೆಗಳ ಸಂಘದಿಂದ 50 ಲಕ್ಷ ರೂ ನೀಡಲಾಗಿದೆ. ಈ ಕೇಂದ್ರದ ಕಟ್ಟಡದಲ್ಲಿ ಏನೇನು ಇರಬೇಕು, ಕಟ್ಟಡದ ವಿನ್ಯಾಸ ಹೇಗಿರಬೇಕೆನ್ನುವುದನ್ನು ಮೈಸೂರು ಕೈಗಾರಿಕೆಗಳ ಸಂಘ ನಿರ್ಧರಿಸಿದೆ. ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಭಾರತೀಯ ಕೈಗಾರಿಕೆಗಳ ಸಂಘದ ಅಧ್ಯಕ್ಷರಾಗಿ ಮೈಸೂರಿನವರೇ ಆಗಿರುವ ಡಾ.ಎನ್.ಮುತ್ತುಕುಮಾರ್ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಸಾಮಾಜಿಕ ಕಳಕಳಿಯೊಂದಿಗೆ ಕೆರೆ ಅಭಿವೃದ್ಧಿ, ಶಾಲಾ ಕಟ್ಟಡಗಳ ದುರಸ್ತಿ, ಶಾಲೆಗಳಿಗೆ ಪೀಠೋಪಕರಣ ಸೇರಿದಂತೆ ವಿವಿಧ ಸವಲತ್ತು ಕಲ್ಪಿಸುವುದು. ಚಾಮುಂಡಿಬೆಟ್ಟ ಮತ್ತು ಅರಮನೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡುವುದರೊಂದಿಗೆ ಹಲವು ಸಾಮಾಜಿಕ ಕಾರ್ಯದಲ್ಲಿ ಮುಂಚೂಣ ಯಲ್ಲಿರುವ ಕೈಗಾರಿಕೋದ್ಯಮಿಯಾಗಿ ಎನ್.ಮುತ್ತುಕುಮಾರ್ ಗುರುತಿಸಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ನಗರ ನೈರ್ಮಲ್ಯದ ವಿಚಾರದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಸಮಸ್ಯೆಗಳು ನಿರಂತರವಾಗಿರುತ್ತವೆ. ರೋಗಗ್ರಸ್ಥ ಕೈಗಾರಿಕೆಗಳನ್ನು ಮುಚ್ಚದೆ ಪುನಶ್ಚೇತನಗೊಳಿಸುವ ಅವಶ್ಯಕತೆ ಇದೆ ಎಂದರು.

ಕೈಗಾರಿಕಾ ಪ್ರದೇಶದಲ್ಲಿ ವಸತಿ ಸಮುಚ್ಛಯ: ಇತ್ತೀಚಿನ ದಿನಗಳಲ್ಲಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತುತ್ತಿವೆ. ಇವುಗಳಿಗೆ ಅನುಮತಿ ನೀಡ ದಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಕೈಗಾರಿಕಾ ಪ್ರದೇಶದಲ್ಲಿ ಹೀಗೆ ವಸತಿ ಸಮುಚ್ಛಯಗಳು ನಿರ್ಮಾಣವಾದರೆ, ಕಾಲಕ್ರಮೇಣ ಕೈಗಾರಿಕೆಗಳನ್ನೇ ಮುಚ್ಚುವಂತೆ ಹೋರಾಟ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ವಸತಿ ಸಮುಚ್ಛಯಗಳ ತಡೆಯಬೇಕಾದ ಅನಿವಾರ್ಯ ಇದೆ ಎಂದು ವಾಸು ಅಭಿಪ್ರಾಯಪಟ್ಟರು.

ರಾಜ್ಯಕ್ಕೆ ಮಾದರಿ: ಹಿರಿಯ ಅಧಿಕಾರಿ ಡಿ.ರಂದೀಪ್ ಮಾತನಾಡಿ, ಸಿಎಸ್‍ಆರ್ ಫಂಡ್ ಅನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬಹುದು, ಯಾವ ಯಾವ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಮೈಸೂರು ಜಿಲ್ಲೆ ತೋರಿಸಿಕೊಟ್ಟಿದೆ. ಇದುವರೆಗೂ ಸಿಎಸ್‍ಆರ್ ಅನುದಾನ ಬಳಕೆಯಾಗದೆ ಇರುತ್ತಿತ್ತು. ಆದರೆ ಜಿಲ್ಲಾಡಳಿತ ದೊಂದಿಗೆ ಮೈಸೂರು ಜಿಲ್ಲಾ ಕೈಗಾರಿಕಾ ಸಂಸ್ಥೆ ಕೈಜೋಡಿಸಿದ ಫಲವಾಗಿ ಸುಮಾರು 40 ಕೋಟಿ ರೂಗಳ ಕಾಮಗಾರಿ ನಡೆಸಲಾಗಿದೆ. ಜಂಟಿ ಹಾಗೂ ಪಾರದರ್ಶಕವಾಗಿ ಕಾಮಗಾರಿ ನಡೆಸಿರುವುದು ರಾಜ್ಯಕ್ಕೆ ಮೈಸೂರು ಜಿಲ್ಲೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಕೈಗಾರಿಕೆಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ವಿಶ್ವನಾಥ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಉಮೇಶ್ ಕೆ.ಶೈಣೈ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಓ.ಡಿ.ಸತ್ಯೇಂದ್ರ ವಂದನಾರ್ಪಣೆ ಮಾಡಿದರು. ಸಂಘದ ಕಾರ್ಯ ದರ್ಶಿ ಸುರೇಶ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ರುಡ್‍ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.

