ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್‍ಗೆ ಪ್ಲಾಸ್ಮಾ ಸಂಗ್ರಹ ಮಾಡುವ ಹೈಟೆಕ್ ಯಂತ್ರ ಅಳವಡಿಕೆ
ಮೈಸೂರು

ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್‍ಗೆ ಪ್ಲಾಸ್ಮಾ ಸಂಗ್ರಹ ಮಾಡುವ ಹೈಟೆಕ್ ಯಂತ್ರ ಅಳವಡಿಕೆ

September 21, 2020

ಮೈಸೂರು, ಸೆ.20(ಎಂಟಿವೈ)- ಕೊರೊನಾ ಸೋಂಕಿತರನ್ನು ಗುಣಪಡಿಸಲು ಸಂಜೀವಿನಿಯಾಗಿ ಮಾರ್ಪಟ್ಟಿರುವ ಗುಣಮುಖರಾದ ಸೋಂಕಿತರ ಪ್ಲಾಸ್ಮಾ ಸಂಗ್ರಹಕ್ಕೆ ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್ ಹೊಸದಾಗಿ `ಎಫೆರೆಸಿಸ್ ಸಿಂಗಲ್ ಡೋರ್ ಪ್ಲಾಸ್ಮಾ’ ಸಂಗ್ರಹ ಹೈಟೆಕ್ ಯಂತ್ರ ಖರೀದಿಸಿದ್ದು, ಇನ್ನೆರಡು ದಿನದಲ್ಲಿ ದೇಹದಿಂದ ನೇರವಾಗಿ ಪ್ಲಾಸ್ಮಾ ಸಂಗ್ರಹ ಕಾರ್ಯಾರಂಭಿಸಲಿದೆ.

ಕೊರೊನಾ ಸೋಂಕಿತರು ಶೀಘ್ರ ಗುಣಮುಖರಾಗಲು ಪ್ಲಾಸ್ಮಾ ಥೆರಪಿ ಪರಿಣಾಮಕಾರಿ ಬಳಸಲಾಗುತ್ತಿದ್ದು, ಇದಕ್ಕಾಗಿ ಗುಣಮುಖರಾದ ಸೋಂಕಿತ ರಿಂದ ಪ್ಲಾಸ್ಮಾ ನೀಡುವಂತೆ ಎಲ್ಲೆಡೆ ಮೊರೆ ಇಡಲಾಗುತ್ತಿದೆ. ಇದರೊಂದಿಗೆ ಸರ್ಕಾರ ಪ್ಲಾಸ್ಮಾ ದಾನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ಲಾಸ್ಮಾ ನೀಡಿ ದವರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ ಇದೀಗ ಮೈಸೂರಲ್ಲಿ ಗುಣಮುಖರಾದ ಕೊರೊನಾ ಸೋಂಕಿತರ ದೇಹದಿಂದ ನೇರವಾಗಿ ಪ್ಲಾಸ್ಮಾ ಸಂಗ್ರಹಕ್ಕೆ ಜೀವಧಾರ ಬ್ಲಡ್ ಬ್ಯಾಂಕ್ ಸಂಸ್ಥೆ ಹೊಸ ಹೆಜ್ಜೆಯಿಟ್ಟಿದ್ದು, ಹಲವರಿಗೆ ವರದಾನ ವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಸ್ಪಾನ್ ಡಯೋ ಗ್ನೊಸ್ಟಿಕ್ ಸಂಸ್ಥೆಯಿಂದ ಖರೀದಿಸಲಾಗಿರುವ

`ಎಫೆರೆಸಿಸ್ ಸಿಂಗಲ್ ಡೋರ್ ಪ್ಲಾಸ್ಮಾ’ ಹೈಟೆಕ್ ಯಂತ್ರ ದಾನಿಗಳಿಂದ ರಕ್ತ ಪಡೆದಂತೆ ದೇಹದಿಂದ ನೇರವಾಗಿ ಪ್ಲಾಸ್ಮಾ ಸಂಗ್ರಹಿಸಬಹುದಾಗಿದೆ. ಈ ಹಿಂದೆ ದಾನಿಗಳಿಂದ 350-400 ಎಂಎಲ್ ರಕ್ತ ಸಂಗ್ರಹಿಸಿ, ಅದರಲ್ಲಿ 150-200 ಎಂಎಲ್ ಪ್ಲಾಸ್ಮಾ ದೊರೆಯು ತ್ತಿತ್ತು. ಆದರೆ ಇದೀಗ ಹೊಸ ಯಂತ್ರದ ಮೂಲಕ ದೇಹದಿಂದಲೇ ನೇರವಾಗಿ ಪ್ಲಾಸ್ಮಾ ಸಂಗ್ರಹಿಸಬಹುದಾಗಿದೆ. ಈ ಯಂತ್ರ ರಕ್ತ ಸಂಗ್ರಹ ಮಾಡದೇ ದೇಹದಲ್ಲಿಯೇ ಪ್ಲಾಸ್ಮಾವನ್ನು ಬೇರ್ಪಡಿಸಿ ಸಂಗ್ರಹಿಸಲಿದೆ. ಈ ಪದ್ಧತಿಯಿಂದ ವ್ಯಕ್ತಿಯೊಬ್ಬರಿಂದ ಒಂದು ಬಾರಿಗೆ 500 ಎಂಎಲ್ ಪ್ಲಾಸ್ಮಾ ಸಂಗ್ರಹಿಸಬಹುದಾಗಿದೆ. ಅಲ್ಲದೆ ವ್ಯಕ್ತಿಯೊಬ್ಬರು ಒಮ್ಮೆ ರಕ್ತದಾನ ಮಾಡಿ ಪ್ಲಾಸ್ಮಾ ದಾನ ಮಾಡಿದರೆ ಮುಂದಿನ 90 ದಿನಗಳವರೆಗೂ ರಕ್ತ ಅಥವಾ ಪ್ಲಾಸ್ಮಾ ದಾನ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಹೊಸ ಯಂತ್ರದ ಮೂಲಕ ಪ್ಲಾಸ್ಮಾ ದಾನಿ ಮಾಡಿದರೆ 14 ದಿನದ ನಂತರ ಮತ್ತೊಮ್ಮೆ ದಾನ ಮಾಡಬಹುದಾಗಿದೆ. ಪ್ಲಾಸ್ಮಾ ದೇಹದಲ್ಲಿರುವ ಪ್ರೋಟೀನ್ ಮೇಲೆ ಅವಲಂಬಿತವಾಗಿದೆ. ಪ್ರೋಟೀನ್ ಅಂಶ ಹೆಚ್ಚಾಗಿದ್ದರೆ, ಹೆಚ್ಚುವರಿಯಾಗಿ 10-30 ಎಂಎಲ್ ಪ್ಲಾಸ್ಮಾ ಸಂಗ್ರಹಿಸಬಹುದಾಗಿದೆ.

