ವಿದ್ವತ್ ಮೇಲಿನ ಹಲ್ಲೆ ಪ್ರಕರಣ ನಲಪಾಡ್‍ಗೆ ಜಾಮೀನು 116 ದಿನಗಳ ಜೈಲು ವಾಸ ಅಂತ್ಯ
ಮೈಸೂರು

ವಿದ್ವತ್ ಮೇಲಿನ ಹಲ್ಲೆ ಪ್ರಕರಣ ನಲಪಾಡ್‍ಗೆ ಜಾಮೀನು 116 ದಿನಗಳ ಜೈಲು ವಾಸ ಅಂತ್ಯ

June 15, 2018

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲ್ ಪಾಡ್‍ಗೆ ಹೈಕೋರ್ಟ್‍ನಿಂದ ಷರತ್ತುಬದ್ಧ ಜಾಮೀನು ದೊರೆತಿದೆ.

ಕಳೆದ 116 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ರುವ ನಲ್‍ಪಾಡ್‍ನ ಜಾಮೀನು ಅರ್ಜಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ಇಂದು ಪ್ರಕಟಿಸಿದರು.

ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ, ಕೋರ್ಟ್ ವಶಕ್ಕೆ ಪಾಸ್ ಪೋರ್ಟ್ ನೀಡ ಬೇಕು. 2 ಲಕ್ಷ ಭದ್ರತಾ ಠೇವಣಿ , ಇಬ್ಬರ ಶ್ಯೂರಿಟಿ ಮತ್ತು ವಿಚಾರಣೆಗೆ ಸಹಕರಿಸಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದ್ದಾರೆ.

ಕಳೆದ ಫೆ.17ರಂದು ನಗರದ ಯುಬಿ ಸಿಟಿಯಲ್ಲಿರುವ ಫರ್ಜಿ ಕೆಫೆ ರೆಸ್ಟೋರೆಂಟ್‍ನಲ್ಲಿ ಊಟ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕಾರಣಕ್ಕೆ ಮಹಮ್ಮದ್ ನಲ್‍ಪಾಡ್ ಮತ್ತು ಆತನ ಸ್ನೇಹಿತರು ಉದ್ಯಮಿ ಪುತ್ರ ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.

ನಂತರ ತಲೆಮರೆಸಿಕೊಂಡಿದ್ದ ನಲ್‍ಪಾಡ್ ಫೆ.19ರಂದು ಪೊಲೀಸರಿಗೆ ಶರಣಾಗಿದ್ದ. ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿದ್ದು, 600 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಮಹಮ್ಮದ್ ನಲ್‍ಪಾಡ್, ಅರುಣ್‍ಬಾಬು, ಶ್ರೀಕೃಷ್ಣ, ಮಂಜುನಾಥ್, ಅಶ್ರಫ್, ಬಾಲಕೃಷ್ಣ, ಅಭಿಷೇಕ್ ಆರೋಪಿಗಳಾಗಿದ್ದರು. ಜಾಮೀನು ಪಡೆಯಲು ಐದು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್‍ನಲ್ಲಿ ಜಾಮೀನು ದೊರೆತಿರಲಿಲ್ಲ. ಚಾರ್ಜ್‍ಶೀಟ್ ಸಲ್ಲಿಕೆಯಾದ ನಂತರ ಸುದೀರ್ಘ ವಿಚಾರಣೆಯಾಗಿ ಸದ್ಯ ಜಾಮೀನು ದೊರೆತಿದೆ.

ನಲ್‍ಪಾಡ್ ಪರ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಷನ್ ಪರ ವಿಶೇಷ ಅಭಿ ಯೋಜಕರಾಗಿ ಶ್ಯಾಮ್‍ಸುಂದರ್ ವಾದ ಮಂಡಿಸಿದ್ದರು. ಫರ್ಜಿ ಕೆಫೆಯಲ್ಲಿ ಹಲ್ಲೆ ನಡೆಸಿದ್ದಲ್ಲದೆ ಆಸ್ಪತ್ರೆಗೂ ನುಗ್ಗಿ ಹಲ್ಲೆ ನಡೆಸಿದ್ದಾರೆಂಬ ವಿಷಯ ಭಾರೀ ಚರ್ಚೆಗೆ ಕಾರಣವಾಗಿ ದೇಶಾದ್ಯಂತ ಸುದ್ದಿಯಾಗಿತ್ತಲ್ಲದೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಜಾಮೀನು ದೊರೆಯಿತೆಂದು ಪಟಾಕಿ ಸಿಡಿಸಿ ಸಂಭ್ರಮಿಸಬೇಡಿ ಎಂದು ನಲ್‍ಪಾಡ್ ಪರ ವಕೀಲರಾದ ಬಿ.ವಿ.ಆಚಾರ್ಯ, ಅವರ ಕುಟುಂಬದವರಿಗೆ ಸಲಹೆ ಮಾಡಿದ್ದಾರೆ. ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕ ನಲ್‍ಪಾಡ್ ಸ್ನೇಹಿತರು, ಅವರ ಕುಟುಂಬದವರು ಜೈಲಿನ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸುವುದಾಗಲೀ, ಮೆರವಣ ಗೆ ಮಾಡುವುದಾಗಲೀ, ಜೈಲಿನ ಬಳಿ ಗುಂಪು ಸೇರುವುದಾಗಲೀ ಮಾಡದಿರುವುದು ಒಳ್ಳೆಯದು. ಅವರ ಕುಟುಂಬದ ಕೆಲವರು ಮಾತ್ರ ಜೈಲಿನ ಬಳಿ ಹೋದರಷ್ಟೆ ಸಾಕು ಎಂದು ಕಿವಿಮಾತು ಹೇಳಿದ್ದಾರೆ.

Translate »