ಚಿಕ್ಕಬಳ್ಳಾಪುರ ಜೈಲಿನಲ್ಲಿ ಬನ್ನೂರು ಯುವಕ ಸಾವು
ಮೈಸೂರು

ಚಿಕ್ಕಬಳ್ಳಾಪುರ ಜೈಲಿನಲ್ಲಿ ಬನ್ನೂರು ಯುವಕ ಸಾವು

September 28, 2021

ಮೈಸೂರು, ಸೆ.27(ಆರ್‍ಕೆ)- ಬೆಂಗಳೂರಿನಲ್ಲಿ ಕೊಲ್ಕತ್ತಾ ಮೂಲದ ಯುವತಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ತಿ.ನರಸೀಪುರ ತಾಲೂಕಿನ ಯುವಕ ಚಿಕ್ಕಬಳ್ಳಾಪುರದ ಅಣಕನೂರು ಜೈಲಿನಲ್ಲಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕು, ಬನ್ನೂರು ಹೋಬಳಿ ಹೆಗ್ಗೂರು ಗ್ರಾಮದ ಮಹದೇವಶೆಟ್ಟಿ ಅವರ ಮಗ ಹೆಚ್.ಎಂ. ನಾಗೇಶ (24) ಸಾವನ್ನಪ್ಪಿದ ಆರೋಪಿ. ಆರೋಗ್ಯದಿಂದಿದ್ದ ಆತ, ಶುಕ್ರವಾರ ರಾತ್ರಿ ಊಟ ಮಾಡಿದ ನಂತರ ವಾಂತಿಯಾಗಿದೆ. ತಡರಾತ್ರಿ ಸುಮಾರು 11.20 ಗಂಟೆ ವೇಳೆಗೆ ಮೃತಪಟ್ಟನೆಂದು ಮರುದಿನ ಬೆಳಿಗ್ಗೆ 8.26 ಗಂಟೆ ವೇಳೆಗೆ ಜೈಲು ಅಧಿಕಾರಿಗಳು ಮಾಹಿತಿ ನೀಡಿದರು ಎಂದು ನಾಗೇಶ ಅವರ ಭಾವ ಮಹೇಶ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್ ಬಳಿ ವಾಸಿಸುತ್ತಿದ್ದ ನಾಗೇಶ ಹಗಲಿನಲ್ಲಿ ಕ್ಯಾಬ್ ಚಾಲನೆ ಮಾಡಿಕೊಂಡು ಸಂಜೆ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡು ತ್ತಿದ್ದ. ನ್ಯಾಯವಾದಿಯಾಗಬೇಕೆಂದು ಕನಸು ಕಂಡಿದ್ದ ಆತ, 2019ರಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲ್ಕತ್ತಾ ಮೂಲದ ಯುವತಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ, ಚಿಕ್ಕಬಳ್ಳಾಪುರ ಬಳಿಯ ಅಣಕನೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಎಂದು ಅವರು ತಿಳಿಸಿದರು.

ಸಾವನ್ನಪ್ಪಿದ ದಿನ ಸಂಜೆ ಪೋಷಕರಿಗೆ ಫೋನ್ ಮಾಡಿ ತಾನು ಆರೋಗ್ಯ ವಾಗಿದ್ದು, ಜಾಮೀನಿಗೆ ಪ್ರಯತ್ನ ಮಾಡಿ ಎಂದು ಹೇಳಿದ್ದ ನಾಗೇಶ, ರಾತ್ರಿ ವೇಳೆಗೆ ಸಾವನ್ನಪ್ಪಿರುವುದು ಹಾಗೂ ಮರುದಿನ ಶನಿವಾರ ಬೆಳಗ್ಗೆ ವರೆಗೂ ಜೈಲು ಅಧಿಕಾರಿಗಳು ಮಾಹಿತಿ ನೀಡದಿರುವುದು ಸಂಶಯ ಮೂಡಿ ಸಿದೆ. ರಾತ್ರಿ ಊಟ ಮಾಡಿದ ಜೈಲು ಖೈದಿಗಳ ಪೈಕಿ ಇವನೊಬ್ಬನಿಗೆ ಮಾತ್ರ ವಾಂತಿಯಾಗಿ ಕೊನೆಯುಸಿರೆಳೆದ ಎಂದು ಹೇಳುತ್ತಿರುವುದು ಸಹ ಸಂಶಯಕ್ಕೆ ಎಡೆಮಾಡಿಕೊಟ್ಟಿರುವುದರಿಂದ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಹಿಸಿ ತಮಗೆ ನ್ಯಾಯ ಒದಗಿಸು ವಂತೆ ಕುಟುಂಬದವರು ಚಿಕ್ಕಬಳ್ಳಾಪುರ ಠಾಣೆಗೆ ದೂರು ನೀಡಿದ್ದಾರೆ ಎಂದು ಮಹೇಶ ತಿಳಿಸಿದರು. ಭಾನುವಾರ ಮಧ್ಯಾಹ್ನ 1.30ಕ್ಕೆ ಹೆಗ್ಗೂರು ಗ್ರಾಮದಲ್ಲಿ ನಾಗೇಶ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಂದೆ ಮಹದೇವಶೆಟ್ಟಿ, ತಾಯಿ ಸುಶೀಲಮ್ಮ, ಅಣ್ಣ ಹೆಚ್.ಎಂ.ಶಂಕರ, ತಂಗಿ ಕಾವ್ಯ, ಭಾವ ಮಹೇಶ ಹಾಗೂ ಅಪಾರ ಬಂಧು-ಬಳಗವನ್ನು ನಾಗೇಶ ಅಗಲಿದ್ದಾನೆ.

Translate »