ಮೈಸೂರಲ್ಲೂ ಯಂತ್ರವಿದೆ ಆದರೆ ಅನುಮತಿಯಿಲ್ಲ: ಮೈಸೂರಿನ ಮೂರು ಖಾಸಗಿ ಆಸ್ಪತ್ರೆಗಳಲ್ಲಿ `ಸಿಂಗಲ್ ಡೋರ್ ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್ಸ್’ ಸಂಗ್ರಹಿಸುವ ಯಂತ್ರವಿದೆ. ಆದರೆ ಪ್ಲಾಸ್ಮಾ ಸಂಗ್ರಹಕ್ಕೆ ಅನುಮತಿ ಪಡೆಯದೇ ಇರುವುದರಿಂದ ಕೇವಲ ಪ್ಲೇಟ್ಲೆಟ್ಸ್ ಸಂಗ್ರಹಕ್ಕೆ ಮಾತ್ರ ಆ ಯಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೀವಧಾರ ಬ್ಲಡ್ ಬ್ಯಾಂಕ್‍ನಲ್ಲಿ ಹೈಟೆಕ್ ಯಂತ್ರದ ಮೂಲಕ ಪ್ಲಾಸ್ಮಾ ಸಂಗ್ರಹ ಕಾರ್ಯ ಆರಂಭಿಸುತ್ತಿರುವುದು ಹೆಚ್ಚಿನ ಬೇಡಿಕೆಗೆ ಒಳಗಾಗಲಿದೆ. ಅಲ್ಲದೆ ಹಲವಾರು ಮಂದಿ ಸೋಂಕಿತರು ಗುಣಮುಖರಾಗಲು ಅಮೂಲ್ಯ ಕೊಡುಗೆ ನೀಡಲಿದೆ.

ದೂರದೃಷ್ಟಿಯಿಂದ ಅನುಮತಿ ಪಡೆಯಲಾಗಿತ್ತು: ಸಯ್ಯಾಜಿರಾವ್ ರಸ್ತೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಮೀಪವಿರುವ ಜೀವಧಾರ ರಕ್ತನಿಧಿಯ ಹಿರಿಯ ಟ್ರಸ್ಟಿ, ಬೆಂಗಳೂ ರಲ್ಲಿ ಲಯನ್ಸ್ ಕ್ಲಬ್ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾಗಿರುವ ಮನೋಜ್‍ಕುಮಾರ್ `ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ’ ವತಿಯಿಂದ ಮೈಸೂರಿನ ಜೀವಧಾರ ರಕ್ತನಿಧಿ ಯಲ್ಲಿ ಪ್ಲಾಸ್ಮಾ ಸಂಗ್ರಹಕ್ಕೆ ಅನುಮತಿ ಪಡೆದಿದ್ದರು. ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಬಹುದು ಎಂಬ ಮುಂದಾಲೋಚನೆಯಿಂದ ಪಡೆದಿದ್ದ ಅನುಮತಿ ಇದೀಗ ಕೊರೊನಾ ಸೋಂಕಿತರಿಗೆ ನೆರವಿಗೆ ಬಂದಿದೆ. ಈ ಯಂತ್ರದ ಮೂಲಕ ಪ್ಲಾಸ್ಮಾ ದಾನ ಮಾಡುವು ದರಿಂದ ದಾನಿಗಳಲ್ಲಿ ನಿಶಕ್ತಿ ಉಂಟಾಗುವುದಿಲ್ಲ. ಬದಲಾಗಿ 14 ದಿನದ ನಂತರ ಮತ್ತೊಮ್ಮೆ ಪ್ಲಾಸ್ಮಾ ದಾನ ಮಾಡಿ ಮತ್ತಷ್ಟು ಮಂದಿಗೆ ನೆರವಾಗಬಹುದಾಗಿದೆ. ಕೆಲವರಿಗೆ ಪ್ಲಾಸ್ಮಾ ದಾನ ಮಾಡಲು ಇಚ್ಛೆ ಇದ್ದರೂ ನಿಯಮಾನುಸಾರ 90 ದಿನಗಳವರೆಗೂ ಕಾಯಲೇ ಬೇಕಾಗಿತ್ತು. ಆದರೆ ಇದೀಗ ಈ ಯಂತ್ರದ ಮೂಲಕ ದಾನ ಮಾಡುವುದರಿಂದ 14 ದಿನದ ನಂತರ ಮತ್ತೆ ಮತ್ತೆ ಪ್ಲಾಸ್ಮಾ ದಾನ ಮಾಡಬಹುದಾಗಿದೆ.

Translate »