500 ಮಂದಿ ಭಾಗವಹಿಸಲು ಅವಕಾಶ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಕೆ
ಮೈಸೂರು

500 ಮಂದಿ ಭಾಗವಹಿಸಲು ಅವಕಾಶ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಕೆ

September 21, 2020

ಮೈಸೂರು, ಸೆ.20(ಪಿಎಂ)- ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾ ರಂಭಕ್ಕೆ 500 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನೂತನ ಡಿಸಿ ಕಚೇರಿಯಲ್ಲಿ ದಸರಾ ಸಂಬಂಧ ನಡೆದ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಭಾನುವಾರ ಮೈಸೂರಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟ ಸ್ಮಾರಕ ಉದ್ಯಾನವನದ ಆವರಣದಲ್ಲಿ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಐದು ಆನೆಗಳ ತಂಡವನ್ನು ಕರೆಸಿಕೊಳ್ಳಲು ಉದ್ದೇಶಿಸಿದ್ದು, ಅ.2ರಂದು 12.15ಕ್ಕೆ ಅರಮನೆ ಆವರಣದಲ್ಲಿ ಗಜಪಡೆಗೆ ಸ್ವಾಗತ ನೀಡಲಾಗುವುದು. ಇದಕ್ಕೂ ಮುನ್ನ ಅ.1ರಂದು ಜಿಲ್ಲಾ ಧಿಕಾರಿಗಳು ಆನೆ ಶಿಬಿರಗಳಿಗೆ ಭೇಟಿ ನೀಡಿ ಎಲ್ಲಾ ಪ್ರಕ್ರಿಯೆ ನಡೆಸಿ, ಮಾರನೇ ದಿನ ಗಜಪಡೆ ಹೊರಡಲು ವ್ಯವಸ್ಥೆ ಮಾಡ ಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಆನೆ ಶಿಬಿರಗಳಿಗೆ ಯಾವುದೇ ಜನಪ್ರತಿನಿಧಿಗಳು ಹೋಗುವುದಿಲ್ಲ ಎಂದು ಹೇಳಿದರು.

ಮಹಿಷಾ ದಸರಾ ಆಚರಣೆ ಸಂಬಂಧ ಪ್ರತಿಕ್ರಿಯಿಸಿದ ಶಾಸಕರು, ಕೊರೊನಾ ಹಿನ್ನೆಲೆ ಯಲ್ಲಿ ದಸರಾ ಮಹೋತ್ಸವ ಮಾಡುವುದೇ ಕಷ್ಟವಾಗುತ್ತಿದೆ. ಹೀಗಿರುವಾಗ ಮಹಿಷಾ ದಸರಾ ಆಚರಣೆ ಸರಿಯೇ? ಅದಾಗ್ಯೂ ಯಾವ ಕಾಲದಿಂದ ಮಹಿಷಾ ದಸರಾ ಮಾಡ ಲಾಗುತ್ತಿದೆ. ಮಹಿಷಾ ದಸರಾಗೆ ಎಷ್ಟು ವರ್ಷಗಳ ಇತಿಹಾಸವಿದೆ? ಎಂದು ಪ್ರಶ್ನಿಸಿದರು.

ಮಹಿಷಾ ದಸರಾಗೆ ಇತಿಹಾಸ ಇದ್ದರೆ ಹೇಳಲಿ. ಅದು ಬಿಟ್ಟು ಹೀಗೆ ಇತಿಹಾಸ ತಿರು ಚುವ ಕೆಲಸ ಮಾಡಬಾರದು. ಕಳೆದ ಬಾರಿ ಮಹಿಷಾ ದಸರಾ ಮಾಡುತ್ತೇವೆ ಎಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅದೇ ರೀತಿ ಈ ಬಾರಿಯೂ ಮಾಡಲು ಆಗುವುದಿಲ್ಲ. ದಯವಿಟ್ಟು ಆ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.

ಮಹಿಷಾನಿಗೆ ಪೂಜೆ ಮಾಡುವುದು ಸರಿ. ಅದಕ್ಕೆ ದಸರಾ ಸಮಯವೇ ಏಕೆ? ಅಂದರೆ ಇವರು ಮಾಡುತ್ತಿರುವುದು ಪ್ರಚಾರಕ್ಕಾಗಿಯೇ? ಪ್ರಗತಿಪರರ ಮೇಲೆ ನನಗೆ ಗೌರವವಿದೆ. ಆದರೆ ಈ ರೀತಿ ಮಾಡುವುದರ ಬಗ್ಗೆ ನಾವು ಪ್ರಶ್ನೆ ಮಾಡದಿದ್ದರೂ ಸಾಮಾನ್ಯ ಜನ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಇದೆಲ್ಲವನ್ನೂ ಮಾಡುವುದು ಬೇಡವೆಂದು ಅವರಲ್ಲಿ ಕೋರುತ್ತೇನೆ ಎಂದರು. ಕೇಂದ್ರದ ಬಿಜೆಪಿ ವರಿಷ್ಠರು ರಾಜ್ಯದ ನಾಯಕತ್ವ ಬದಲಾವಣೆಗೆ ಉದ್ದೇಶಿಸಿದ್ದಾರೆ ಎನ್ನಲಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ಅವಧಿಗೂ ಬಿ.ಎಸ್.ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರೆಯುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಶಾಸಕ ನಾಗೇಂದ್ರ ತಿಳಿಸಿದರು.

Translate »