ಲಸಿಕೆಗೆ ಮೈಸೂರಿನ ಪಿಂಕ್ ಬೂತ್‍ಗಳಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರು

ಲಸಿಕೆಗೆ ಮೈಸೂರಿನ ಪಿಂಕ್ ಬೂತ್‍ಗಳಲ್ಲಿ ಉತ್ತಮ ಪ್ರತಿಕ್ರಿಯೆ

March 9, 2021

ಮೈಸೂರು, ಮಾ. 8(ಆರ್‍ಕೆ)- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ಎರಡು ಆಸ್ಪತ್ರೆಗಳಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ಪಿಂಕ್ ಬೂತ್‍ಗಳಲ್ಲಿ ಕೊರೊನಾ ಲಸಿಕೆಗೆ ಉತ್ತಮ ಸ್ಪಂದನೆ ದೊರೆಯಿತು.

ಮೈಸೂರಿನ ಬನ್ನಿಮಂಟಪ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೆಆರ್‍ಎಸ್ ರಸ್ತೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಪಿಂಕ್ ಬೂತ್‍ಗಳನ್ನು ತೆರೆಯಲಾಗಿತ್ತು. ಕೇಂದ್ರಕ್ಕೆ ಪಿಂಕ್ ಬಲೂನುಗಳಿಂದ ಅಲಂಕರಿಸಿ, ಬ್ಯಾನರ್‍ಗಳನ್ನೂ ಅಳವಡಿಸಲಾಗಿತ್ತಲ್ಲದೆ ಲಸಿಕೆ ನೀಡುವ ಮಹಿಳಾ ಸಿಬ್ಬಂದಿ ಸಹ ಪಿಂಕ್ ಬಣ್ಣದ ಉಡುಪು ಧರಿಸಿದ್ದುದು ವಿಶೇಷವಾಗಿತ್ತು.

ಅಲ್ಲಿ ಕೇವಲ ಮಹಿಳಾ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಯಿತು. ಇಂದು ಬೆಳಗ್ಗೆಯಿಂದಲೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಲಸಿಕೆ ಪಡೆಯು ತ್ತಿದ್ದರು. ಜಿಲ್ಲಾ ಆಸ್ಪತ್ರೆಯ ಪಿಂಕ್ ಬೂತ್‍ನಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ 90 ಮಂದಿ ಲಸಿಕೆ ಪಡೆದಿದ್ದರು. ಎರಡೂ ಸರ್ಕಾರಿ ಆಸ್ಪತ್ರೆಗಳ ಪಿಂಕ್ ಬೂತ್‍ನಲ್ಲಿ ಒಟ್ಟು 400ರಿಂದ 500 ಮಂದಿ ಹಿರಿಯ ಮಹಿಳೆಯರು ಲಸಿಕೆ ಪಡೆದಿದ್ದಾರೆ.

ನಾವು ಇನ್ನೂ ನಾಲ್ಕೈದು ದಿನಗಳವರೆಗೆ ಪಿಂಕ್ ಬೂತ್‍ನಲ್ಲಿ ಮಹಿಳೆಯರಿಗೆ ಲಸಿಕೆ ನೀಡಲು ಮುಂದಾಗಿದ್ದೇವೆ ಎಂದು ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿದೇವಿ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಪಿಂಕ್ ಬೂತ್ ಜೊತೆಗೆ ಸಾಮಾನ್ಯ ಕೇಂದ್ರದಲ್ಲೂ ಸಾರ್ವಜನಿಕರಿಗೆ 3ನೇ ಹಂತದ ಲಸಿಕೆ ನೀಡುವ ಪ್ರಕ್ರಿಯೆ ಎಂದಿನಂತೆ ಮುಂದುವರಿದಿದೆಯಾದ್ದರಿಂದ ಜಿಲ್ಲಾ ಆಸ್ಪತ್ರೆವೊಂದರಲ್ಲೇ ದಿನಕ್ಕೆ 250ರಿಂದ 300 ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

Translate »