ಬದನವಾಳಲ್ಲಿ ಗಾಂಧಿ ಜಯಂತಿ
ಮೈಸೂರು

ಬದನವಾಳಲ್ಲಿ ಗಾಂಧಿ ಜಯಂತಿ

October 3, 2022

ನಂಜನಗೂಡು, ಅ.2(ರಂಗಸ್ವಾಮಿ)- ಕಾಂಗ್ರೆಸ್ ವರಿಷ್ಠ ರಾದ ರಾಹುಲ್‍ಗಾಂಧಿ ಮತ್ತು ರಾಜ್ಯ ನಾಯಕರು ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳವಾದ ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು.
ತಾಂಡವಪುರದ ಬಳಿಯ ಎಂಐಟಿ ಕಾಲೇಜಿನ ಬಳಿ ಯಿಂದ ವಾಹನದಲ್ಲಿ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬೆಳಗ್ಗೆ 8ಕ್ಕೆ ರಾಹುಲ್ ಗಾಂಧಿ ಆಗಮಿಸಿದರು. ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಸಿ.ವೇಣು ಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್, ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ್, ಸಲಿಂಅಹಮದ್, ಬಿ.ಕೆ.ಹರಿಪ್ರಸಾದ್ ಪುಷ್ಪನಮನ ಸಲ್ಲಿಸಿದರು.

ನಂತರ ಗಾಯಕಿ ಸಂಗೀತಕಟ್ಟಿ ಮತ್ತು ತಂಡದವರು ಹಾಡಿದ ಪ್ರಾರ್ಥನೆ ಗೀತೆಗೆ ರಾಹುಲ್‍ಗಾಂಧಿ ಧ್ಯಾನಾಸಕ್ತರಾಗಿ ಗಾಂಧೀಜಿಗೆ ನಮನ ಸಲ್ಲಿಸಿದರು. ವೈಷ್ಣವ ಜನತೋ, ರಘುಪತಿ ರಾಘವ ರಾಜಾರಾಂ, ವಂದೇಮಾತರಂ, ರಾಮ್‍ರಾಮ್…ಗೀತೆಗಳು ಕಾರ್ಯ ಕ್ರಮಕ್ಕೆ ಕಳೆಗಟ್ಟಿದವು. ಗಾಂಧೀಜಿರವರು 1927 ಮತ್ತು 1932 ರಲ್ಲಿ ಭೇಟಿ ನೀಡಿದ್ದ ವೇಳೆ ಖಾದಿ ಕೇಂದ್ರದಲ್ಲಿ ನೌಕರರಾಗಿದ್ದ ಬದನವಾಳು ಗ್ರಾಮದ ಕೆ.ರಂಗಯ್ಯರವರನ್ನು ಆತ್ಮೀಯವಾಗಿ ಮಾತನಾಡಿಸಿ, ಕುಶಲೋಪರಿ ವಿಚಾರಿಸಿದರು. ನಂತರ 8.30ರ ವೇಳೆಗೆ ಖಾದಿಬಟ್ಟೆ ನೇಯ್ಗೆ ಮಾಡುವುದನ್ನು ವೀಕ್ಷಣೆ ನಡೆಸಿದ ರಾಹುಲ್‍ಗಾಂಧಿ, ಕೇಂದ್ರದ ಮಹಿಳಾ ನೌಕರರ ಸಮಸ್ಯೆ ಆಲಿಸಿ ದರು. ಬಳಿಕ ಖಾದಿ ಕೇಂದ್ರದಲ್ಲಿ ತೆಂಗಿನ ಗಿಡವನ್ನು ನೆಡುವ ಮೂಲಕ ಶ್ರಮದಾನ ನಡೆಸಿದರು. ನಂತರ 11.15ರ ವೇಳೆಗೆ ಗ್ರಾಮದ ಶಾಲೆಯ ಆವರಣದಲ್ಲಿ ಬಣ್ಣ ಬಳಿದರು. ಇದೇ ವೇಳೆ ಶಾಲೆಯ ವಿದ್ಯಾರ್ಥಿನಿಯರಾದ ಸೌಜನ್ಯ, ಜಾನವಿ, ಸಂಜನಾ ರವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಮುಂದೆ ನೀವು ಏನಾಗ ಬೇಕು ಎಂದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು. ತಾಲೂಕಿನ ಬದನವಾಳು ಗ್ರಾಮದಲ್ಲಿ 1993ರಲ್ಲಿ ನಡೆದ
ಕೋಮು ಘರ್ಷಣೆಯ ಬಳಿಕ ಎರಡೂ ಕೋಮಿನವರ ಕಂದಕ ನಿರ್ಮಾಣವಾಗಿ ಸವರ್ಣೀಯರು ಮತ್ತು ದಲಿತರ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ(ಓಣಿ)ಯನ್ನು ಮುಚ್ಚಲಾಗಿತ್ತು. ಎರಡೂ ಕೋಮಿನ ಮುಖಂಡರೊಡನೆ ಸಂವಾದ ನಡೆಸಿದ ರಾಹುಲ್ ಗಾಂದಿ,ü ಅವರನ್ನು ಮನವೊಲಿಸಿ ಗಿಡಗಂಟಿಗಳನ್ನು ತೆರವುಗೊಳಿಸಿ, ರಸ್ತೆಗೆ ಕಲ್ಲು ಹಾಕುವ ಮೂಲಕ 120 ಮೀ. ರಸ್ತೆಯನ್ನು ನಿರ್ಮಿಸಿ ಭಾರತ ಐಕ್ಯತಾ ರಸ್ತೆ ಎಂದು ಹೆಸರಿಟ್ಟು ಸಂಚಾರ ಮುಕ್ತಗೊಳಿಸುವ ಮೂಲಕ ಎರಡೂ ಕೋಮಿನ ಜನರನ್ನು ಒಂದುಗೂಡಿಸಿ ಸೌಹಾರ್ಧತೆ ಮೂಡಿಸುವ ಕೆಲಸ ಮಾಡಿದರು. ನಂತರ 1.15ರ ವೇಳೆಗೆ ಎರಡೂ ಕೋಮಿನ ಮುಖಂಡರೊಡನೆ ಸಹಪಂಕ್ತಿ ಭೋಜನ ಸ್ವೀಕರಿಸುವ ಮೂಲಕ ಭೇದ-ಭಾವವನ್ನು ಅಳಿಸುವ ಕೆಲಸಕ್ಕೆ ಮುನ್ನುಡಿ ಬರೆದರು.

