ರೋಗನಿರೋಧಕ ಶಕ್ತಿ ವೃದ್ಧಿಸಲು ಮೊಟ್ಟೆ ತಿನ್ನಲು ವೈದ್ಯರ ಸಲಹೆ; ಬೆಲೆ ಗಗನಕ್ಕೆ
ಮೈಸೂರು

ರೋಗನಿರೋಧಕ ಶಕ್ತಿ ವೃದ್ಧಿಸಲು ಮೊಟ್ಟೆ ತಿನ್ನಲು ವೈದ್ಯರ ಸಲಹೆ; ಬೆಲೆ ಗಗನಕ್ಕೆ

September 21, 2020

ಮೈಸೂರು, ಸೆ.20(ಆರ್‍ಕೆಬಿ)- ಕೊರೊನಾ ಸೋಂಕು ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ ಮೊಟ್ಟೆಗಳನ್ನು ತಿನ್ನಲು ವೈದ್ಯರ ಸಲಹೆ ಮತ್ತು ಪಕ್ಷಿಜ್ವರ ಭೀತಿ ಹಿನ್ನೆಲೆಯಲ್ಲಿ ಸಹ ಸ್ರಾರು ಪಕ್ಷಿಗಳನ್ನು ನಾಶ ಮಾಡಿದ್ದರಿಂದ ಮೊಟ್ಟೆ ಪೂರೈಕೆ ಕೊರತೆಯಿಂದಾಗಿ ಮೈಸೂ ರಿನಲ್ಲಿ ಮೊಟ್ಟೆಯ ಬೆಲೆ ಗಗನಕ್ಕೇರಿದೆ.

ಮೈಸೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾನುವಾರ ಮೊಟ್ಟೆ ದರ 6ರಿಂದ 6.25 ರೂ.ವರೆಗೆ ಇತ್ತು. ಡಜನ್ ಮೊಟ್ಟೆ 60ರಿಂದ 62 ರೂ.ಗೆ ಮಾರಾಟವಾಗುತ್ತಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಮೊಟ್ಟೆ ದರ 1ರಿಂದ 1.50 ರೂ.ವರೆಗೆ ಏರಿಕೆಯಾಗಿದೆ.

ಸಗಟು ಮಾರುಕಟ್ಟೆಯಲ್ಲಿ ಇಂದು ಮೊಟ್ಟೆ ಧಾರಣೆ 5.30 ರೂ., 24 ಮೊಟ್ಟೆಗಳಿಗೆ 130 ರೂ., 30 ಮೊಟ್ಟೆಗಳಿಗೆ 150 ರೂ., 50 ಮೊಟ್ಟೆಗೆ 260 ರೂ. ಮತ್ತು 100 ಮೊಟ್ಟೆಗೆ 520 ರೂ.ಗೆ ಮಾರಾಟವಾಗುತ್ತಿದೆ. ಮೊಟ್ಟೆ ಬಹುಪಾಲು ಮಹಾರಾಷ್ಟ್ರಕ್ಕೆ ಸರಬರಾಜಾಗು ತ್ತಿದೆ. ದೇಶದಲ್ಲಿಯೇ ಗರಿಷ್ಠ ಸಂಖ್ಯೆಯ ಕೋವಿಡ್-19 ಪ್ರಕರಣ ಮತ್ತು ಸಾವು ನೋವು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಈಗ ಅಲ್ಲಿ ಮೊಟ್ಟೆಗೆ ಭಾರೀ ಬೇಡಿಕೆ ಬಂದಿದೆ.

ವೈದ್ಯರÀ ಸಲಹೆ: ದೇಹದ ರೋಗ ಪ್ರತಿ ರೋಧಕ ಶಕ್ತಿ ಹೆಚ್ಚಿಸಲು ದಿನಕ್ಕೆ ಕನಿಷ್ಠ ಎರಡು ಮೊಟ್ಟೆಗಳನ್ನು ತಿನ್ನಲು ವೈದ್ಯರು ನೀಡಿರುವ ಸಲಹೆ ಅನುಸರಿಸಿ, ಜನರು ಹೆಚ್ಚು ಮೊಟ್ಟೆ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಮೈಸೂರಿನ ಎನ್‍ಇಸಿಸಿ (ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ) ಮಾರಾಟ ಅಭಿವೃದ್ಧಿ ಅಧಿಕಾರಿ ವಿ.ಶೇಷನಾರಾಯಣ.

