ಸಣ್ಣಪುಟ್ಟ ಸಮಸ್ಯೆ ಹೊತ್ತು ಜನ ಬೆಂಗಳೂರಿಗೆ ಬಂದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಮೈಸೂರು

ಸಣ್ಣಪುಟ್ಟ ಸಮಸ್ಯೆ ಹೊತ್ತು ಜನ ಬೆಂಗಳೂರಿಗೆ ಬಂದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 15, 2018

ಬೆಂಗಳೂರು: ನಾಗರಿಕರು, ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಹಿಡಿದುಕೊಂಡು ಬೆಂಗಳೂರಿಗೆ ಬರಲು ಕಾರಣರಾಗುವ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಕಟ್ಟಾದೇಶ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡ ನಂತರ ವಿಧಾನಸೌಧದ ಸಮ್ಮೇ ಳನ ಸಭಾಂಗಣದಲ್ಲಿ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಹಾಗೂ ಕಾರ್ಯ ದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸರ್ಕಾರದ ಆಡಳಿತ ಕುಸಿ ಯಲು ಕೆಳ ಹಂತದ ಅಧಿಕಾರಿಗಳೇ ಕಾರಣ ಎಂದಿದ್ದಾರೆ. ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಹಣ ಭರ್ತಿ ಮಾಡಲಾಗದೆ, ಸಮರ್ಪಕ ಚಿಕಿತ್ಸೆ ದೊರೆಯಲಿಲ್ಲವೆಂದೋ, ಕಂದಾಯ ಇಲಾಖೆ ದಾಖಲೆ ಪತ್ರ ನೀಡುತ್ತಿಲ್ಲವೆಂದು, ಸೂರಿಗಾಗಿ ಬೇಡಿಕೆ ಸೇರಿದಂತೆ ನನ್ನ ಜನತಾ ದರ್ಶನ ಕಾರ್ಯಕ್ರಮದಲ್ಲಿ ದೂರುಗಳ ಮಹಾಪೂರವೇ ಹರಿದು ಬಂದಿದೆ.

ನೀವು ಏನು ಮಾಡುತ್ತಿದ್ದೀರಿ? ಜನರಿಗೆ ಸರ್ಕಾರ ಇದೆ ಎಂಬ ಸಂದೇಶ ಹೋಗ ಬೇಕಿದೆ. ಇದಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅವರಿಂದ ಸರ್ಕಾರದ ಕೆಲಸ ತೆಗೆಯು ವಂತೆ ಮಾಡಿ, ಇನ್ನು ಮುಂದೆ ಯಾರೇ ಸಮಸ್ಯೆ ಹೇಳಿಕೊಂಡು ಬಂದರೆ, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ.

ನಾವು ಮತ್ತು ನೀವು ಒಂದು ಕುಟುಂಬದ ರೀತಿ ಕೆಲಸ ಮಾಡೋಣ. ಮುಖ್ಯಮಂತ್ರಿ ಎಂದು ನಿಮ್ಮ ಮೇಲೆ ದರ್ಪ, ದಬ್ಬಾಳಿಕೆ ನಡೆಸುವುದಿಲ್ಲ. ಸರ್ಕಾರ ಒಳ್ಳೆಯ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತದೆ. ಮುಖ್ಯ ಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹೇಳಿದ ಕೆಲಸ ಗಳನ್ನು ಅಧಿಕಾರಿಗಳು ಮಾಡಬೇಕು. ಅದರಂತೆ ಜನಪರ ವಾದ ಯೋಜನೆಗಳು ಕೂಡ ಅರ್ಹ ಫಲಾನುಭವಿ ಗಳಿಗೆ ತಲುಪಬೇಕು. ಸರ್ಕಾರ ಯೋಜನೆ ರೂಪಿಸಿದರೆ ಅದನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾ ಗಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಜತೆಯಾಗಿ ಕೆಲಸ ಮಾಡಬೇಕು. ನಾವೆಲ್ಲ ಒಂದು ಕುಟುಂಬದ ವ್ಯವಸ್ಥೆಯಂತೆ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ನಮ್ಮ ಸರ್ಕಾರ ಅಗತ್ಯವಾದ ಎಲ್ಲಾ ರಕ್ಷಣೆ ಒದಗಿಸಲು ಬದ್ಧವಾಗಿದೆ. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಎಷ್ಟೇ ಒತ್ತಡ ಬಂದರೂ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ನಿಮಗೆ ಅಗತ್ಯವಾದ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದು ಸಿಎಂ ಹೇಳಿದರು.

ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ನಾನೂ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನೀವು ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು. ಕೇಂದ್ರ ಸರ್ಕಾರ ಐದು ಲಕ್ಷ ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದೆ, ಇದರ ಜೊತೆಗೆ ನಮ್ಮಲ್ಲಿರುವ ಹಣ ಬಳಕೆ ಮಾಡಿ ಸೂರು ಇಲ್ಲದವರಿಗೆ ಸೂರು ಕೊಡಿ. ಮನೆಗಾಗಿ ದಿನನಿತ್ಯ ಸಾಕಷ್ಟು ಅರ್ಜಿಗಳು ಬರುತ್ತಿವೆ, ಇನ್ನು ಮುಂದೆ ಇಂತಹದ್ದಕ್ಕೆ ಅವಕಾಶ ಬೇಡ. ಮೊದಲು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಎಷ್ಟು ಮಂದಿಗೆ ಸೂರಿಲ್ಲ ಎಂಬುದನ್ನು ಸರ್ವೆ ಮಾಡಿಸಿ, ಅದೇ ಸಮಯಕ್ಕೆ ಆಶ್ರಯ ಮನೆ ನಿರ್ಮಾಣಕ್ಕಾಗಿ ಸರ್ಕಾರಿ ಭೂಮಿ ಗುರುತಿಸಿ. ಒಂದು ವೇಳೆ ಸರ್ಕಾರದ ಭೂಮಿ ಲಭ್ಯವಿಲ್ಲದಿ ದ್ದರೆ ಖಾಸಗಿಯವರಿಂದ ಖರೀದಿಸಿ, ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಿ ಎಂದು ಕಟ್ಟಾದೇಶ ಮಾಡಿದರು.

