ಮೈಸೂರು ಪ್ರವೇಶಿಸಿದ `ಭಾರತ್ ಐಕ್ಯತಾ ಯಾತ್ರೆ’ ಅರಮನೆ ಎದುರು ರಾಹುಲ್ ವಾಸ್ತವ್ಯ
ಮೈಸೂರು

ಮೈಸೂರು ಪ್ರವೇಶಿಸಿದ `ಭಾರತ್ ಐಕ್ಯತಾ ಯಾತ್ರೆ’ ಅರಮನೆ ಎದುರು ರಾಹುಲ್ ವಾಸ್ತವ್ಯ

October 3, 2022

ಮೈಸೂರು, ಅ.2(ಎಸ್‍ಬಿಡಿ)- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರಥ್ಯದ `ಭಾರತ ಐಕ್ಯತಾ ಯಾತ್ರೆ’ ಭಾನುವಾರ ಸಂಜೆ ಮೈಸೂರು ನಗರ ತಲುಪಿತು.
ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾರಿನಲ್ಲಿ ಮೈಸೂರು ತಾಲೂಕು ಕಡಕೊಳಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅಲ್ಲಿನ ಕಾಳಿ ಬೀರಮ್ಮ ದೇವಸ್ಥಾನದ ಬಳಿಯಿಂದ ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಆರಂಭಿಸಿದರು. ಸಂಜೆ 4.45ಕ್ಕೆ ಅರಂಭ ಗೊಂಡ ಯಾತ್ರೆ ಸಂಜೆ 6.48ಕ್ಕೆ ಮೈಸೂರಿನ ಬಂಡಿಪಾಳ್ಯ ತಲುಪಿತು. ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತ ನಾಡಲು ರಾಹುಲ್ ಗಾಂಧಿ ವೇದಿಕೆ ಏರುತ್ತಿದ್ದಂತೆ ಧೋ.. ಎಂದು ಜೋರು ಮಳೆ ಸುರಿಯಿತು.

ಸುತ್ತೂರು ಶ್ರೀಗಳ ಭೇಟಿ: ಮಳೆಯಲ್ಲೇ ಭಾಷಣ ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂದಿ,ü ನಂತರ ಕಾರಿನಲ್ಲಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲಿಂದ ನೇರವಾಗಿ ವಸ್ತು ಪ್ರದರ್ಶನ ಆವರಣದ ಎದುರಿನ ಮೈದಾನದಲ್ಲಿ ವಾಸ್ತವ್ಯ ಹೂಡಿದರು. ಕಡಕೊಳದಿಂದ ರಾಹುಲ್ ಗಾಂಧಿ ಅವರೊಂ ದಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಹೆಜ್ಜೆ ಹಾಕಿದರು. ಕಡಕೊಳ ಸಮೀಪದ ಕೆ.ಎಂ.ಹುಂಡಿಯಲ್ಲಿ ನೆರೆದಿದ್ದ ಸಾರ್ವಜನಿಕರತ್ತ ಕೈ ಬೀಸಿದ ರಾಹುಲ್‍ಗಾಂಧಿ ಅವರು ಕೆಲವರೊಡನೆ ಮಾತನಾಡಿ ದರು. ಈ ವೇಳೆ ಜನರ ತಳ್ಳಾಟದ ನಡುವೆ ಮಾಜಿ ಉಪಮೇಯರ್ ಪುಷ್ಪವಲ್ಲಿ ಕೆಳಗೆ ಬಿದ್ದರು. ಕೂಡಲೇ ಅವರನ್ನು ರಾಹುಲ್ ಗಾಂಧಿ ಮೇಲೆತ್ತಿ ಸಂತೈಸಿದರು. ಇದೇ ಸಂದರ್ಭ ದಲ್ಲಿ ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಸಾಗುತ್ತಿದ್ದ ಆಂಬ್ಯು ಲೆನ್ಸ್‍ಗೆ ದಾರಿ ಮಾಡಿಕೊಡಲು ರಾಹುಲ್ ಗಾಂಧಿ ಸೂಚಿಸಿದರು ಮರಸೆ ಗೇಟ್, ಮಂಡಕಳ್ಳಿ ಗೇಟ್, ಗೆಜ್ಜಗಳ್ಳಿ ಗೇಟ್ ಹೀಗೆ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಜನ ಜಮಾಯಿಸಿದ್ದರು. ರಾಹುಲ್ ಗಾಂಧಿ ಜನರತ್ತ ಕೈಬೀಸಿ, ಅಭಿನಂದನೆ ತಿಳಿಸಿದರು. ಯಾತ್ರೆಯಲ್ಲಿ ಭಾಗಿಯಾಗಿದ್ದ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರಿಗೆ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗದುದ್ದಕ್ಕೂ `ಭಾರತ ಐಕ್ಯತಾ ಯಾತ್ರೆ’ಯ ಬ್ಯಾನರ್, ಕಟೌಟ್ ಅಳವಡಿಸಲಾಗಿತ್ತು.

