ಮೈಸೂರು ದಸರಾ ಕುಸ್ತಿ ಪಂದ್ಯಾವಳಿ ಸಮಾರೋಪ ಮುದೋಳ್ ಪೈ.ಸುನೀಲ್ ಪಡತಾರೆ ದಸರಾ ಕಂಠೀರವ
ಮೈಸೂರು

ಮೈಸೂರು ದಸರಾ ಕುಸ್ತಿ ಪಂದ್ಯಾವಳಿ ಸಮಾರೋಪ ಮುದೋಳ್ ಪೈ.ಸುನೀಲ್ ಪಡತಾರೆ ದಸರಾ ಕಂಠೀರವ

October 3, 2022

ಮೈಸೂರು, ಅ.2(ಎಂಕೆ)- ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರಿನ ಪೈಲ್ವಾನ್ ಆರ್.ಯಶವಂತ್ ‘ದಸರಾ ಕುಮಾರ್’, ಮುದೋಳ್‍ನ ಪೈಲ್ವಾನ್ ಸುನೀಲ್ ಪಡತಾರೆ ‘ದಸರಾ ಕಂಠೀರವ’, ಬಾಗಲಕೋಟೆ ಪೈಲ್ವಾನ್ ಬಾಪು ಸಾಹೇಬ್ ಶಿಂದೆ ‘ದಸರಾ ಕೇಸರಿ’, ಬೆಳಗಾವಿಯ ಪೈಲ್ವಾನ್ ರೋಹನ್ ನಾರಾಯಣ ‘ದಸರಾ ಕಿಶೋರ್’ ಹಾಗೂ ಉತ್ತರ ಕನ್ನಡದ ಮಹಿಳಾ ಪೈಲ್ವಾನ್ ಪ್ರಿನ್ಸಿತಾ ಪೆಡ್ರು ‘ದಸರಾ ಕಿಶೋರಿ’ ಪ್ರಶಸ್ತಿ ಮುಡಿಗೇರಿಸಿಕೊಂಡರು.

ನಗರದ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೊನೆಯ ಪ್ರಶಸ್ತಿ ಕುಸ್ತಿ ಪಂದ್ಯಗಳು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯಗಳಲ್ಲಿ ತೊಡ್ಡೆ ತಟ್ಟಿದ ಪೈಲ್ವಾನರು ಅಖಾಡದಲ್ಲಿ ಎದರಾಳಿಗಳಿಗೆ ಮಣ್ಣು ಮುಕ್ಕಿಸಿ ವಿಜಯ ಸಾಧಿಸಿದರು.

ದಸರಾ ಕುಮಾರ್: ಮೊದಲು ನಡೆದ ‘ದಸರಾ ಕುಮಾರ್’ ಪ್ರಶಸ್ತಿ ಪಂದ್ಯದಲ್ಲಿ ಮೈಸೂರಿನ ಪೈಲ್ವಾನರಾದ ಆರ್.ಯಶವಂತ್ ಹಾಗೂ ದೀಕ್ಷಿತ್ ಕುಮಾರ್ ನಡುವೆ ಜಿದ್ದಾಜಿದ್ದಿನ ಕುಸ್ತಿ ನಡೆಯಿತು. ಆರಂಭದಿಂದಲೂ ಪಾಯಿಂಟ್ ಗಳಿಸುತ್ತಾ ಗಮನ ಹರಿಸಿದ ಪೈಲ್ವಾನ್ ಆರ್.ಯಶವಂತ್ ವಿಜಯ ಸಾಧಿಸಿದರೆ, ಉತ್ತಮ ಪೈಪೊಟಿ ನೀಡಿದ ದೀಕ್ಷಿತ್ ದ್ವಿತೀಯ ಸ್ಥಾನ ಪಡೆದರು. ಮಂಡ್ಯ ಪೈ.ಎಂ.ಆರ್.ವಿಕಾಶ್ ಹಾಗೂ ಮೈಸೂರು ಪೈ.ಚೇತನ್‍ಗೌಡ ತೃತೀಯ ಬಹುಮಾನ ಹಂಚಿಕೊಂಡರು.

ದಸರಾ ಕಿಶೋರಿ: ಉತ್ತರ ಕನ್ನಡ ಮಹಿಳಾ ಕುಸ್ತಿಪಟು ಪೈ.ಗಾಯತ್ರಿ ರಮೇಶ್ ವಿರುದ್ಧ ಜಯಗಳಿಸಿದ ಪೈ.ಪ್ರಿನ್ಸಿತಾ ಪೆಡ್ರು ‘ದಸರಾ ಕಿಶೋರಿ’ ಪ್ರಶಸ್ತಿ
ತಮ್ಮದಾಗಿಸಿಕೊಂಡರು. ಪ್ರಶಸ್ತಿ ಪಂದ್ಯದಲ್ಲಿ ಸೋಲು ಅನುಭವಿಸಿದ ಪೈ.ಗಾಯತ್ರಿ ರಮೇಶ್ ದ್ವಿತೀಯ ಸ್ಥಾನ ಪಡೆದರೆ, ಗದಗ ಪೈ.ರಾಧಿಕಾ ವಿಶ್ವನಾಥ್ ಹಾಗೂ ಉತ್ತರ ಕನ್ನಡ ಪೈ.ರಕ್ಷಿತಾ ನಾರಾಯಣ್ ತೃತೀಯ ಬಹುಮಾನ ಪಡೆದುಕೊಂಡರು.