ಖಾತೆ, ಪಹಣಿಗಾಗಿ ರೈತರು ಮೂರ್ನಾಲ್ಕು ತಿಂಗಳು ತಹಸೀಲ್ದಾರ್ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದು ತಪ್ಪಬೇಕು. ಇನ್ನು ಮುಂದೆ ಖಾತೆ, ಪಹಣಿಗಳನ್ನು ತಕ್ಷಣ ಮಾಡಿಕೊಡುವ ವ್ಯವಸ್ಥೆಯನ್ನು ಅಧಿಕಾರಿಗಳು ಜಾರಿಗೆ ತರಬೇಕೆಂದು ಕಟ್ಟಪ್ಪಣೆ ಮಾಡಿದರು.

ನಮ್ಮ ಸರ್ಕಾರ ವಸತಿ, ಶಿಕ್ಷಣ, ಆರೋಗ್ಯ, ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಂಡು ಜನಪರವಾಗಿ ಕೆಲಸ ಮಾಡ ಬೇಕು ಎಂದು ಸೂಚಿಸಿದರು.

ಉದ್ಯೋಗ ಮೇಳಗಳಿಂದ ಆಗುವ ಪ್ರಯೋಜನಗಳೇನು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಉದ್ಯೋಗ ಸೃಷ್ಟಿಸಲು ಹೆಚ್ಚು ಆದ್ಯತೆ ನೀಡಬೇಕಿದೆ. ಉದ್ಯೋಗ ಸೃಷ್ಟಿಯ ನೆಪದಲ್ಲಿ ಎಲ್ಲೆಡೆ ಉದ್ಯೋಗ ಮೇಳಗಳನ್ನು ನಡೆಸಲಾಗಿದೆ. ಇದಕ್ಕಾಗಿ 50 ಲಕ್ಷದಿಂದ ಒಂದು ಕೋಟಿ ವರೆಗೂ ಜಿಲ್ಲೆ, ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಉದ್ಯೋಗ ಮೇಳದಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಮಾಹಿತಿ ಯನ್ನು ನೀಡುವಂತೆ ಕುಮಾರಸ್ವಾಮಿ ಸೂಚನೆ ನೀಡಿದರು.

ಜಿಲ್ಲಾ ಮಟ್ಟದಲ್ಲಿರುವ ಕಾರ್ಖಾನೆಗಳ ಜತೆ ಸಮನ್ವಯತೆ ಇಲ್ಲದೆ ಉದ್ಯೋಗ ಮೇಳಗಳನ್ನು ನಡೆಸಿದರೆ ಪ್ರಯೋಜನವಾಗುವುದಿಲ್ಲ. ಇನ್ನು ಮುಂದೆ 15 ದಿನಕ್ಕೊಮ್ಮೆ ಉದ್ಯೋಗ ನೋಂದಣಿ ಜಾರಿಗೆ ತರಬೇಕು. ಜಿಲ್ಲಾಧಿಕಾರಿಗಳು, ಸಿಇಓ, ಎಸ್‍ಪಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು. ವಿಕಲ ಚೇತನ ಇಲಾಖೆಯ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು.

ಸಮಿತಿ ಸ್ಥಳೀಯವಾಗಿ ಕಾರ್ಖಾನೆಗಳು ಮತ್ತು ಔದ್ಯೋಗಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಗಳನ್ನು ಪಡೆದುಕೊಂಡು 15 ದಿನಕ್ಕೊಮ್ಮೆ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.

ಆರ್.ಟಿ.ಇ ಕಾಯ್ದೆಗಳನ್ನು ಸಮಗ್ರವಾಗಿ ಜಾರಿಗೆ ತರಬೇಕಾದ ಶಿಕ್ಷಣ ಇಲಾಖೆಯ ಬಿಇಓಗಳು ಡಿಡಿಪಿಐಗಳು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಕಿಡಿಕಾರಿದರು. ಮಧ್ಯಮ ವರ್ಗದ ಜನರಿಗೂ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಆರ್‍ಟಿಇ ಕಾಯ್ದೆ ಜಾರಿಗೆ ಬಂದಿದೆ. ಆದರೆ, ಅದು ಸಮರ್ಪಕವಾಗಿ ಜಾರಿ ಆಗುತ್ತಿಲ್ಲ. ಖಾಸಗಿ ಶಾಲೆಗಳು ಸರ್ಕಾರದಿಂದಲೂ ಹಣ ಪಡೆದು ಮಕ್ಕಳ ಪೋಷಕರಿಂದಲೂ ವಂತಿಗೆ ಪಡೆಯುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಬೇಕಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಹೆಚ್ಚಿಸಲು ಪ್ರಯತ್ನಿ ಸಬೇಕಿದೆ ಎಂದು ಸಿಎಂ ಸೂಚನೆ ನೀಡಿದರು.

ನಾವು ಬಯಸುವುದು ಕುಡಿಯುವ ನೀರು, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ಸೌಲಭ್ಯಗಳನ್ನು. ಅದನ್ನು ನಾವು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ತಿಳಿಸಿದರು.

Translate »