ನಂತರ 3.30ರ ವೇಳೆಗೆ ಬದನವಾಳು ಖಾದಿ ಕೇಂದ್ರದಿಂದ ತೆರಳಿದ ರಾಹುಲ್ ಗಾಂಧಿ ಮಧ್ಯಾಹ್ನ 3.45ರ ವೇಳೆಗೆ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದರು. ದೇವಾಲಯದ ವತಿಯಿಂದ ಅವರನ್ನು ಮಂಗಳವಾದ್ಯಗಳೊಡನೆ ಸ್ವಾಗತಿಸ ಲಾಯಿತು. ದೇವಾಲಯದಲ್ಲಿ ಟಿಪ್ಪು ಸುಲ್ತಾನ್ ಸ್ಥಾಪಿಸಿರುವ ಪಚ್ಚೆ ಲಿಂಗದ ಬಗ್ಗೆ ತಿಳಿದುಕೊಂಡರು. ಡಿ.ಕೆ.ಶಿವಕುಮಾರ್ ವಿವರ ನೀಡಿದರು. ರಾಹುಲ್‍ಗಾಂಧಿರವರಿಗೆ ದೇವಾಲಯದ ವತಿಯಿಂದ ಶೇಷವಸ್ತ್ರ ನೀಡಿ ಗೌರವಿಸಲಾಯಿತು. 4.15ರ ವೇಳೆಗೆ ದೇವಾಲಯದಿಂದ ಕಡಕೊಳಕ್ಕೆ ತೆರಳಿ ಪಾದಯಾತ್ರೆಯನ್ನು ಮುಂದುವರೆಸಿದರು.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ಸುರ್ಜೆವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾ ಯಣ್, ಸಲಿಂಅಹಮದ್, ಬಿ.ಕೆ.ಹರಿಪ್ರಸಾದ್, ಮಾಜಿ ಶಾಸಕರಾದ ಲಕ್ಷ್ಮಿಹೆಬ್ಬಾಳ್‍ಕರ್, ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಶಾಸಕರಾದ ಅನಿಲ್‍ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ರಿಜ್ವಾನ್ ಹರ್ಷದ್, ಮಾಜಿ ಶಾಸಕರಾದ ಕಳಲೆ ಕೇಶವ ಮೂರ್ತಿ, ಬಾಲರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಂ.ಶಂಕರ್, ಕುರಹಟ್ಟಿ ಮಹೇಶ್, ಶ್ರೀಕಂಠನಾಯಕ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇದ್ದರು.

Translate »