ಸತತ ಎರಡು ದಿನಗಳ ಬ್ಯಾಂಕ್ ಬಂದ್ ಎಫೆಕ್ಟ್ : ಎಟಿಎಂಗಳಲ್ಲೂ ಹಣ ಖಾಲಿ…ಖಾಲಿ… ಪರದಾಡಿದ ಗ್ರಾಹಕರು
ಮೈಸೂರು

ಸತತ ಎರಡು ದಿನಗಳ ಬ್ಯಾಂಕ್ ಬಂದ್ ಎಫೆಕ್ಟ್ : ಎಟಿಎಂಗಳಲ್ಲೂ ಹಣ ಖಾಲಿ…ಖಾಲಿ… ಪರದಾಡಿದ ಗ್ರಾಹಕರು

June 1, 2018

ಮೈಸೂರು: ಎರಡು ದಿನಗಳ ಕಾಲ ರಾಷ್ಟ್ರೀಯ ಬ್ಯಾಂಕ್‍ಗಳು ಬಂದ ಆಗಿದ್ದ ಕಾರಣ ಬುಧವಾರ ರಾತ್ರಿಯೇ ಎಟಿಎಂಗಳಲ್ಲಿ ಹಣ ಬರಿದಾಗಿತ್ತು.

ಎಟಿಎಂಗಳಲ್ಲಿ ಹಣ ಇಲ್ಲದ ಕಾರಣ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಉದ್ಯಮಿಗಳು, ವ್ಯಾಪಾರಿಗಳು, ವಾಣ ಜ್ಯ ವಹಿವಾಟು ನಡೆಸುವವರೂ ಸೇರಿದಂತೆ ಎಲ್ಲಾ ಬ್ಯಾಂಕ್ ಗ್ರಾಹಕರು ಗುರುವಾರ ಪರದಾಡುವಂತಾಯಿತು.

ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಖಾತೆಗಳಿಗೆ ಹಣ ಜಮೆ ಮಾಡುವವರು, ಹಿಂಪಡೆಯುವವರು, ಡಿಡಿ, ಖರೀದಿ, ಹಣ ವರ್ಗಾವಣೆ, ಆರ್‍ಟಿಜಿಎಸ್, ಚೆಕ್ ಸರೆಂಡರ್, ಚೆಕ್ ಕ್ಲಿಯರೆನ್ಸ್, ಕಂತಿನ ಹಣ ಪಾವತಿಸುವುದೂ ಸೇರಿದಂತೆ ಎಲ್ಲಾ ಬಗೆಯ ಬ್ಯಾಂಕ್ ಸೇವೆಗಳು ಸಂಪೂರ್ಣ ಸ್ಥಗಿತ ಗೊಂಡಿದ್ದ ಕಾರಣ ವಹಿವಾಟು ನಡೆಸಲು ಸಾರ್ವ ಜನಿಕರಿಗೆ ತೀವ್ರ ತೊಂದರೆಯಾಯಿತು. ಬುಧವಾರವೇ ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು, ಇತ್ತ ಬ್ಯಾಂಕ್ ಗಳೂ ಬಂದ್ ಆಗಿದ್ದರಿಂದ ಹಣ ಸಿಗದೆ ಅಸಮಾಧಾನ ಗೊಂಡ ಸಾರ್ವಜನಿಕರು, ಬ್ಯಾಂಕ್ ನೌಕರರಿಗೆ ಹಿಡಿಶಾಪ ಹಾಕುತ್ತಿದ್ದುದ್ದು ಗುರುವಾರ ಮೈಸೂರಿನಲ್ಲಿ ಕಂಡು ಬಂದಿತು.

