ಮಡಿಕೇರಿ-ಭಾಗಮಂಡಲ ಸಂಪರ್ಕ ಕಡಿತ
ಮೈಸೂರು

ಮಡಿಕೇರಿ-ಭಾಗಮಂಡಲ ಸಂಪರ್ಕ ಕಡಿತ

September 21, 2020

ಮಡಿಕೇರಿ, ಸೆ.20- ಕೊಡಗು ಜಿಲ್ಲೆಯಾದ್ಯಂತ ಭಾನು ವಾರವೂ ಮಳೆಯ ರಭಸ ಮುಂದುವರಿದಿದ್ದು, ಪ್ರಾಕೃತಿಕ ವಿಕೋಪದಿಂದ ಸಹಜ ಸ್ಥಿತಿಯತ್ತ ಮರಳುತ್ತಿರುವ ಕಾವೇರಿ ತವರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಭಾನುವಾರ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ವಾದ ಬಗ್ಗೆ ವರದಿಯಾಗಿದೆ. ಮಡಿಕೇರಿಯ ಇಂದಿರಾ ನಗರದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾದ ಘಟನೆಯೂ ನಡೆದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಚಾಮುಂ ಡೇಶ್ವರಿ ನಗರದಲ್ಲಿ ಭಾರೀ ಗಾಳಿಗೆ ಕೆಲವು ಮನೆಗಳ ಹೆಂಚುಗಳು ಹಾರಿ ಹೋದ ಬಗ್ಗೆಯೂ ವರದಿಯಾಗಿದ್ದು, ಮನೆ ಮಂದಿಗೆ ಯಾವುದೇ ಹಾನಿಯಾಗಿಲ್ಲ. ಈ ಪ್ರದೇಶಗಳೆಲ್ಲಾ ಅಪಾಯಕಾರಿ ಸ್ಥಳಗಳಲ್ಲಿದ್ದು 2018ರಲ್ಲಿ ಭಾರೀ ಪ್ರಾಕೃತಿಕ ವಿಕೋಪಗಳಿಗೆ ಸಾಕ್ಷಿಯಾಗಿದ್ದವು. ಇದೀಗ ಮಳೆ ತನ್ನ ರಭಸ ತೋರುತ್ತಿರುವ ಹಿನ್ನಲೆ ಯಲ್ಲಿ ಇಲ್ಲಿನ ನಿವಾಸಿಗಳಿಗೆ ಆತಂಕ ಕಾಡುತ್ತಿದೆ.

ಭಾರಿ ಮಳೆಯಿಂದ ರಸ್ತೆಯಲ್ಲೇ ನೀರು ಹರಿದ ಪರಿ ಣಾಮ ಮಡಿಕೇರಿ ಮೇಕೇರಿ ರಸ್ತೆಯ ತಿರುವು ಒಂದರಲ್ಲಿ ತಡೆಗೋಡೆ ಪಕ್ಕದಲ್ಲೇ ಅಲ್ಪ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಭವಿಷ್ಯದಲ್ಲಿ ತಡೆಗೋಡೆಗೂ ಹಾನಿ ಸಂಭವಿಸಲಿದೆ. ಭೂ ಕುಸಿತದಿಂದ ರಸ್ತೆ ಸಂಚಾರಕ್ಕೆ ಹಾನಿ ಯಾಗದಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಎಂದಿನಂತೆ ಮುಂದುವರಿದಿರುವುದು ಕಂಡು ಬಂದಿದೆ.

ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 2 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ-ಅಯ್ಯಂಗೇರಿ ರಸ್ತೆ ನದಿ ನೀರಿನಲ್ಲಿ ಮುಳುಗಿದೆ. ಈ ರಸ್ತೆಯ ಮೇಲೆ 3 ಅಡಿ ನೀರು ಹರಿಯುತ್ತಿದ್ದು, ಜನ ಹಾಗೂ ಎಲ್ಲಾ ರೀತಿಯ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ತ್ರಿವೇಣಿ ಸಂಗಮ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಮಡಿಕೇರಿ-ಭಾಗಮಂಡಲ ಸಂಪರ್ಕವೂ ಬಂದ್ ಆಗಿದೆ. ಅದ ರೊಂದಿಗೆ ಇಡೀ ತ್ರಿವೇಣಿ ಸಂಗಮ ಪ್ರದೇಶ ಕಾವೇರಿ ನದಿ ನೀರಿನ ಪ್ರವಾಹದಿಂದಾಗಿ ದ್ವೀಪದಂತಾಗಿದ್ದು, ಭಾಗಮಂಡಲ ಗ್ರಾಮ ರಸ್ತೆ ಸಂಪರ್ಕ ಕಡಿದುಕೊಂಡಿದೆ. ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾದಂತೆ ಚೇರಂಗಾಲ ದಲ್ಲಿ ನದಿ ನೀರು ಭತ್ತದ ಗದ್ದೆಗಳನ್ನು ಆವರಿಸಿದ್ದು, ಪೈರು ಗಳಿಗೆ ಹಾನಿ ಸಂಭವಿಸಿದೆ. ಮಳೆಯಿಂದ ಕಾವೇರಿ ನದಿ ಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮೂರ್ನಾಡು ಸಮೀಪದ ಕಣ್ವ ಬಲಮುರಿಯಲ್ಲಿ ಬಲ ಮುರಿ-ಪಾರಾಣೆ ಸಂಪರ್ಕಿಸುವ ಕೆಳ ಸೇತುವೆ ಮುಳು ಗಡೆಯಾಗಿದೆ. ಈ ಸೇತುವೆಯ ಮೂಲಕ 3 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಎಂದಿನಂತೆ ಮೇಲಿನ ಸೇತುವೆ ಮೂಲಕ ನಿರಾತಂಕವಾಗಿ ಸಾಗಿದೆ. ನಾಪೋಕ್ಲು ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿರುವ ಕಾರಣ ಕೊಟ್ಟಮುಡಿ, ಕೊಂಡಂಗೇರಿ, ಸಿದ್ದಾಪುರದ ಕರಡಿಗೋಡು, ಬೆಟ್ಟದಕಾಡು ವ್ಯಾಪ್ತಿಯಲ್ಲೂ ಕಾವೇರಿ ನದಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ. ಹೀಗಾಗಿ ನದಿ ತಟದ ನಿವಾಸಿಗಳಲ್ಲಿ ಮತ್ತೆ ಪ್ರವಾಹ ತಲೆದೋರುವ ಆತಂಕ ಕಾಡುತ್ತಿದೆ. ಆಗಸ್ಟ್ ತಿಂಗಳಲ್ಲಾದ ಪ್ರಾಕೃತಿಕ ವಿಕೋಪದ ಜಲ ಪ್ರವಾಹಕ್ಕೆ ತತ್ತರಿಸಿ ಇಂದಿಗೂ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಈ ಭಾಗದ ಜನರು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಒಳ ಹರಿವು ಹೆಚ್ಚಳ: ಹಾರಂಗಿ ನದಿ ಪಾತ್ರ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿ ರುವ ಹಿನ್ನಲೆಯಲ್ಲಿ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಗಾಳಿಬೀಡು, ಕಾಲೂರು, ಹಟ್ಟಿಹೊಳೆ, ಮಾದಾಪುರ, ಸೂರ್ಲಬ್ಬಿ, ಗರ್ವಾಲೆ, ಕುಂಬಾರಗಡಿಗೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆ ಯಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ಜಲ ಮೂಲಗಳಾದ ಮಾದಾಪುರ ಹೊಳೆ, ಹಟ್ಟಿಹೊಳೆ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. 2859 ಅಡಿ ನೀರಿನ ಸಂಗ್ರಹ ಸಾಮಥ್ರ್ಯವಿರುವ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 2858.51 ಅಡಿ ನೀರಿನ ಸಂಗ್ರಹ ವಿದ್ದು, ಜಲಾಶಯಕ್ಕೆ 5819 ಕ್ಯುಸೆಕ್ ಪ್ರಮಾಣದ ನೀರಿನ ಒಳಹರಿವು ದಾಖಲಾಗಿದೆ. ಜಲಾಶಯದ ಭದ್ರತೆಯ ದೃಷ್ಟಿಯಿಂದ ನದಿಗೆ 5837 ಕ್ಯುಸೆಕ್ ಮತ್ತು ನಾಲೆಗೆ 500 ಕ್ಯುಸೆಕ್‍ನಷ್ಟು ನೀರನ್ನು ಹರಿಸಲಾಗುತ್ತಿದೆ. ಮಳೆ ಹೆಚ್ಚಾಗಿ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಲ್ಲಿ ನದಿ ಪಾತ್ರಕ್ಕೆ ಹರಿಸುತ್ತಿರುವ ನೀರಿನ ಪ್ರಮಾಣವನ್ನೂ ಹೆಚ್ಚಳ ಮಾಡಲಾಗುತ್ತದೆ ಎಂದು ಜಲಾಶಯ ಮೂಲಗಳು ಮಾಹಿತಿ ನೀಡಿವೆ.

Translate »