ಸೆ.1ರಿಂದ ಮೈಸೂರು ಪಾಲಿಕೆಯಲ್ಲಿ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ಕಡ್ಡಾಯ
ಮೈಸೂರು

ಸೆ.1ರಿಂದ ಮೈಸೂರು ಪಾಲಿಕೆಯಲ್ಲಿ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ಕಡ್ಡಾಯ

August 11, 2021

ಮೈಸೂರು, ಆ.10(ಆರ್‍ಕೆ)-ಸೆಪ್ಟೆಂಬರ್ 1ರಿಂದ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ಪದ್ಧತಿ ಜಾರಿಗೆ ಬರಲಿದೆ. ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿ ರುವ ಪೌರಕಾರ್ಮಿಕರ ಹಾಜರಾತಿ ಪಡೆಯುವಲ್ಲಿ ಅಧಿಕಾರಿಗಳು ಲೋಪವೆಸಗುತ್ತಿರುವುದರಿಂದ ಮೈಸೂರು ನಗರದಾದ್ಯಂತ ಕೆಲಸ ಕುಂಠಿತವಾಗು ತ್ತಿದೆ ಎಂದು ಬಹುತೇಕ ಕಾರ್ಪೊರೇಟರ್‍ಗಳು ಆರೋಪಿಸಿ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ ಹಿನ್ನೆಲೆಯಲ್ಲಿ ಆಯುಕ್ತ ಲಕ್ಷ್ಮೀ ಕಾಂತ ರೆಡ್ಡಿ ಅವರು ತಂತ್ರಜ್ಞಾನ ಹೊಂದಿರುವ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದರು.

ಲಭ್ಯವಾಗಿರುವ ತಂತ್ರಜ್ಞಾನ ಬಳಸಿ ದಿನಕ್ಕೆರಡು ಬಾರಿ ಬಯೋಮೆಟ್ರಿಕ್ ಅಟೆಂಡೆನ್ಸ್ ಪಡೆಯುವ ಜೊತೆಗೆ ಪೌರಕಾರ್ಮಿಕರು ಭೌತಿಕವಾಗಿ ಕರ್ತವ್ಯದ ಮೇಲಿರುವಂತೆ ಮಾಡಲು ಜಿಪಿಎಸ್ ಆ್ಯಪ್ ಅನ್ನೂ ಅಳವಡಿಸುವ ಮೂಲಕ ಅವರ ಕಾರ್ಯಕ್ಷಮತೆ ಹೆಚ್ಚಿಸಿ ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ನಡೆಯುವಂತೆ ಮಾಡಲಾಗುವುದೆಂದು ಆಯುಕ್ತರು ತಿಳಿಸಿದರು. ಪೌರಕಾರ್ಮಿಕರ ಹಾಜರಾತಿ ಪುಸ್ತಕದಲ್ಲಿ ತಪ್ಪು ಮಾಹಿತಿ ನಮೂದು ಮಾಡಿ ಲೋಪವೆಸಗಿ ರುವ ಆರೋಗ್ಯ ವಿಭಾಗದ ನಿರೀಕ್ಷಕರ ವಿರುದ್ಧ ಕಠಿಣ ಕ್ರಮ ವಹಿಸಲೂ ಸಹ ಇಂದಿನ ಕೌನ್ಸಿಲ್ ಸಭೆಯು ನಿರ್ಣಯ ಕೈಗೊಂಡಿತು. ಎಲ್ಲಾ ವಾರ್ಡ್ ಗಳ ದೊಡ್ಡ ದೊಡ್ಡ ರಸ್ತೆ, ಜಂಕ್ಷನ್ ಸ್ವಚ್ಛಗೊಳಿಸಲು ವ್ಯವಸ್ಥೆ, ಮನೆ-ಮನೆಯಿಂದ ಕಸ ಸಂಗ್ರಹಿಸಲು ಇನ್ನೂ 24 ಕಂಪಾಕ್ಟರ್ ಖರೀದಿ, ಪ್ರತೀ ವಾರ್ಡ್‍ಗೆ ಎರಡರಂತೆ ಆಟೋ ಟಿಪ್ಪರ್ ಪೂರೈಸಲು ಕ್ರಮ ಕೈಗೊಳ್ಳುವುದಾಗಿಯೂ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸಭೆಯಲ್ಲಿ ತಿಳಿಸಿದರು. ಪ್ರತೀ 700 ಜನಸಂಖ್ಯೆಗೊಬ್ಬ ರಂತೆ ಪೌರಕಾರ್ಮಿಕರು ಹಾಗೂ ಪ್ರತೀ ವಾರ್ಡ್ ಗೊಬ್ಬರಂತೆ ಸ್ಯಾನಿಟರಿ ಸೂಪರ್‍ವೈಸರ್ ನಿಯೋ ಜಿಸಿ ಮೈಸೂರು ನಗರದಾದ್ಯಂತ ಸ್ವಚ್ಛತೆ ಮಾಡಲು ವ್ಯವಸ್ಥೆ ಮಾಡುವುದಾಗಿಯೂ ಆಯುಕ್ತರು ತಿಳಿಸಿ ದರು. ಗುತ್ತಿಗೆ ಆಧಾರವನ್ನು ರದ್ದುಗೊಳಿಸಿ ನೇರ ಪಾವತಿ ಪದ್ಧತಿಯಂತೆ ಪೌರಕಾರ್ಮಿಕರನ್ನು ನಿಯೋ ಜಿಸಿರುವುದರಿಂದ ಪರಿಣಾಮಕಾರಿಯಾಗಿ ಕೆಲಸ ತೆಗೆಯಲು ಅಗತ್ಯ ಕ್ರಮ ವಹಿಸುವುದಾಗಿಯೂ ಅವರು ಇದೇ ವೇಳೆ ಪ್ರಕಟಿಸಿದರು.

