ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ
ಮೈಸೂರು

ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ

September 21, 2020

ಮೈಸೂರು, ಸೆ.20-ನಿವೃತ್ತ ಪ್ರಾಂಶುಪಾಲರೊಬ್ಬ ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂ ರಿನ ನಿವೇದಿತಾ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ವಸತಿ ಪ್ರದೇಶದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಹತ್ಯೆ ಮಾಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೈಸೂರಿನ ಕುವೆಂಪುನಗರ ಸರ್ಕಾರಿ ಕಾಲೇಜು, ಚಳ್ಳಕೆರೆ ಮುಂತಾದೆಡೆ ಸೇವೆ ಸಲ್ಲಿಸಿ ಹಾಸನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶು ಪಾಲರಾಗಿ ನಿವೃತ್ತಿ ಹೊಂದಿದ ಪರಶಿವಮೂರ್ತಿ(67) ಹತ್ಯೆಗೀಡಾದವರಾಗಿದ್ದು, ಇವರು ನಿವೇದಿತಾನಗರ 4ನೇ ಅಡ್ಡ ರಸ್ತೆಯ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.

ವಿವರ: ಭಾನುವಾರ ರಾತ್ರಿ 7.30ರ ಸುಮಾರಿನಲ್ಲಿ ಮನೆಯ ಕಾಂಪೌಂಡ್ ನೆಗೆದು ಒಳ ನುಗ್ಗಿದ ಇಬ್ಬರು ದುಷ್ಕರ್ಮಿಗಳು, ಪರಶಿವಮೂರ್ತಿ ಅವರಿಗೆ ಹೊಟ್ಟೆ, ಎದೆ, ಕೈ, ಕುತ್ತಿಗೆ ಮುಂತಾದೆಡೆ ಚಾಕುವಿನಿಂದ ಮನಸೋ ಇಚ್ಛೆ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಅವರು ಮೃತಪಟ್ಟ ನಂತರ ದುಷ್ಕರ್ಮಿಗಳು ಮನೆಯಿಂದ ಪರಾರಿಯಾಗಿದ್ದಾರೆ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

ಕಳೆದ 15 ವರ್ಷಗಳ ಹಿಂದೆಯಷ್ಟೇ ಸವಿತಾ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಿಲ್ಲದ ಕಾರಣ ಬಾಲಕನೊಬ್ಬನನ್ನು ದತ್ತು ಪಡೆದಿದ್ದಾರೆ. ಭಿನ್ನಾಭಿಪ್ರಾಯ ದಿಂದ ದಂಪತಿ ದೂರವಾಗಿದ್ದು, ನಿವೇದಿತಾ ನಗರ ಮನೆಯಲ್ಲಿ ಪರಶಿವಮೂರ್ತಿ ಅವರು ಒಂಟಿಯಾಗಿ ವಾಸ ಮಾಡುತ್ತಿದ್ದರೆ, ಖಾಸಗಿ ಕೇಬಲ್ ನೆಟ್‍ವರ್ಕ್‍ವೊಂದರ ಉದ್ಯೋಗಿಯಾಗಿರುವ ಅವರ ಪತ್ನಿ ಸವಿತಾ, ತಮ್ಮ ತವರು ಮನೆಯಲ್ಲಿ ವಾಸಿಸುತ್ತಿ ದ್ದಾರೆ. ಭಿನ್ನಾಭಿಪ್ರಾಯದಿಂದ ಬೇರೆಯಾಗಿದ್ದರೂ ಸವಿತಾ ತಮ್ಮ ಪತಿ ಮನೆಗೆ ಬಂದು ಹೋಗುತ್ತಿದ್ದರು ಎಂದು ನೆರೆ ಹೊರೆಯವರು ತಿಳಿಸಿದ್ದಾರೆ. ಪರಶಿವಮೂರ್ತಿ ಅವರು ಲೇವಾದೇವಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಈ ವ್ಯವಹಾರದಲ್ಲಿ ಉಂಟಾದ ವೈಮನಸ್ಸಿನಿಂದ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಗೀಡಾದ ಪರಶಿವಮೂರ್ತಿಯವರ ಮನೆಯ ಪಕ್ಕದ ಮನೆಯಲ್ಲಿ ರುವ ಸಿಸಿ ಕ್ಯಾಮರಾದಲ್ಲಿ ಹಂತಕರ ಚಲನ-ವಲನ ದಾಖಲಾಗಿದೆ ಎಂದು ಹೇಳಲಾಗಿದ್ದು, ಪೊಲೀಸರು ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್‍ಗೌಡ, ಎಂ.ಎಸ್.ಗೀತಾ ಪ್ರಸನ್ನ, ಎಸಿಪಿಗಳಾದ ಪೂರ್ಣಚಂದ್ರ, ಮರಿಯಪ್ಪ, ಸರಸ್ವತಿಪುರಂ ಠಾಣೆಯ ಇನ್ಸ್‍ಪೆಕ್ಟರ್ ವಿಜಯಕುಮಾರ್, ಕುವೆಂಪುನಗರ ಠಾಣಾ ಇನ್ಸ್‍ಪೆಕ್ಟರ್ ರಾಜು, ಸಬ್‍ಇನ್ಸ್‍ಪೆಕ್ಟರ್ ಭವ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳವನ್ನು ಕರೆಸಲಾಗಿತ್ತು.

ಹತ್ಯೆಗೀಡಾದ ಪರಶಿವಮೂರ್ತಿ ಜತೆಗಿನ ಭಿನ್ನಾಭಿಪ್ರಾಯದಿಂದ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪರಶಿವಮೂರ್ತಿ ಅವರು ಲೇವಾದೇವಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಇವರ ಪರಿಚಯಸ್ಥರೇ ಹತ್ಯೆ ಮಾಡಿರಬಹುದೆಂಬ ಶಂಕೆ ಇದೆ. ಇಬ್ಬರು ದುಷ್ಕರ್ಮಿಗಳು ಕಾಂಪೌಂಡ್ ನೆಗೆದು ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. -ಡಾ.ಎ.ಎನ್.ಪ್ರಕಾಶ್ ಗೌಡ, ಡಿಸಿಪಿ

 

 

Translate »