ಬೇಲೂರು: ಹಳೇ ಬೀಡು, ಬೇಲೂರು ಹೆಚ್ಚಿನ ಪ್ರವಾಸಿಗರ ಕ್ಷೇತ್ರವಾಗಿದ್ದು ಇದನ್ನು ಅಭಿವೃದ್ಧಿಪಡಿ ಸಲು ಆಸಕ್ತಿ ವಹಿಸಿದ್ದೇವೆ. ಪ್ರವಾಸೋದ್ಯಮ ಮುಖಾಂತರ ಸ್ಥಳೀಯ ಉದ್ದಿಮೆಗಳನ್ನು ಬೆಳೆದು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ರಣಘಟ್ಟ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನೆರವೇರಿಸಿ ಮಾತನಾ ಡಿದ ಅವರು, ಹಳೇಬೀಡಿನಲ್ಲಿ 20 ಕೋಟಿ ವೆಚ್ಚದಲ್ಲಿ ಪ್ರವಾಸಿಗರ ವಸತಿ ಗೃಹಕ್ಕೆ ಹಣ ಮಂಜೂರು ಮಾಡಲಾಗಿದೆ. ಹಳೇಬೀಡು ಭಾಗದ ರೈತರ ಹಿತ ಕಾಪಾಡುವುದ ರೊಂದಿಗೆ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುತ್ತೇವೆ. ಬೇಲೂರು ಕ್ಷೇತ್ರದ ಜನತೆ ಜೆಡಿಎಸ್ ಬಗ್ಗೆ ವಿಶ್ವಾಸವಿಟ್ಟು ಕೆ.ಎಸ್. ಲಿಂಗೇಶ್ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಜನತೆ ಋಣವನ್ನು ಅಭಿವೃದ್ಧಿ ಕೆಲಸದ ಮುಖಾಂತರ ತೀರಿಸುತ್ತೇವೆ ಎಂದು ಭರವಸೆ ನೀಡಿದರು.
ಹಳೇಬೀಡು ಭಾಗದ ಜನತೆಯ ಬಹು ದಿನಗಳ ಹೋರಾಟಕ್ಕೆ ಸ್ಪಂದಿಸಿ ರಣಘಟ್ಟ ನೀರಾವರಿ ಯೋಜನೆಯಿಂದ ನೀರು ಹರಿಸಲು ಹಣ ಮಂಜೂರು ಮಾಡ ಲಾಗಿದೆ ಎಂದು ತಿಳಿಸಿದರು.
ಸಂಸದ ಹೆಚ್.ಡಿ.ದೇವೇಗೌಡ ಮಾತ ನಾಡಿ, ರಣಘಟ್ಟ ನೀರಾವರಿ ಯೋಜನೆ ಹಾಗೂ ಹೊಯ್ಸಳರ ನಾಲೆಯನ್ನು ಪರಿಶೀಲನೆ ನಡೆಸಿದ್ದೇವೆ. ಪರಿಶೀಲನೆ ವೇಳೆ ರೈತ ಸಂಘದವರು ಚರ್ಚೆ ನಡೆಸಿದ್ದರು. ಬಹುಕೋಟಿ ವೆಚ್ಚದ ಕಾಮಗಾರಿಯಾಗಿ ದ್ದರಿಂದ ಹಲವು ಬಾರಿ ಚರ್ಚೆಗಳ ನಂತರ ಹಣಬಿಡುಗಡೆ ಮಾಡಲಾಗಿದೆ ಎಂದರು.
ಶಾಸಕ ಕೆ.ಎಸ್.ಲಿಂಗೇಶ್ ಅಧ್ಯಕ್ಷತೆ ವಹಿಸಿದ್ದರು. ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು, ಸದಸ್ಯರಾದ ಲತಾ ದಿಲೀಪ್‍ಕುಮಾರ್, ಎಚ್.ಎಂ.ಮಂಜಪ್ಪ, ತಾಲೂಕು ಪಂಚಾಯತಿ ಅಧ್ಯಕ್ಷ ರಂಗೇಗೌಡ, ಸದಸ್ಯರಾದ ಸುಮ ಪರಮೇಶ್, ಪಿ.ಎಸ್.ಹರೀಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಮ್ಮ ಇದ್ದರು.