ಸಂಬಳ ನೇರ ಪಾವತಿ ವ್ಯವಸ್ಥೆ ಬಂದ ಮೇಲೂ ನಿಯಮ ಮೀರಿ ಮೇಸ್ತ್ರಿಗಳಿಗೆ ವೇತನ ಪಾವತಿಸಿ ಮಾಡಿರುವ ನಷ್ಟವನ್ನು ವಸೂಲಿ ಮಾಡಬೇಕು, ತಪ್ಪು ಮಾಡಿರುವ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಅಮಾನತು ಮಾಡಿ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಮಾಜಿ ಮೇಯರ್‍ಗಳಾದ ಅಯೂಬ್ ಖಾನ್ ಹಾಗೂ ಆರಿಫ್ ಹುಸೇನ್ ಒತ್ತಾಯಿಸಿದರು. ಅಗತ್ಯವಿಲ್ಲದಿದ್ದರೂ ಮೇಸ್ತ್ರಿಗಳನ್ನಿಟ್ಟುಕೊಂಡು ತಿಂಗಳಿಗೆ 25,000 ರೂ.ನಂತೆ ಸಂಬಳ ಕೊಡುತ್ತಾ ಅಟೆಂಡೆನ್ಸ್‍ನಲ್ಲಿ ದುಡ್ಡು ಹೊಡೆಯುತ್ತಿರುವ ಅಧಿಕಾರಿಗಳು ನಮಗೆ ಬೇಡ. ನೀವು ಆರೋಗ್ಯ ವಿಭಾಗಕ್ಕೆ ಮೇಜರ್ ಸರ್ಜರಿ ಮಾಡಬೇಕಿದೆ ಎಂದು ಅಯೂಬ್‍ಖಾನ್ ಒತ್ತಾಯಿಸಿದರು.

ನೇರ ಪಾವತಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಪಾಲಿಕೆಗೆ ಎಷ್ಟು ಉಳಿತಾಯವಾಗಿದೆ, ಕಾರ್ಪೊರೇಟರ್‍ಗಳಾದ ನಾವೇ ವಾರ್ಡುಗಳಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿರುವಾಗ ಮೇಸ್ತ್ರಿಗಳೆಂದು ನಿಯೋಜಿಸಿರುವವರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದ ಆರಿಫ್ ಹುಸೇನ್, ಪರಿಸರ ಇಂಜಿನಿಯರ್‍ಗಳು ತಮ್ಮ ಮನೆಯವರನ್ನು ಕೂರಿಸಿಕೊಂಡು ಪಾಲಿಕೆ ಕಾರಿನಲ್ಲಿ ಓಡಾಡುತ್ತಿರುವುದರ ವಿರುದ್ಧ ಏಕೆ ಕ್ರಮ ವಹಿಸಿಲ್ಲ ಎಂದು ಪ್ರಶ್ನಿಸಿದರು.

Translate »