ಗ್ರಾಹಕರ ತೀವ್ರ ಅಸಮಾಧಾನ
ಮೈಸೂರು

ಗ್ರಾಹಕರ ತೀವ್ರ ಅಸಮಾಧಾನ

May 31, 2018

ಮೈಸೂರು: ದೇಶವ್ಯಾಪಿ 2 ದಿನ ಬ್ಯಾಂಕ್ ನೌಕರರು ಮುಷ್ಕರದಲ್ಲಿ ನಿರತರಾಗಿರುವುದ ರಿಂದ ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ದಿನ ನಿತ್ಯದ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುವುದಲ್ಲದೆ, ಸಗಟು ವ್ಯಾಪಾರಸ್ಥರಿಂದ ತರಿಸಿದ ಸರಕಿಗೆ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಷ್ಕರ ಇಡೀ ಆರ್ಥಿಕ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೆಬ್ಬಾಳಿನ ಲೇಖನ ಸಾಮಗ್ರಿ ಹಾಗೂ ತಾರಸಿ ಮೌಲ್ಡಿಂಗ್ ಚಾಪೆ ವ್ಯಾಪಾರಿ ಕೆ.ಕಾಂತರಾಜು ಅಭಿಪ್ರಾಯಪಟ್ಟಿದ್ದಾರೆ.

ಇಟ್ಟಿಗೆ ಕಾರ್ಖಾನೆ ಮತ್ತು ಟ್ರಾನ್ಸ್‍ಪೋರ್ಟ್ ಉದ್ಧಿಮೆ ನಡೆಸುತ್ತಿರುವ ನಮಗೆ ಸಾಮಗ್ರಿ ಖರೀದಿಸುವವರು ನೀಡಿದ ಚೆಕ್ ಅನ್ನು ನಗದಾಗಿಸಲು ಬ್ಯಾಂಕ್ ಮುಷ್ಕರದಿಂದ ತೊಂದರೆಯಾಗಿದೆ. ಕಚ್ಚಾವಸ್ತು ಪೂರೈಸಿದವರಿಗೆ ಹಣ ಟ್ರಾನ್ಸ್‍ಫರ್ ಮಾಡುವುದಾದರೂ ಹೇಗೆ? ಸರಿಯಾದ ಸಮಯದಲ್ಲಿ ಹಣ ನೀಡದಿದ್ದರೆ ವ್ಯವಹಾರದ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಸಾಧ್ಯವೇ ಎಂದು ಉದ್ಯಮಿ ಟಿ.ಶ್ರೀಕಾಂತ `ಮೈಸೂರು ಮಿತ್ರ’ ನಲ್ಲಿ ತನ್ನ ಅಳಲು ತೋಡಿಕೊಂಡರು. ಎರಡು ದಿನಗಳ ಕಾಲ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ನಿರತರಾಗಿರುವುದು ಹಲವು ವಾಣ ಜ್ಯ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಬಿಲ್ಡರ್ ಆರ್. ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಇಂದು ರಾತ್ರಿಯೊಳಗೆ ಎಟಿಎಂಗಳಲ್ಲಿ ಹಣ ಬರಿದಾಗುತ್ತದೆ. ಅತ್ತ ಖಾಸಗಿ ಬ್ಯಾಂಕ್‍ಗಳಲ್ಲೂ ಖಾತೆ ಹೊಂದಿರದ ಗ್ರಾಹಕರಿಗೆ ಎರಡು ದಿನಗಳ ಕಾಲ ಕ್ಯಾಷ್ ನಿರ್ವಹಿಸುವುದು ಕಷ್ಟ ಸಾಧ್ಯ ಎಂದರು. ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಸಗಟು ಅಕ್ಕಿ ವ್ಯಾಪಾರಿ ಎಸ್. ಮನೋಹರ್ ಪ್ರತಿಕ್ರಿಯೆ ನೀಡಿ, ಆಗಿಂದಾಗ್ಯೆ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವುದು ಒಳ್ಳೆಯ ಬೆಳವಣ ಗೆ ಅಲ್ಲ. ಇವರು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಾರೆ. ಇವರು ಮುಷ್ಕರದಿಂದ ಬಹುತೇಕ ವ್ಯಾಪಾರ- ವಹಿವಾಟಿನಲ್ಲಿ ವ್ಯತ್ಯಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾಂಕ್ ವಹಿವಾಟುಗಳನ್ನು ಪದೇ ಪದೆ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ತಮ್ಮ ಬೇಡಿಕೆಗಳ ಈಡೇರಿಕೆಗೆ ಅನ್ಯ ಮಾರ್ಗಗಳನ್ನು ಅನುಸರಿಸಲಿ, ಆದರೆ, ಬ್ಯಾಂಕ್ ಬಂದ್ ಮಾಡಿದರೆ ಅದನ್ನೇ ಅವಲಂಭಿಸಿರುವವರಿಗೆ ತೊಂದರೆ ಮಾತ್ರವಲ್ಲ ಬಾರೀ ನಷ್ಟವಾಗುತ್ತದೆ ಎಂದು ಜೆರಾಕ್ಸ್ ಅಂಗಡಿ ಮಾಲೀಕ ಮಹದೇವನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

Translate »