ಸಂದೇಶ್ ನಾಗರಾಜ್‍ಗೆ ಜೆಡಿಎಸ್ ಬಾಗಿಲು ಮುಚ್ಚಿದೆ: ಹೆಚ್‍ಡಿಕೆ
ಮೈಸೂರು

ಸಂದೇಶ್ ನಾಗರಾಜ್‍ಗೆ ಜೆಡಿಎಸ್ ಬಾಗಿಲು ಮುಚ್ಚಿದೆ: ಹೆಚ್‍ಡಿಕೆ

November 23, 2021

ಮೈಸೂರು: ಸಂದೇಶ್ ನಾಗರಾಜ್ ಅವರು ಜೆಡಿಎಸ್ ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನೂ ಮಾಡಲ್ಲ. ಸಂದೇಶ್ ನಾಗರಾಜ್ ಬೇರೆ ಯಾರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಅವರು ಯಾರನ್ನು ಸಂಪರ್ಕಿಸಿದ್ದಾರೋ ಅದೂ ನನಗೆ ತಿಳಿದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಪರಿಷತ್ ಚುನಾವಣೆ ಸಮರ ಕುರಿತು ಮಾತ ನಾಡಿದ ಅವರು, ಚುನಾವಣೆ ಗೆಲ್ಲುವುದರಲ್ಲಿ ಬಿಜೆಪಿಯಷ್ಟು ಅನುಭವ ನಮಗಿಲ್ಲ. ಯಾವುದೇ ಕೆಲಸ ಮಾಡದಿದ್ದರೂ ಜನರಿಂದ ಹೇಗೆ ಮತ ಪಡೆಯಬಹುದು ಎಂಬ ಜಾಡು ಚೆನ್ನಾಗಿ ತಿಳಿದಿದ್ದಾರೆ. ನಮ್ಮ ಶಕ್ತಾನುಸಾರ 6ರಿಂದ 8 ಸ್ಥಾನಗಳಲ್ಲಿ ನಾವು ಅಭ್ಯರ್ಥಿ ಹಾಕುತ್ತೇವೆ ಎಂದರು.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‍ಗೆ ಬಿಜೆಪಿ ಬೆಂಬಲ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ನಮಗೆ ಯಾರ ಬೆಂಬಲವೂ ಬೇಡ ಅಂತಾರೆ. ಅದೇ ರೀತಿ ಜೆಡಿಎಸ್‍ನಿಂದ ಬೆಂಬಲ ಸಿಗುತ್ತದೆಂದು ಹೇಳುತ್ತಾರೆ. ಇದರಿಂದ ಜೆಡಿಎಸ್ ಇನ್ನೂ ಪ್ರಸ್ತುತವಾಗಿದೆ. ಆದರೆ ಇಲ್ಲಿವರೆಗೆ ಆ ಪ್ರಸ್ತಾಪ ನನ್ನ ಬಳಿ ಬಂದಿಲ್ಲ. ಬಂದ ನಂತರ ಜೆಡಿಎಸ್ ನಿಲುವಿನ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.

ಜೆಡಿಎಸ್‍ನಲ್ಲಿ ಶಂಖ ಊದಲೂ ಜನರಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾವು ಶಂಖ ಊದಲು ಜನ ಕರೆದುಕೊಂಡು ಬರಬೇಕಿಲ್ಲ. ಕೇವಲ ಶಂಖ ಊದುವುದರಿಂದ ಏನೂ ಆಗಲ್ಲ. ನೀವು ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ, ಶಂಖ ಊದಿಕೊಳ್ಳಿ. ಆದರೆ ಈಗ ಶಂಖ ಊದುವ ಕಾಲ ಅಲ್ಲ, ಕೆಲಸ ಮಾಡಿ ಎಂದು ಸಲಹೆ ನೀಡಿದರು. ನಾವು ಅಧಿಕಾರದಲ್ಲಿದ್ದಷ್ಟು ದಿನ ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದೇವೆ. ನಾವು ಏನು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬುದಕ್ಕೆ ದಾಖಲೆ ಇಟ್ಟುಕೊಂಡಿದ್ದೇವೆ. ಆದರೆ ನೀವೇನು ಅಭಿವೃದ್ಧಿ ಮಾಡಿದ್ದೀರಿ? ನಿಮ್ಮನ್ನು ನೀವು ಅಭಿವೃದ್ಧಿ ಮಾಡಿಕೊಂಡಿದ್ದೀರಿ ಅಷ್ಟೇ. ನಿಮ್ಮ ಹಿಂದೆ ಬಾವುಟ ಹಿಡಿದು ಬರುವವರ ಅಭಿವೃದ್ಧಿ ಮಾಡಿದ್ದೀರಿ. ಆದರೆ ನಿಮ್ಮನ್ನು ಅಧಿಕಾರದಲ್ಲಿ ಕೂರಿಸಿದವರ ಅಭಿವೃದ್ಧಿ ಮಾಡಿದ್ದೀರಾ? ಬಕಾಸುರರ ರೀತಿ ನುಂಗಿದ್ದೇ ಅಭಿವೃದ್ಧಿಯೇ? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ರವಿಕುಮಾರ್, ಜಿಪಂ ಮಾಜಿ ಸದಸ್ಯ ಮಾದೇಗೌಡ ಉಪಸ್ಥಿತರಿದ್ದರು.

Translate »