ವೇತನ ಪರಿಷ್ಕರಣೆಗೆ ಆಗ್ರಹಿಸಿ: ದೇಶವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಆರಂಭ
ಮೈಸೂರು

ವೇತನ ಪರಿಷ್ಕರಣೆಗೆ ಆಗ್ರಹಿಸಿ: ದೇಶವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಆರಂಭ

May 31, 2018

ಮೈಸೂರು:  ವೇತನ ಪರಿಷ್ಕರಣೆಯೂ ಸೇರಿದಂತೆ ಹಲವು ಬಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಇಂದಿನಿಂದ ಎರಡು ದಿನಗಳ ಕಾಲದ ಮುಷ್ಕರವನ್ನು ದೇಶಾದ್ಯಂತ ಆರಂಭಿಸಿದ್ದಾರೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪರಿಣಾಮ ಬ್ಯಾಂಕ್ ಶಾಖೆಗಳು ಬಂದ್ ಆಗಿರುವುದರಿಂದ ಆರ್ಥಿಕ ಹಾಗೂ ವಾಣ ಜ್ಯ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಮೈಸೂರಿನ ಟಿಕೆ ಬಡಾವಣೆಯ ಶ್ರೀಕೃಷ್ಣಧಾಮದ ಎದುರು ಇರುವ ಎಸ್‍ಬಿಐ, ಪ್ರಾದೇಶಿಕ ಕಚೇರಿ ಬಳಿ ಜಮಾಯಿಸಿದ ಎಸ್‍ಬಿಐ, ಸಿಂಡಿಕೇಟ್, ಕರ್ನಾಟಕ, ವಿಜಯಾ ಬ್ಯಾಂಕ್ ಸೇರಿದಂತೆ ಇನ್ನಿತರ ಬ್ಯಾಂಕ್ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ 2017ರ ನವೆಂಬರ್ ಮಾಹೆಯಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನಾವು ಮನವಿ ಮಾಡಿದಾಗ ಕೇವಲ ಶೇ.2ರಷ್ಟು ವೇತನ ಹೆಚ್ಚಿಸುತ್ತೇವೆಂದು ಹೇಳಿರುವ ಕೇಂದ್ರವು, ನಮ್ಮನ್ನು ತುಚ್ಛವಾಗಿ ಕಾಣುತ್ತಿರುವುದರಿಂದ ದೇಶಾದ್ಯಂತ ಮುಷ್ಕರಕ್ಕೆ ನಿರ್ಧರಿಸಲಾಯಿತು ಎಂದು ತಮ್ಮ ಮುಷ್ಕರವನ್ನು ಸಮರ್ಥಿಸಿಕೊಂಡರು.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್  ನ್ಯಾಷನಲ್ ಕಾನ್‍ಫೆಡರೇಷನ್ ಆಫ್ ಬ್ಯಾಂಕ್ ಎಂಪ್ಲಾಯೀಸ್ (ಓಅಃಇ), ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಂತರ ಸರಸ್ವತಿಪುರಂ, ಕಾಮಾಕ್ಷಿ ಆಸ್ಪತ್ರೆ, ವಿಶ್ವಮಾನವ ಜೋಡಿ ರಸ್ತೆಯಲ್ಲಿ ಮೆರವಣ ಗೆ ನಡೆಸಿದ ಪ್ರತಿಭಟನಾಕಾರರು ಮರಳಿ ಎಸ್‍ಬಿಐ ರೀಜನಲ್ ಕಚೇರಿ ಬಳಿಗೆ ತೆರಳಿ ಕೆಲ ಕಾಲ ಪ್ರತಿಭಟನೆ ನಡೆಸಿದ ನಂತರ ಬ್ಯಾಂಕ್ ನೌಕರರು ತೆರಳಿದರು.

ಆಲ್ ಇಂಡಿಯಾ ಬ್ಯಾಂಕ್ ಅಫೀಸರ್ಸ್ ಕಾನ್‍ಫೆಡರೇಷನ್ ಅಧ್ಯಕ್ಷ ಶಿವಪ್ರಸಾದ್, ಎಸ್‍ಬಿಐ ಆಫೀಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಂ, ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರಸನ್ನ, ಪಿಓಬಿ ಆಫೀಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎನ್.ಸ್ವಾಮಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮತ್ತೊಂದೆಡೆ ನಜರ್‍ಬಾದಿನಲ್ಲಿರುವ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಬಳಿ ನೂರಾರು ಮಂದಿ ಪ್ರತಿಭಟನೆ ನಡೆಸಿ ವೇತನ ಪರಿಷ್ಕರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ನಾಯಕ್, ಎಂ.ಎನ್.ರಮೇಶ್ ಸೇರಿದಂತೆ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಎಲ್ಲಾ ರಾಷ್ಟ್ರೀಯ ಬ್ಯಾಂಕ್ ಶಾಖೆಗಳು ಬಂದ್ ಆಗಿದ್ದವಾದರೂ, ಎಟಿಎಂಗಳು ಮಾತ್ರ ಎಂದಿನಂತೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಹಣ ಡ್ರಾ ಮಾಡುವುದಕ್ಕೆ ತೊಂದರೆಯಾಗಲಿಲ್ಲ. ಇಂದು ಸಂಜೆವರೆಗೂ ಎಟಿಎಂ ಕೌಂಟರ್‍ಗಳಲ್ಲಿ ಹಣ ಲಭ್ಯವಾಯಿತು.

ಆದರೆ ಡಿಡಿ ಖರೀದಿಸುವವರು, ಹಣ ಟ್ರಾನ್ಸ್‍ಫರ್, ಆರ್‍ಟಿಜಿಎಸ್, ಚೆಕ್ ಕ್ಲಿಯರೆನ್ಸ್‍ನಂತಹ ಬ್ಯಾಂಕ್ ವಹಿವಾಟು ನಡೆಸುವವರಿಗೆ ಬ್ಯಾಂಕ್ ಮುಷ್ಕರದಿಂದ ತೀವ್ರ ತೊಂದರೆಯಾಗಿದೆ.

Translate »