ಯುನೈಟೆಟ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್  ಕರೆ ನೀಡಿದ್ದ ಮುಷ್ಕರದಿಂದ ಕಮರ್ಷಿ ಯಲ್ ಬ್ಯಾಂಕುಗಳು, ಹಳೇ ತಲೆಮಾರಿನ ಬ್ಯಾಂಕುಗಳೂ ಸೇರಿದಂತೆ ದೇಶದ ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳು ವಹಿವಾಟು ಸ್ಥಗಿತಗೊಳಿಸಿ ಎರಡು ದಿನಗಳ ಮುಷ್ಕರದಲ್ಲಿ ನಿರತರಾಗಿರುವ ನೌಕರರು ಹಾಗೂ ಅಧಿಕಾರಿಗಳ ವಿರುದ್ದ ಬ್ಯಾಂಕ್ ವಹಿವಾಟುಗಳನ್ನು ಅವಲಂಬಿಸಿರುವ ಗ್ರಾಹಕರಿಗೆ ತೀವ್ರ ತೊಂದರೆ ಉಂಟಾಗಿದೆ. ಬುಧವಾರ ಮೊದಲ ದಿನವಾದ್ದರಿಂದ ಹಾಗೂ ರಾತ್ರಿವರೆಗೂ ಎಟಿಎಂ ಕೌಂಟರ್ ಗಳಲ್ಲಿ ಹಣ ಲಭ್ಯವಾಗುತ್ತಿದ್ದ ಕಾರಣ ಜನರಿಗೆ ಅಷ್ಟಾಗಿ ಹಣದ ತೊಂದರೆ ಬಿಸಿ ತಟ್ಟಿರಲಿಲ್ಲ, ಆದರೆ ಎರಡನೇ ದಿನವಾದ ಇಂದು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಎಟಿಎಂಗಳಲ್ಲಿ ಹಣ ದೊರೆಯದ ಕಾರಣ ಜನರು ಪರದಾಡು ವಂತಾಯಿತು. ಪರಿಣಾಮ ಮೈಸೂರಿನಲ್ಲಿರುವ ಹೆಚ್‍ಡಿಎಫ್‍ಸಿ, ಐಸಿಐಸಿಐನಂತಹ ಖಾಸಗಿ ಬ್ಯಾಂಕುಗಳ ಎಟಿಎಂಗಳಿಗೆ ಜನರು ಮುಗಿಬೀಳುತ್ತಿದ್ದರು.

ಬಹುತೇಕ ಮೈಸೂರಿನಲ್ಲಿರುವ ಎಲ್ಲಾ ಖಾಸಗಿ ಬ್ಯಾಂಕ್ ಎಟಿಎಂಗಳ ಬಳಿ ಗ್ರಾಹಕರು ಹಣ ಡ್ರಾ ಮಾಡಲು ಸಾಲುಗಟ್ಟಿ ನಿಂತಿದ್ದರು. ಕೆಲವೆಡೆ ಇಂದು ಮಧ್ಯಾಹ್ನವೇ ಹಣ ಖಾಲಿಯಾಗಿದ್ದುದೂ ಕಂಡು ಬಂದಿತು. ಬ್ಯಾಂಕ್‍ಗಳಲ್ಲಿ ಕರೆಂಟ್ ಅಕೌಂಟ್ ನಿರ್ವಹಿಸು ತ್ತಿರುವ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆ, ಶಿವರಾಂಪೇಟೆ, ಸಂತೆಪೇಟೆ, ದೇವರಾಜ ಮಾರ್ಕೆಟ್, ಮಂಡಿ ಮಾರ್ಕೆಟ್, ಮಕ್ಕಾಜಿ ಚೌಕ, ಹಳೇ ಆರ್‍ಎಂಸಿ ಸೇರಿದಂತೆ ಎಲ್ಲಾ ವಾಣ ಜ್ಯ ಉದ್ಯಮಿಗಳು, ವರ್ತಕರುಗಳಿಗೆ ಬ್ಯಾಂಕ್ ಮುಷ್ಕರದ ಬಿಸಿ ತಟ್ಟಿದೆ.

ಎರಡನೇ ದಿನವಾದ ಇಂದು ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಎಸ್‍ಬಿಐ ರೀಜಿನಲ್ ಕಛೇರಿ ಬಳಿ ಜಮಾಯಿಸಿದ್ದ 500ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪ್ರತಿಭಟನೆ ನಡೆಸಿ ವೇತನ ಹೆಚ್ಚಳ, ಖಾಲಿ ಹುದ್ದೆಗಳ ಭರ್ತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ನಾಳೆ(ಜೂನ್ 1)ಯಿಂದ ಬ್ಯಾಂಕ್‍ಗಳು ಪುನಾರಂಭಗೊಳ್ಳಲಿದ್ದು, ಶುಕ್ರವಾರ ಬೆಳಿಗ್ಗೆಯೇ ಎಟಿಎಂಗಳಿಗೆ ಹಣ ತುಂಬಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Translate »