ದಸರಾ ಕಿಶೋರ್: ತೀವ್ರ ಪೈಪೋಟಿಯಿಂದ ಕೂಡಿದ್ದ ‘ದಸರಾ ಕಿಶೋರ್’ ಪ್ರಶಸ್ತಿ ಪಂದ್ಯದಲ್ಲಿ ಅಂತಿಮ ಕ್ಷಣಗಳಲ್ಲಿ ಬೆಳಗಾವಿಯ ಪೈ.ರೋಹನ್ ನಾರಾಯಣ್ ವಿಜಯ ಸಾಧಿಸಿದರು. ಆರಂಭದಲ್ಲೇ ಅಂಕಗಳಿಸಿ ಗೆಲುವಿನ ಪೇವರಿಟ್ ಆಗಿದ್ದ ಬಾಗಲಕೋಟೆ ಪೈ.ಸಚಿನ್ ಯಲ್ಲಪ್ಪ ಕೊನೆಯ ಕ್ಷಣಗಳಲ್ಲಿ ಸೋಲು ಅನುಭವಿಸಿದರು. ಬಾಗಲಕೋಟೆ ಪೈ.ಜೋತಿಬಾ ಜಂಬರೆ ಹಾಗೂ ಮಲ್ಲಿಕಾರ್ಜುನ್ ಮೂರನೆ ಸ್ಥಾನವನ್ನು ಹಂಚಿಕೊಂಡರು.

ದಸರಾ ಕೇಸರಿ: ಬಾಗಲಕೋಟೆ ಪೈಲ್ವಾನರಾದ ಬಾಪು ಸಾಹೇಬ್ ಶಿಂದೆ ಹಾಗೂ ಪೈ.ಹೊಳಬಾಸ್ವಿ ಕುಶಾಲ್ ನಡುವೆ ನಡೆದ ‘ದಸರಾ ಕೇಸರಿ’ ಪ್ರಶಸ್ತಿ ಪಂದ್ಯದಲ್ಲಿ ಪೈ.ಬಾಪು ಸಾಹೇಬ್ ಶಿಂದೆ ಜಯಗಳಿಸಿದರು. ಸೋತ ಪೈ.ಹೊಳಬಾಸ್ವಿ ಕುಶಾಲ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರೆ, ಬಾಗಲಕೋಟೆ ಪೈ.ತಿಮ್ಮಂಗೋವ್ಡ್ ಆರ್.ಪಾಟೀಲ್ ಹಾಗೂ ಬೆಳಗಾವಿ ಪೈ.ಮಹೇಶ್ ಕುಮಾರ್ ಮುರಾರಿ ತೃತೀಯ ಬಹುಮಾನ ಪಡೆದರು.

ದಸರಾ ಕಂಠೀರವ: ದಸರಾ ಕುಮಾರ್ ಪ್ರಶಸ್ತಿ ಗೆದ್ದು ದಸರಾ ಕಂಠೀರವ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದ ಮೈಸೂರಿನ ಪೈ.ಆರ್.ಯಶವಂತ್, ಮುದೋಳ್‍ನ ಪೈ.ಸುನೀಲ್ ಪಡೆತಾರೆ ವಿರುದ್ಧ ಅಂತಿಮ ಕ್ಷಣದವರೆಗೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಸೋಲು ಅನುಭವಿಸುವ ಮೂಲಕ ನಿರಾಸೆ ಉಂಟುಮಾಡಿದರು. ಅನುಭವಿ ಪೈ.ಸುನೀಲ್ ಪಡತಾರೆ ‘ದಸರಾ ಕಂಠೀರವ’ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಪೈ.ಆರ್.ಯಶವಂತ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ದಾವಣಗೆರೆ ಪೈ.ಮದುಸೂಧನ್ ಹಾಗೂ ಬೆಳಗಾವಿ ಪೈ.ಪ್ರಕಾಶ್ ಪಾಟೀಲ್ ತೃತೀಯ ಸ್ಥಾನ ಹಂಚಿಕೊಂಡರು.
ನಾಡಕುಸ್ತಿ ಮಿಂಚು: ಪ್ರಶಸ್ತಿ ಪಂದ್ಯಗಳ ನಡುವೆ ನಡೆದ ನಾಡಕುಸ್ತಿ ಪಂದ್ಯಗಳು ಕುಸ್ತಿ ಅಭಿಮಾನಿಗಳ ಕಾತುರ ಹೆಚ್ಚಿಸಿತು. ಕಡೆಯ ದಿನ 15ಕ್ಕೂ ಜೋಡಿಗಳ ವಿರುದ್ಧ ನಡೆದ ನಾಡಕುಸ್ತಿಯಲ್ಲಿ ಸೆಣಸಾಡಿದ ಪೈಲ್ವಾನರು ಮಟ್ಟಿಯಲ್ಲಿ ಮಿಂದೆದ್ದರು. ಪಂದ್ಯಾವಳಿಯ ಕಡೆಯಲ್ಲಿ ಕುಸ್ತಿ ಆಖಾಡಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ಮಾಡಿ ಪ್ರೋತ್ಸಾಹಿಸಿದರು. ಮೇಯರ್ ಶಿವಕುಮಾರ್, ದಸರಾ ಉಪ ಸಮಿತಿ ಅಧ್ಯಕ್ಷ ದೇವರಾಜ್, ಕಾರ್ಯಾಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷರಾದ ಹೆಚ್.ಎಸ್.ವೇದರಾಜ್, ಮಹೇಶ್‍ರಾಜ್ ಅರಸ್, ಎಂ.ಎಂ.ರಾಜೇಗೌಡ, ಕಾರ್ಯದರ್ಶಿ ಎಸ್.ಜೆ.ಹರ್ಷವರ್ಧನ್ ಮತ್ತಿತರರಿದ್ದರು.

Translate »