ಯಶಸ್ವಿ ಉದ್ಯಮಿಗೆ 33 ಕೋಟಿ ದೇವತೆಗಳ ಕೃಪಾಕಟಾಕ್ಷ!

ಮೈಸೂರು: ಬಹುತೇಕ ಯಶಸ್ವಿ ಉದ್ಯಮಿಗಳಿಗೆ ಬಹುಶಃ ಅವರ ಆ ಸಾಧನೆಗೆ ಸರ್ಕಾರ ಇಲ್ಲವೇ ಸಂಬಂಧ ಪಟ್ಟ ಇಲಾಖೆ ಸಹಕಾರ ಹಾಗೂ ಸಹಾಯ ಕಾರಣವಾಗಿರದು. ಬದಲಾಗಿ ಈ ದೇಶದ 33 ಕೋಟಿ ದೇವರ ಕೃಪಾಕಟಾಕ್ಷ ಕಾರಣ ವಿರಬಹುದು! ಹೀಗೆ ಹಾಸ್ಯಧಾಟಿಯಲ್ಲಿ ಅನುಭವ ಹಂಚಿಕೊಂಡವರು `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು.

ಸಿಐಐ ಅಧ್ಯಕ್ಷ ಡಾ. ಮುತ್ತುಕುಮಾರ್ ಅಭಿನಂದಿಸಿ ಮಾತನಾಡಿದ ಅವರು, 1975ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೈಗಾರಿಕೆಗಳಲ್ಲಿ ಹಿಂದು ಳಿದ ಜಿಲ್ಲೆ ಎಂದು ಮೈಸೂರನ್ನು ಘೋಷಿ ಸಿದರು. ಈ ಸಂದರ್ಭದಲ್ಲಿ ನಾನು ಮುದ್ರಣ ಮಾಧ್ಯಮ ಉದ್ಯಮವನ್ನು ಸ್ಥಾಪಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅಗತ್ಯ ರಹದಾರಿ, ಅಗತ್ಯವಿರುವ ಮಾಹಿತಿಯನ್ನು ಪಡೆದು ಕೊಂಡೆ. ಆಗ ಈಗಿನಷ್ಟು ಭ್ರಷ್ಟಾಚಾರ, ಲಂಚಗುಳಿತನ, ವಿಳಂಬಧೋರಣೆ ಇಲ್ಲದೆ ಇದ್ದುದ್ದರಿಂದ ಎಲ್ಲವೂ ಸರಾಗವಾಗಿ ನಡೆದಿತ್ತು. ಈಗ ನಮ್ಮ ಸಂಸ್ಥೆಯಲ್ಲಿ 150 ಜನಕ್ಕೆ ಉದ್ಯೋಗ ನೀಡಿದ್ದೇವೆ. ನಮ್ಮ ಪಕ್ಕದಲ್ಲೇ ಅನೇಕ ವರ್ಷದಿಂದ ಖಾಲಿ ಬಿದ್ದಿರುವ ನಿವೇಶನವನ್ನು ಸರ್ಕಾರ, ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ

ಮೂಲಕ ಕಲ್ಪಿಸಿದ್ದರೆ, ನಮ್ಮ ಮುದ್ರಣ ಘಟಕವನ್ನು ವಿಸ್ತರಿಸಬಹುದಿತ್ತು. ಇದರಿಂದ ಇನ್ನೂ 50 ಜನಕ್ಕೆ ಉದ್ಯೋಗ ನೀಡಬಹುದಿತ್ತು. ಆದರೆ ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಲಿಲ್ಲ. ಕೊನೆಗೆ ಬೃಹತ್ ಯಂತ್ರೋಪಕರಣವನ್ನು ಅಳವಡಿಸುವ ಬದಲು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ಗಾದೆಯಂತೆ ಸಣ್ಣ ಪ್ರಮಾಣದ ಮುದ್ರಣ ಘಟಕ ಅಳವಡಿಸಿಕೊಳ್ಳಬೇಕಾಯಿತು. ಈಗ ನಾನು ಓರ್ವ ಯಶಸ್ವಿ ಉದ್ಯಮಿ. ಆದರೆ, ಸರ್ಕಾರದ ಸವಲತ್ತು ಇಲ್ಲವೆ ಸಹಕಾರದಿಂದಲ್ಲ. ಬದಲಾಗಿ ನಮ್ಮ ದೇಶದ 33 ಕೋಟಿ ದೇವರ ಆಶೀರ್ವಾದದಿಂದ! ಹೇಗೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಂದು ಪಕ್ಷ 104 ಸ್ಥಾನ, ಮತ್ತೊಂದು ಪಕ್ಷ 78 ಸ್ಥಾನ ಗಳಿಸಿದರೂ, ಅವು ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಕೇವಲ 38 ಸ್ಥಾನ ಪಡೆದಂತಹ ಪಕ್ಷ ರಾಜ್ಯದ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಪಕ್ಷಕ್ಕೂ 33 ಕೋಟಿ ದೇವತೆಗಳ ಆಶೀರ್ವಾದ ಖಂಡಿತ ಇರಬಹುದು ಎಂದು ಕೆ.ಬಿ.ಗಣಪತಿ ಹಾಸ್ಯ ಚಟಾಕಿ ಹಾರಿಸಿದರು.

Translate »