ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ
ಕೊಡಗು, ಮೈಸೂರು

ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ

June 15, 2018

ಮೈಸೂರು:  ಪರಿಸರವಾದಿಗಳು, ಗ್ರೀನ್ ಗ್ರೂಪ್ಸ್ ಮತ್ತು ಜನಪ್ರತಿನಿಧಿಗಳು ಒತ್ತಡಕ್ಕೆ ಮಣಿದ ಭಾರತೀಯ ರೈಲು ಮಂಡಳಿಯು ಮೈಸೂರು-ಮಡಿಕೇರಿ ರೈಲು ಮಾರ್ಗವನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ.ಮಡಿಕೇರಿ ಭಾಗದ ದಟ್ಟ ಅರಣ್ಯ ಪ್ರದೇಶದ ಮರಗಳು ನಾಶವಾಗುವುದನ್ನು ಮನಗಂಡು ರೈಲು ಮಾರ್ಗ ಯೋಜನೆಯನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ಮುಂದಾಗಿರುವ ರೈಲ್ವೇ ಇಲಾಖೆಯು, ನೈಸರ್ಗಿಕ ಸಂಪತ್ತು ಉಳಿಸುವ ನಿರ್ಧಾರ ಕೈಗೊಂಡಿದೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಕುಶಾಲನಗರ ಈಗಾಗಲೇ ಅಭಿವೃದ್ಧಿಯಾಗಿದೆ. ಇನ್ನೂ ವಿಸ್ತಾರವಾಗಿ ಮಡಿಕೇರಿಯಂತೆಯೇ ಬೆಳೆಯುವ ಎಲ್ಲಾ ಲಕ್ಷಣಗಳಿರುವುದರಿಂದ ಅಲ್ಲಿಂದ ಸೋಮವಾರಪೇಟೆ, ಸಿದ್ದಾಪುರ ಹಾಗೂ ಮಡಿಕೇರಿ ಸೇರಿದಂತೆ ಪ್ರಮುಖ ಕೇಂದ್ರಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿರುವುದರಿಂದ ಮೈಸೂರಿನಿಂದ ಕುಶಾಲನಗರದವರೆಗೆ ರೈಲು ಸಂಪರ್ಕವಿದ್ದರೆ ಸಾಕು ಎಂದು ನಾನು ಹಲವು ಭಾರಿ ಹೇಳಿದ್ದೆ ಎಂದರು.

ಮಡಿಕೇರಿ ನಗರಕ್ಕೆ ಸಂಪರ್ಕ ಸಾಧಿಸುವ ಸಲುವಾಗಿ ಕುಶಾಲನಗರ-ಮಡಿಕೇರಿ ನಡುವಿನ ದಟ್ಟ ಅರಣ್ಯದ ಮರಗಳನ್ನು ಕಡಿದು ಹಸಿರು ನಾಶಪಡಿಸುವುದು ಸರಿಯಲ್ಲ ಎಂದು ನಾನೇ ರೈಲ್ವೇ ಹಳಿ ನಿರ್ಮಾಣಕ್ಕೆ ಆಕ್ಷೇಪಿಸಿ ಕೇಂದ್ರ ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದೆ ಎಂದು ತಿಳಿಸಿದರು.

ಈಗಾಗಲೇ ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗಕ್ಕೆ ಸಮೀಕ್ಷೆ ಮುಗಿದಿದ್ದು, ಡಿಪಿಆರ್ ಸಮೇತ ಯೋಜನೆ ಅನುಷ್ಠಾನ ಮಾಡಲು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಮ್ಮೆ ಪಿಂಕ್ ಬುಕ್‍ಗೆ ದಾಖಲೆಯಾದಲ್ಲಿ ಶೀಘ್ರ ಅನುಮೋದನೆ ಸಿಗಲಿದೆ. 2016-17ರ ಕೇಂದ್ರ ರೈಲ್ವೇ ಬಜೆಟ್‍ನ ಯೋಜನೆಗಳಲ್ಲಿ ಸೇರ್ಪಡೆಯಾಗಿತ್ತು ಎಂದರು.

667 ಕೋಟಿ ರೂ.ಗಳ ಈ ಯೋಜನೆ ಬಲು ಹಳೆಯದಾಗಿದ್ದು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು. ಅರಣ್ಯ ಇಲಾಖೆ ಅನುಮತಿ ಸಿಗದೇ ಇದ್ದುದು ಯೋಜನೆ ವಿಳಂಬಕ್ಕೆ ಮತ್ತೊಂದು ಕಾರಣ ಎಂದು ಹೇಳಲಾಗಿದೆ.
ಕೇಂದ್ರ ಯೋಜನಾ ಸಚಿವ ಡಿ.ವಿ.ಸದಾನಂದಗೌಡರೂ ಅರಣ್ಯದೊಳಗೆ ಹೊಸ ರೈಲ್ವೆ ಮಾರ್ಗ ಯೋಜನೆ ಜಾರಿಗೊಳಿಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪರಿಸರ ಪ್ರೇಮಿಗಳು, ಗ್ರೀನ್ ಗ್ರೂಪ್ ಸದಸ್ಯರು ಹಾಗೂ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನೈರುತ್ಯ ರೈಲ್ವೇ ಪ್ರಕಾರ ಮೈಸೂರು-ಕುಶಾಲನಗರ ರೈಲು ಮಾರ್ಗದಿಂದ ಯಾವುದೇ ನೈಸರ್ಗಿಕ ಹಾನಿ ಇಲ್ಲ. ಪೂರ್ವ ಯೋಜಿತ ಸರ್ವೆ ನಡೆಸಿ ರೈಲ್ವೇ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಪಾಲುದಾರಿಕೆ ಇರುತ್ತದೆ.

ತಲಚೇರಿ-ಮೈಸೂರು ಮಾರ್ಗ: ತಲಚೇರಿ-ಮೈಸೂರು ರೈಲು ಮಾರ್ಗವು ದಕ್ಷಿಣ ಕೊಡಗು ಮಾರ್ಗವಾಗಿ ಹಾದು ಹೋಗುವುದರಿಂದ ಅರಣ್ಯ ನಾಶವಾಗುತ್ತದೆಯಾದ್ದರಿಂದ ಈ ಯೋಜನೆಗೆ ಅನುಮತಿ ನೀಡಬಾರದೆಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ ಎಂದರು.

ಕೊಡಗು ಭಾಗದ ಜನರೂ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಬೇಕು. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್ ಅವರಿಗೂ ನಾನು ಪತ್ರ ಬರೆದು ಹಲವು ಭಾರಿ ಮಾತನಾಡಿದ್ದೇನೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಸಹ ಮೈಸೂರು-ತಲಚೇರಿ ಯೋಜನೆಗೆ ಆಕ್ಷೇಪ ಸಲ್ಲಿಸಬೇಕು ಎಂದು ಪ್ರತಾಪ್ ಸಿಂಹ ತಿಳಿಸಿದರು.

Translate »