ಗಮನ ಸೆಳೆದ ಟೀ ಸ್ಟಾಲ್: ಪಾದಯಾತ್ರೆ ಮಾರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ತೆರೆದಿದ್ದ ಅವಿದ್ಯಾವಂತ ಟೀ ಮತ್ತು ಬೋಂಡಾ ಸ್ಟಾಲ್ ತೆರೆಯುವ ಮೂಲಕ ಬಿಜೆಪಿ ಸರ್ಕಾರದ ಆಡಳಿತವನ್ನು ಅಣಕಿಸಿದರು. ವಕೀಲರು, ವೈದ್ಯರು, ಇಂಜಿನಿಯರ್‍ಗೆ ಪದವೀ ಧರರಿಗೆ ಹೊಂದುವ ಸಮವಸ್ತ್ರ ಧರಿಸಿದ್ದವರು ಟೀ ಹಾಗೂ ಬೋಂಡಾ ಮಾರಾಟ ಮಾಡಿದರು. ರಾಹುಲ್‍ಗಾಂಧಿ ಸೇರಿದಂತೆ ಜೊತೆಯಲ್ಲಿದ್ದ ಮುಖಂಡರೂ ಅಲ್ಲಿ ಟೀ ಸವಿದರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೂ ಮಾರ್ಗಮಧ್ಯೆ ಸೇಬು, ಮೋಸಂಬಿ, ಲಸ್ಸಿ, ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಜಿಲ್ಲೆಯವರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ನಾಯಕರ ಟಿ-ಶರ್ಟ್: ಐಕ್ಯತಾ ಯಾತ್ರೆಯಲ್ಲಿ ಭಾಗಿಯಾಗಿದ್ದ ವಿವಿಧ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಆಯಾ ಕ್ಷೇತ್ರದ ಮುಖಂಡರ ಭಾವಚಿತ್ರ ಹಾಗೂ ರಾಹುಲ್ ಗಾಂಧಿ ಭಾವಚಿತ್ರವುಳ್ಳ ಟಿ-ಶರ್ಟ್ ಧರಿಸಿ ಗಮನ ಸೆಳೆದರು. ತಿ. ನರಸೀಪುರ ಕಾರ್ಯಕರ್ತರು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆ.ಆರ್. ನಗರದವರು ಡಿ.ರವಿಶಂಕರ್, ಹೆಚ್.ಡಿ.ಕೋಟೆ ತಾಲೂಕಿನವರು ಶಾಸಕ ಅನಿಲ್ ಚಿಕ್ಕಮಾದು ಭಾವಚಿತ್ರವುಳ್ಳ ಟಿ-ಶರ್ಟ್ ಧರಿಸಿದ್ದು ಕಂಡುಬಂದಿತು. ಬಹುತೇಕ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು, ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು.

ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನ ಐಕ್ಯತಾ ಯಾತ್ರೆಯ ಮೆರಗು ಹೆಚ್ಚಿಸಿದ್ದವು. ನಂದಿಧ್ವಜ, ಕಂಸಾಳೆ, ಡೊಳ್ಳು ಕುಣಿತ, ನಗಾರಿ, ವೀರಗಾಸೆ, ಬ್ಯಾಂಡ್‍ಸೆಟ್ ಕಲಾವಿದರು ತಮ್ಮ ಕಲಾಪ್ರದರ್ಶನದ ಮೂಲಕ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು. ಮಾರ್ಗಮಧ್ಯೆ ವಾದ್ಯಗಳ ಸದ್ದಿಗೆ ಕಾರ್ಯಕರ್ತರು ಕುಣಿದು ಸಂಭ್ರಮಿಸಿದರು. ಐಜಿಪಿ ಪ್ರವೀಣ್ ಪವಾರ್ ನಿರ್ದೇಶನದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಚೇತನ್ ಹಾಗೂ ಎಎಸ್ಪಿ ನಂದಿನಿ ಮೇಲುಸ್ತುವಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡ ಲಾಗಿತ್ತು. ನಾಲ್ವರು ಡಿವೈಎಸ್ಪಿ, 20 ಮಂದಿ ಇನ್‍ಸ್ಪೆಕ್ಟರ್‍ಗಳು, 500ಕ್ಕೂ ಹೆಚ್ಚು ಸಿಬ್ಬಂದಿ ಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು. ಯಾತ್ರೆ ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಬಂಡಿಪಾಳ್ಯದ ಬಳಿ ರಿಂಗ್‍ರೋಡ್ ಜಂಕ್ಷನ್‍ನಲ್ಲಿ ವಾಹನ ತಡೆದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಜೋರು ಮಳೆಯಿಂದ ಪೊಲೀಸರು, ವಾಹನ ಸವಾರರು, ಯಾತ್ರೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ಹೈರಾಣಾದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲ, ಕೆ.ಸಿ.ವೇಣು ಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೋಳಿ, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ರಾಮಲಿಂಗರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ಮೋಟಮ್ಮ, ಮಹಮ್ಮದ್ ನಲಪಾಡ್ ಹ್ಯಾರಿಸ್, ಯು.ಟಿ.ಖಾದರ್, ಐವಾನ್ ಡಿಸೋಜಾ, ರಿಜ್ವಾನ್ ಹರ್ಷದ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಡಾ.ಮಂಜುನಾಥ್, ಕಳಲೆ ಕೇಶವಮೂರ್ತಿ, ಕೆ.ಮರೀಗೌಡ, ಐಶ್ವರ್ಯ ಮಹದೇವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್, ಕೂರ್ಗಳ್ಳಿ ಮಹದೇವ್, ಎಂ.ಪ್ರದೀಪ್‍ಕುಮಾರ್ ಸೇರಿದಂತೆ ಅನೇಕ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Translate »