ಮಡಿಕೇರಿ, ಆ.22- ಪೊನ್ನಂಪೇಟೆ ತಾಲೂಕಿನ ಬೊಟ್ಯತ್‍ನಾಡಿಗೆ ಸೇರುವ ಕುಂದಾಬೆಟ್ಟದಲ್ಲಿರುವ ಬೊಟ್ಲಪ್ಪ(ಬೆಟ್ಟದ ಮಹಾದೇವ) ದೇವಸ್ಥಾನಕ್ಕೆ ಕಿಡಿ ಗೇಡಿಗಳು ಹಾನಿ ಉಂಟು ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಅವರೇ ಕಲ್ಲಿನಲ್ಲಿ ನಿರ್ಮಿಸಿದರು ಎಂದೇ ಹೇಳಲಾಗುವ ಬೊಟ್ಲಪ್ಪ ದೇಗುಲದ ಮೇಲ್ಛಾವಣಿಯ ನಾಲ್ಕು ಮೂಲೆಗಳಲ್ಲಿ ಅಳವಡಿಸಿರುವ ವಿಗ್ರಹಗಳ ಪೈಕಿ ಒಂದು ಬಸವ ವಿಗ್ರಹಕ್ಕೆ ದುಷ್ಕರ್ಮಿಗಳು ಹಾನಿ ಯುಂಟು ಮಾಡಿದ್ದು, ವಿಗ್ರಹದ ತಲೆ ಯನ್ನು ಭಗ್ನಗೊಳಿಸಿ ಕೆಳಗೆ ಉರುಳಿಸಿದ್ದಾರೆ.
ಗ್ರಾಮಸ್ಥರೊಬ್ಬರು ಬೆಟ್ಟದ ದೇವಸ್ಥಾನಕ್ಕೆ ಎಂದಿನಂತೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ದೇವಾಲಯ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಗೋಣಿ ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿ ಶೀಲಿಸಿದರು. ಈ ಸಂದರ್ಭ ಸ್ಥಳದಲ್ಲಿ ಒಂದು ಕತ್ತಿ ದೊರೆತ್ತಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪುರಾಣ ಪ್ರಸಿದ್ಧ ಇತಿಹಾಸವಿರುವ ಕುಂದಾಬೆಟ್ಟಕ್ಕೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಕೂಡ ಮೋಜು ಮಸ್ತಿಗೆಂದು ಆಗಾಗ್ಗೆ ಭೇಟಿ ನೀಡುತ್ತಿದ್ದು, ಅತಿರೇಕದ ವರ್ತನೆಯಿಂದ ಹಲವು ಬಾರಿ ಗ್ರಾಮಸ್ಥ ರಿಂದ ಪ್ರವಾಸಿಗರು ಗೂಸ ತಿಂದಿರುವ ಪ್ರಕರಣಗಳು ನಡೆದಿವೆ. ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡಿಗೆ ಸೇರುವ ಈ ದೇವಸ್ಥಾನದಲ್ಲಿ ಕಾವೇರಿ ತೀರ್ಥೋದ್ಬವ ಸಂದರ್ಭ ಪ್ರತಿವರ್ಷ ಕೊಡಗಿನ ಮೊದಲ ಬೇಡು ಹಬ್ಬ ನಡೆಯುವುದು ಇಲ್ಲಿನ ವಿಶೇಷ.
ಬಸವ ವಿಗ್ರಹ ಭಗ್ನಗೊಳಿಸಿರುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ತರು ಸಭೆ ಸೇರಿ ದೇವಸ್ಥಾನದ ಸುತ್ತ ಮುತ್ತಲ ಪ್ರದೇಶ ಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರವಾಸಿಗರು ಮೋಜು ಮಸ್ತಿಯ ಹೆಸರಲ್ಲಿ ಮದ್ಯಪಾನ ಮತ್ತು ಮಾಂಸವನ್ನು ಪವಿತ್ರ ಕ್ಷೇತ್ರಕ್ಕೆ ಹೊತ್ತು ತರುತ್ತಿರುವುದು ಸ್ಥಳೀಯರ ಧಾರ್ಮಿಕ ಭಾವನೆಯನ್ನು ಕೆರಳಿಸಿದೆ.