ಫೋಟೋ ಕ್ಲಿಕ್ಕಿಸಿದ ಸವಾರರ ಮೇಲೆ ದಾಳಿಗೆ ಮುಂದಾದ `ಭೀಮ’; ಬೈಕ್ ಜಖಂ, ವೀಡಿಯೋ ವೈರಲ್
ಕೊಡಗು

ಫೋಟೋ ಕ್ಲಿಕ್ಕಿಸಿದ ಸವಾರರ ಮೇಲೆ ದಾಳಿಗೆ ಮುಂದಾದ `ಭೀಮ’; ಬೈಕ್ ಜಖಂ, ವೀಡಿಯೋ ವೈರಲ್

November 3, 2020

ಮಡಿಕೇರಿ,ನ.2-ಫೋಟೋ ತೆಗೆಯಲು ಮುಗಿಬಿದ್ದ ಸವಾರರ ಮೇಲೆ ದಾಳಿಗೆ ಮುಂದಾದ ಸಾಕಾನೆ, ಬೈಕ್ ಜಖಂಗೊಳಿಸಿರುವ ಘಟನೆ ನಡೆದಿದೆ. ಗೋಣಿಕೊಪ್ಪಲು ಸಮೀಪದ ಮತ್ತಿ ಗೋಡು ಸಾಕಾನೆ ಶಿಬಿರ ಬಳಿಯ ರಾಜ್ಯ ಹೆದ್ದಾರಿ ಯಲ್ಲಿ ಭಾನುವಾರ ಸಂಜೆ ಘಟನೆ ಸಂಭವಿಸಿದ್ದು, ಸಾಕಾನೆ ಫೆÇೀಟೊ ತೆಗೆಯಲು ಹೋಗಿದ್ದ ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತಿಗೋಡು ಶಿಬಿರದ ಸಾಕಾನೆ `ಭೀಮ’ ನನ್ನು ಮಾವುತರು ಹೆದ್ದಾರಿ ಬದಿಯ ಕಾಡಂಚಲ್ಲಿ ಮೇಯಲು ಬಿಟ್ಟಿದ್ದರು. ಭೀಮ ತನ್ನ ಪಾಡಿಗೆ ಮೇಯುತ್ತಿತ್ತು. ಬೈಕ್‍ನಲ್ಲಿ ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ್ದ ಸವಾರರಿಬ್ಬರು ಆನೆಯನ್ನು ಕಂಡು ಫೋಟೋ ತೆಗೆಯಲು ಮುಂದಾಗಿದ್ದಾರೆ. ಕೋಪಗೊಂಡ ಭೀಮ ಬೈಕ್ ಸವಾರರ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಹೆದರಿದ ಸವಾರರು ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ.

ಸಿಟ್ಟಿಗೆದ್ದ ಆನೆ ಭೀಮ ರಸ್ತೆ ಮಧ್ಯ ಬಿದ್ದಿದ್ದ ಬೈಕ್ ಅನ್ನು ಸೊಂಡಿಲಲ್ಲಿ ಅತ್ತಿಂದಿತ್ತ ಎಳೆದಾಡಿ, ಜಖಂ ಗೊಳಿಸಿತು. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾ ಯಿತು. ಹೆದ್ದಾರಿ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಈ ವೇಳೆ ಸ್ಥಳಕ್ಕಾಗಮಿಸಿದ ಮಾವುತರು ಬೈಕ್ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೈಕ್ ಸವಾರರು ಯಾರು ಎಂಬುದು ತಿಳಿದು ಬಂದಿಲ್ಲ ಎಂದು ಶಿಬಿರದ ಆರ್‍ಎಫ್‍ಓ ಕಿರಣ್‍ಕುಮಾರ್ ತಿಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.