ಪೌರಕಾರ್ಮಿಕರ ವಿಚಾರಕ್ಕೆ ಗದ್ದಲ: ಆಡಳಿತ-ವಿಪಕ್ಷ ಸದಸ್ಯರ ವಾಕ್ಸಮರ
ಮೈಸೂರು

ಪೌರಕಾರ್ಮಿಕರ ವಿಚಾರಕ್ಕೆ ಗದ್ದಲ: ಆಡಳಿತ-ವಿಪಕ್ಷ ಸದಸ್ಯರ ವಾಕ್ಸಮರ

August 11, 2021

ಮೈಸೂರು, ಆ.10(ಆರ್‍ಕೆ)- ಪೌರಕಾರ್ಮಿಕರ ಹಾಜರಾತಿ ಪಡೆ ಯುವಲ್ಲಿ ಅಧಿಕಾರಿಗಳು ಲೋಪವೆಸ ಗಿದ್ದಾರೆ ಎಂಬ ಆರೋಪದ ಸಂಬಂಧ ಗಂಭೀರ ಚರ್ಚೆ ನಡೆದು, ಓರ್ವ ಮಹಿಳಾ ಸದಸ್ಯೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದು ನಡೆದ ಪಾಲಿಕೆ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಗದ್ದಲ, ಆಡಳಿತ ಮತ್ತು ವಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ, ಪರಸ್ಪರ ಕೆಸರೆರಚಿ ಕೊಂಡ ಪ್ರಸಂಗ ನಡೆಯಿತು.

ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬೆಳಗ್ಗೆ 11.40 ಗಂಟೆಗೆ ಆರಂಭವಾದ ಕೌನ್ಸಿಲ್ ಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಪ್ರಮೀಳಾ ಭರತ್, ಸುನಂದ ಪಾಲನೇತ್ರ, ಅಯೂಬ್ ಖಾನ್, ಆರಿಫ್ ಹುಸೇನ್, ಲಕ್ಷ್ಮೀ ಶಿವಣ್ಣ, ಪ್ರೇಮಾ ಶಂಕರೇಗೌಡ, ಕೆ.ವಿ. ಶ್ರೀಧರ್, ಶಾಂತಕುಮಾರಿ, ಎಸ್‍ಬಿಎಂ, ಮಂಜು, ಬೇಗಂ, ಪಲ್ಲವಿ ಸೇರಿದಂತೆ ಎಲ್ಲಾ ಪಕ್ಷದ ಸದಸ್ಯರೂ ತೀವ್ರ ಅಸ ಮಾಧಾನ ವ್ಯಕ್ತಪಡಿಸಿದರು. ಪೌರ ಕಾರ್ಮಿಕರ ಕೊರತೆಯಿಂದಾಗಿ ವಾರ್ಡು ಗಳಲ್ಲಿ ಸ್ವಚ್ಛತಾ ಕೆಲಸ ಕುಂಠಿತವಾಗಿದ್ದು, ಜನರು ತಮಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು. 30 ಮಂದಿ ನಿಯೋಜಿ ಸುವ ವಾರ್ಡ್‍ನಲ್ಲಿ ಕೇವಲ 10ರಿಂದ 15 ಮಂದಿ ಮಾತ್ರ ಕೆಲಸಕ್ಕೆ ಸಿಗುತ್ತಾರೆ. ಆದರೆ ಪೌರಕಾರ್ಮಿಕರ ಹಾಜರಾತಿ ಪುಸ್ತಕದಲ್ಲಿ ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಅಟೆಂಡೆನ್ಸ್ ಕೊಡುತ್ತಿದ್ದಾರೆ. ಕೆಲ ತಿಂಗಳಿಂದ ಹಾಜ ರಾತಿಯನ್ನೇ ಹಾಕಿಲ್ಲ, ಫೋನ್ ಮೂಲಕ ಕೇಳಿ ಹಾಜರಾತಿ ಪುಸ್ತಕದಲ್ಲಿ ಬರೆಯು ತ್ತಿದ್ದು ಇದರಲ್ಲಿ ಭಾರೀ ಹಗರಣ ನಡೆ ಯುತ್ತಿದೆ ಎಂದು ಕಾರ್ಪೊರೇಟರ್‍ಗಳು ಆರೋಪಿಸಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಪೊರೇಟರ್ ಶಾಂತಮ್ಮ, ಆರೋಪವನ್ನು ತಳ್ಳಿಹಾಕಿ, ಹೆಲ್ತ್ ಇನ್ಸ್ ಪೆಕ್ಟರ್‍ಗಳು ಪೌರಕಾರ್ಮಿಕರನ್ನು ಸರಿಯಾಗಿ ನಿಭಾಯಿಸಬೇಕೇ ಹೊರತು, ಪೌರ ಕಾರ್ಮಿಕರು ಕೆಲಸ ಮಾಡುತ್ತಿಲ್ಲ ಎನ್ನು ವುದು ಸರಿಯಲ್ಲ. ಕೋವಿಡ್ ಸಂದರ್ಭ ದಲ್ಲಿ ಪ್ರಾಣವನ್ನು ಲೆಕ್ಕಿಸದೇ ಅವರು ಸ್ವಚ್ಛತಾ ಕೆಲಸ ನಿರ್ವಹಿಸಿದ್ದಾರೆ ಎಂದರು.

