ಲಾರಿ ಚಾಲಕರ ಪೈಪೋಟಿಗೆ ಬಸವೇಶ್ವರ ಗುಡಿ ಧ್ವಂಸ
ಮೈಸೂರು

ಲಾರಿ ಚಾಲಕರ ಪೈಪೋಟಿಗೆ ಬಸವೇಶ್ವರ ಗುಡಿ ಧ್ವಂಸ

July 4, 2018

ಮೈಸೂರು: ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಬಿದ್ದ ಸಿಮೆಂಟ್ ಲಾರಿಯೊಂದು ಮೈಸೂರು-ನಂಜನ ಗೂಡು ರಸ್ತೆಯಲ್ಲಿ ಬಂಡಿಪಾಳ್ಯ ಬಳಿ ರಿಂಗ್ ರೋಡ್ ಸಿಗ್ನಲ್‍ನಲ್ಲಿ ಗುಡಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಈ ಘಟನೆಯಿಂದ ಬಸವೇಶ್ವರ ಗುಡಿಯ ಅರ್ಚಕ ಅನ್ನದಾನಪ್ಪ, ಗುಡಿಯ ಮುಂಭಾಗ ಬಸ್ಸಿಗೆ ಕಾಯುತ್ತ ನಿಂತಿದ್ದ ರವಿಚಂದ್ರ ಮತ್ತು ವಿನಾಯಕ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡಿಮೊಹಲ್ಲಾದ ನಿವಾಸಿ, ಲಾರಿ ಚಾಲಕ ರಾಘವೇಂದ್ರ, ಮೈಸೂರಿನಿಂದ ನಂಜನಗೂಡು ಕಡೆಗೆ ಸಿಮೆಂಟ್ ತುಂಬಿದ ಲಾರಿ(ಕೆಎ.09.ಸಿ. 5069) ಯನ್ನು ಚಾಲನೆ ಮಾಡುತ್ತಿದ್ದಾಗ ಹಿಂದಿನಿಂದ ಮತ್ತೊಂದು ಲಾರಿ ವೇಗ ವಾಗಿ ಬಂದಿದೆ. ಇದನ್ನು ಕಂಡ ರಾಘ ವೇಂದ್ರ, ಆ ಲಾರಿಯ ಜೊತೆ ಪೈಪೋಟಿಗೆ ಬಿದ್ದು ಇಬ್ಬರೂ ವೇಗವಾಗಿ ಚಾಲನೆ ಮಾಡಿಕೊಂಡು ರಿಂಗ್ ರಸ್ತೆ ಸಿಗ್ನಲ್ ವರೆಗೂ ಬಂದಿದ್ದಾರೆ. ಸಿಗ್ನಲ್ ಬಳಿ ಬರುತ್ತಿದ್ದಂತೆ ರಾಘವೇಂದ್ರನ ನಿಯಂತ್ರಣ ಕಳೆದುಕೊಂಡ ಲಾರಿ, ಎಡಬದಿಯಲ್ಲಿದ್ದ ಬಸವೇಶ್ವರ ಗುಡಿಗೆ ಗುದ್ದಿದೆ. ಈ ವೇಳೆ ಗುಡಿಯಲ್ಲಿದ್ದ ಅರ್ಚಕ ಅನ್ನದಾನಪ್ಪ ಹಾಗೂ ನಂಜನಗೂಡಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ. ಈ ಮೂವರಿಗೆ ಕೈಕಾಲು ಮೂಳೆ ಮುರಿದಿದೆ.

ಈ ಘಟನೆಯಿಂದ ಸ್ಥಳದಲ್ಲಿ ಜನ ಸಂದಣಿ ಹೆಚ್ಚಾಗಿ ಕೆಲ ಸಮಯ ಈ ಮಾರ್ಗದ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಆರ್. ಸಂಚಾರ ಪೊಲೀಸರು ಪರಿಸ್ಥಿತಿ ಯನ್ನು ಹತೋಟಿಗೆ ತಂದು, ಗಾಯಗೊಂಡಿದ್ದವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಲಾರಿ ಚಾಲಕನ ವಿಚಾರಣೆ: ಘಟನೆಗೆ ಕಾರಣನಾದ ಲಾರಿ ಚಾಲಕ ರಾಘವೇಂದ್ರ ನನ್ನು ಕೆ.ಆರ್.ಸಂಚಾರ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.

ಈ ಜಾಗದಲ್ಲಿ ಪದೇಪದೆ ಅವಘಡ: ಬಂಡಿಪಾಳ್ಯದ ರಿಂಗ್‍ರೋಡ್ (ಬಸವೇಶ್ವರ ಗುಡಿ) ಸಿಗ್ನಲ್‍ನಲ್ಲಿ ಪದೇಪದೆ ಇಂತಹ ಘಟನೆಗಳು ಸಂಭವಿಸುತ್ತಿರುತ್ತವೆ. ಅಪಘಾತವನ್ನು ತಪ್ಪಿಸಲು ಸಿಗ್ನಲ್ ಪಕ್ಕದಲ್ಲಿರುವ ಬಸವೇಶ್ವರ ಗುಡಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಪ್ರಯಾಣಿಕರು, ಲಾರಿ ಚಾಲಕರು ಆಗ್ರಹಿಸಿದರು.

Translate »