ಜನ ರೊಚ್ಚಿಗೆದ್ದು ನಿಮ್ಮನ್ನು ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ
ಮೈಸೂರು

ಜನ ರೊಚ್ಚಿಗೆದ್ದು ನಿಮ್ಮನ್ನು ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ

November 23, 2021

ಮೈಸೂರು, ನ.22(ಆರ್‍ಕೆಬಿ)- ಈ ಸರ್ಕಾರದಲ್ಲಿ ಕೇವಲ ಘೋಷಣೆಗಳಷ್ಟೆ. ಸರ್ಕಾರಕ್ಕೆ ಭೂಮಿ ಕಾಣುತ್ತಿಲ್ಲ. ಕೊಡಗಿನ ಜನರಿಗೆ ಈ ಈವರೆಗೂ ಪರಿಹಾರ ನೀಡಿಲ್ಲ. ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಇದನ್ನು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡು, ಅನುಮತಿ ಪಡೆದು ಪರಿಹಾರ ನೀಡಬಹುದು. ಸರ್ಕಾರದಲ್ಲಿ ಹಣ ಇಲ್ಲ ಎನ್ನುವುದು ಸುಳ್ಳು. ನನ್ನ ಪ್ರಕಾರ ಸರ್ಕಾರದಲ್ಲಿ ಹಣ ಇದೆ. ಎಲ್ಲದಕ್ಕೂ ಒಂದು ಮಿತಿ ಎಂಬುದಿದೆ. ಜನರು ರೊಚ್ಚಿಗೆದ್ದು ನಿಮ್ಮನ್ನು ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ರಾಜ್ಯದಲ್ಲಿ 5ರಿಂದ 6 ಲಕ್ಷ ಹೆಕ್ಟೇರ್‍ನ ಬೆಳೆ ನಷ್ಟ ಆಗಿದೆ. ಸರ್ಕಾರದ ಪರಿಹಾರದ ಗೈಡ್‍ಲೈನ್‍ನಿಂದ ಜನರ ಸಮಸ್ಯೆ ಸರಿಪಡಿಸಲಾಗದು. ವರದಿ ಇಟ್ಟುಕೊಂಡು ಪರಿಹಾರ ಕೊಡುವುದು ಸರಿಯಲ್ಲ. ಮೊದಲು ಅದನ್ನು ಬಿಟ್ಟು, ನಷ್ಟವಾಗಿ ರುವವರಿಗೆ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ರಸ್ತೆ, ಬ್ರಿಡ್ಜ್ ಹಾಳಾಗಿವೆ. 20ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸರ್ಕಾರದಲ್ಲಿರುವ ಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡಬಾರದು. ಈಗಾಗಲೇ ಸಚಿವರು ಹೋಗಿ ಸರ್ವೆ ಮುಗಿಸ ಬೇಕಿತ್ತು. ಆದರೆ ಈವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ ಎಂದು ದೂರಿದರು. ನೆರೆ ಪರಿಹಾರದ ವಿಚಾರದಲ್ಲಿ ಸರ್ಕಾರದ ಬೂಟಾ ಟಿಕೆ, ನೀತಿ ಸಂಹಿತೆ ನೆಪ ಬಿಟ್ಟು ನೆರೆ ಸಂತ್ರಸ್ತರಿಗೆ ನೆರವಾಗಬೇಕು. ಬೇರೆ ವಿಚಾರಕ್ಕೆ ನೀತಿಸಂಹಿತೆ ಅಡ್ಡಿಯಾಗಲ್ಲ. ರೈತರಿಗೆ ಪರಿಹಾರ ಕೊಡಲು ನೀತಿಸಂಹಿತೆ ಅಡ್ಡಿಯಾಗುತ್ತದೆ ಎಂಬ ಕುಂಟು ನೆಪ ಹೇಳುತ್ತಿದ್ದಾರೆ. ಇಂತಹ ಬೂಟಾಟಿಕೆ ಹೇಳಿಕೆಗಳನ್ನು ಬಿಟ್ಟು ಮೊದಲು ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಆಗ್ರಹಿಸಿದರು.

Translate »