ಮೋದಿ ಅವರೇ ಪಾದ ತೊಳೆದಿದ್ದಾರೆ: ನಮ್ಮ ಮನೆಯನ್ನೇ ಸ್ವಚ್ಛಗೊಳಿಸಲು ಹಿಂಜರಿಯುತ್ತೇವೆ. ಅಧಿಕಾರಿಗಳಿಗೆ ಎಸಿ ಕಾರು, ಮನೆ ಬೇಕು, ಚರಂಡಿಗಿಳಿದು ಕೆಲಸ ಮಾಡುವ ಪೌರಕಾರ್ಮಿಕರಿಗೆ ಮಾಸ್ಕ್, ಗ್ಲೌಸ್‍ನಂತಹ ಸುರಕ್ಷಾ ಸಲ ಕರಣೆಗಳಿಲ್ಲದಿರುವಾಗ ಬೆಳಗ್ಗೆಯಿಂದ ಸಂಜೆ ವರೆಗೆ ಕೆಲಸ ಮಾಡಲು ಅವರೇನು ಎಮ್ಮೆ, ಹಸುಗಳಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಪೌರಕಾರ್ಮಿಕರ ಪಾದ ತೊಳೆದು ಗೌರವಿಸಿದ್ದಾರೆ.
ಅವರನ್ನು ನಾವೂ ಗೌರವಿಸಬೇಕು ಎಂದು ಶಾಂತಮ್ಮ ಹೇಳಿದರು. ಶಾಂತಮ್ಮ ಅವರ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಕಾರ್ಪೊರೇಟರ್ ಕೆ.ವಿ.ಶ್ರೀಧರ್, ‘ಇವರು ಓಟಿಗಾಗಿ ಏನು ಬೇಕಾದರೂ ಮಾಡುತ್ತಾರೆ’ ಎಂದು ಹೇಳುತ್ತಿದ್ದಂತೆಯೇ ಶಾಂತಮ್ಮ ಸೇರಿದಂತೆ ಬಿಜೆಪಿಯ ಎಲ್ಲಾ ಸದಸ್ಯರು ರೊಚ್ಚಿಗೆದ್ದು ಬಾವಿಗಿಳಿದು ಪ್ರತಿಭಟನೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೀವು ಪೌರಕಾರ್ಮಿಕರನ್ನು ಅವಮಾನಿಸಿದ್ದೀರಿ. ದೇಶದ ಗೌರವಾನ್ವಿತ ಪ್ರಧಾನಿಗೆ ಅಗೌರವ ತೋರಿಸಿದ್ದೀರಿ. ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದು ಧರಣಿ ನಡೆಸಿದಾಗ ಶ್ರೀಧರ್ ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರೂ ಸಹ ಬಾವಿಗಿಳಿದು, ಬಿಜೆಪಿ ಸದಸ್ಯರ ವಿರುದ್ಧ ಪ್ರತಿಭಟನೆ ನಡೆಸಿದಾಗ ಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು.

ಪರಸ್ಪರ ಕೆಸರೆರಚಾಟ: ವೇದಿಕೆಯ ಎಡಬದಿ ಆಡಳಿತ ಪಕ್ಷದವರು, ಬಲಬದಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿ ಪರಸ್ಪರ ಧಿಕ್ಕಾರಗಳನ್ನು ಕೂಗಿ ಮೇಯರ್, ಆಯುಕ್ತರ ಸಮ್ಮುಖದಲ್ಲೇ ಕೆಸರೆರಚಿಕೊಂಡರು.