ಇನ್ನೊಂದೆಡೆ ಪಕ್ಷಿಜ್ವರದಿಂದಾಗಿ ಇತ್ತೀ ಚೆಗೆ ದೇಶದ ಹಲವೆಡೆ ಸಹಸ್ರಾರು ಕೋಳಿ ಗಳನ್ನು ನಾಶಪಡಿಸಲಾಯಿತು. ಇದು ಮೊಟ್ಟೆಯ ಉತ್ಪಾದನೆ ಇಳಿಕೆಗೆ ಕಾರಣ. ಮೈಸೂರಿನಲ್ಲಿ ದಿನಕ್ಕೆ 32 ಲಕ್ಷ ಮೊಟ್ಟೆ ಗಳಿಗೆ ಬೇಡಿಕೆ ಇದೆ. ಆದರೆ ಈಗ ಪೂರೈಕೆ 27 ಲಕ್ಷ ಮೊಟ್ಟೆಗಳಿಗೆ ಕುಸಿದಿದೆ. ಹೀಗಾಗಿ 5 ಲಕ್ಷ ಮೊಟ್ಟೆಗಳ ಕೊರತೆ ಎದುರಾಗಿದೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದರು.

2017ರಲ್ಲಿ ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆ ದರ 5.53 ರೂ.ಗೆ ಮುಟ್ಟಿತ್ತು. ಈ ಬಾರಿಯೂ ಅದೇ ಮಟ್ಟಕ್ಕೇರಬಹುದು. ಬೆಲೆ ಕಡಿಮೆಯಾಗಲು ಇನ್ನೂ 4-5 ತಿಂಗಳಾದರೂ ಬೇಕು. ನವೆಂಬರ್‍ನಲ್ಲಿ (ಕಾರ್ತಿಕ ಮಾಸ) ಮೊಟ್ಟೆ ಬಳಕೆ ಕಡಿಮೆ ಯಾಗುವ ಕಾರಣ ಆಗ ದರ ಕಡಿಮೆ ಯಾಗಬಹುದು ಎಂದರು.

ನಗರದ ಹಳೆಯ ಸಗಟು ಮೊಟ್ಟೆ ವ್ಯಾಪಾರಿ ಗಳಲ್ಲಿ ಒಬ್ಬರಾದ ಮೈಸೂರಿನ ಬೋಟಿ ಬಜಾರ್‍ನ ಸ್ಟಾರ್ ಎಗ್ ಸೆಂಟರ್ ಮಾಲೀಕ ಅಬುಲ್ ಕಲಾಂ ಆಜಾದ್ ಪ್ರಕಾರ, ನವೆಂಬರ್-ಡಿಸೆಂಬರ್‍ವರೆಗೆ ಬೆಲೆ ಏರಿಕೆ ಹೀಗೇ ಮುಂದುವರಿಯಲಿದೆ. ಈಗ, ಕೋಳಿಗಳ ಆಹಾರ ಪೂರೈಕೆಯಾಗುತ್ತಿದೆ. ರೈತರು ಸಹ ಪ್ರಸ್ತುತ ದರದಿಂದ ಸಂತೋಷ ವಾಗಿದ್ದಾರೆ. ನಾಮಕ್ಕಲ್, ಹೊಸಪೇಟೆ, ದಾವಣಗೆರೆಗಳಿಂದ ಹೊಸ ಕೋಳಿ ಬಂದಿವೆ. ಆದರೆ ಅವು ಡಿಸೆಂಬರ್‍ನಲ್ಲಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಅಲ್ಲಿಯವರೆಗೂ ಮೊಟ್ಟೆ ದರ ಸ್ಥಿರವಾಗಿರುತ್ತದೆ ಎಂದಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದೊಡ್ಡ ಕೋಳಿ ಫಾರಂಗಳು ಸೇರಿದಂತೆ 40-45ಕ್ಕೂ ಅಧಿಕ ಕೋಳಿ ಸಾಕಣೆ ಕೇಂದ್ರ ಗಳಿವೆ. ಪ್ರತಿ ಕೋಳಿ 18ನೇ ವಾರದಿಂದ 80ನೇ ವಾರದವರೆಗೆ ಮೊಟ್ಟೆ ಇಡುತ್ತವೆ. ಅಲ್ಲಿಯವರೆಗೂ ಮೊಟ್ಟೆ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಮೊಟ್ಟೆ ದರ ಈಗ ಹೇಗಿದೆಯೋ ಅದೇ ಮುಂದುವರಿಯ ಬಹುದು. ಲಾಕ್‍ಡೌನ್ ನಂತರ ಹೋಟೆಲ್, ಮೊಟ್ಟೆ ವ್ಯಾಪಾರ ಇರಲಿಲ್ಲ. ಈಗ ಹೋಟೆಲ್ ಗಳು ತೆರೆದಿವೆ. ಮೊಟ್ಟೆಗೆ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕಡಿಮೆಯಾಗಿದೆ. ವೈದ್ಯರ ಸಲಹೆ ಪ್ರಕಾರ ಜನರೂ ಮೊಟ್ಟೆ ಹೆಚ್ಚು ಖರೀ ದಿಸುತ್ತಿರುವುದರಿಂದ ದರ ಏರಿದೆ.

ರಾಜಕುಮಾರ್ ಭಾವಸಾರ್