ದೊಡ್ಡವರ ಹೆಸರು ಬಳಕೆ: ನರೇಂದ್ರ ಮೋದಿಗೆ ಜೈ, ಜೆಡಿಎಸ್-ಕಾಂಗ್ರೆಸ್‍ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಕೂಗಿದರೆ, ಸಿದ್ದರಾಮಯ್ಯಗೆ ಜೈ, ಬಿಜೆಪಿಗೆ ಧಿಕ್ಕಾರ ಎಂದು ಕಾಂಗ್ರೆಸ್‍ನವರು ಕೂಗುತ್ತಿದ್ದರು. ಅದೇ ವೇಳೆ ಹೆಚ್.ಡಿ. ದೇವೇಗೌಡರಿಗೆ ಜೈ, ಬಿಜೆಪಿ ಡೌನ್ ಡೌನ್ ಎಂದು ಜೆಡಿಎಸ್ ಕಾರ್ಪೊರೇಟರ್‍ಗಳು ಕೂಗಲಾರಂಭಿಸಿದ್ದರಿಂದ ಇಡೀ ಕೌನ್ಸಿಲ್ ಸಭೆಯು ಗೊಂದಲದ ಗೂಡಾಗಿ ಇದೇ ರೀತಿ ಗದ್ದಲ ಮಧ್ಯಾಹ್ನ 12.45ರವರೆಗೂ ಮುಂದುವರೆದು ನಿಯಂತ್ರಣಕ್ಕೆ ಬಾರದ ಕಾರಣ ಮೇಯರ್ ಸಭೆಯನ್ನು 20 ನಿಮಿಷಗಳ ಕಾಲ ಮುಂದೂಡಿ, ಹೊರ ನಡೆದರು.

ವಿವಾದ ಅಂತ್ಯ: ಸಭೆ ಮುಂದೂಡಿದರೂ ಶಾಂತಮ್ಮ ಮಾತ್ರ ವೇದಿಕೆ ಬಳಿಯೇ ಕುಳಿತು ಶ್ರೀಧರ್ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ 1.25 ಗಂಟೆಗೆ ಮತ್ತೆ ಸಭೆ ಆರಂಭವಾದಾಗ ಆರಿಫ್ ಹುಸೇನ್ ಅವರು ಶಾಂತಮ್ಮ ಮತ್ತು ಶ್ರೀಧರ್ ಮಾತನಾಡಿರುವುದು ತಪ್ಪಲ್ಲ, ಮೋದಿ ಅವರು ಪೌರಕಾರ್ಮಿಕರ ಪಾದ ತೊಳೆದಿರಬಹುದು. ಆದರೆ ಸಮಾಜಕ್ಕೇನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಅದಕ್ಕೆ ಮತ್ತೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನೀವು ಕಾಂಗ್ರೆಸ್‍ನವರು ಈ ದೇಶವನ್ನು ಅಧೋಗತಿಗೆ ಕೊಂಡೊಯ್ದಿದ್ದೀರಿ ಎಂದು ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರಿಂದ ಸಭೆಯಲ್ಲಿ ಮತ್ತೆ ಗದ್ದಲ ಉಂಟಾಯಿತು.

ಕ್ಷಮೆ ಕೇಳಲ್ಲ: ನಾನು ಯಾರ ಭಾವನೆಗೂ ಧಕ್ಕೆ ತಂದಿಲ್ಲ. ಪೌರಕಾರ್ಮಿಕರ ಬಗ್ಗೆ ಎಲ್ಲಾ ಸದಸ್ಯರಿಗೂ ಗೌರವವಿದೆ. ನಾವೆಲ್ಲರೂ ರಾಜಕೀಯ ಹಿನ್ನೆಲೆಯಲ್ಲಿ ಬಂದ ವರಾದ್ದರಿಂದ ಮೋದಿ ಅವರ ವಿಚಾರ ಬಂದಾಗ ಓಟಿಗಾಗಿ ಏನನ್ನಾದರೂ ಮಾಡುತ್ತಾರೆ ಎಂದಿದ್ದೇನೆ. ಅದು ಸಂವಿಧಾನಬಾಹಿರ ಎಂದು ಕೌನ್ಸಿಲ್ ಕಾರ್ಯದರ್ಶಿ ಹೇಳಿದರೆ ಕ್ಷಮೆ ಕೇಳಲು ಸಿದ್ಧ ಎಂದು ಕೆ.ವಿ. ಶ್ರೀಧರ್ ಹೇಳಿದರು.

ವಿವಾದಕ್ಕೆ ತೆರೆ: ಕಡೆಗೆ ಬಿಜೆಪಿಯ ಶಿವಕುಮಾರ್ ಅವರು ಮಾತನಾಡಿ, ಪೌರ ಕಾರ್ಮಿಕರ ವಿಷಯದಲ್ಲೇ ಬೆಳಗ್ಗೆಯಿಂದ ಚರ್ಚೆ, ಗದ್ದಲ ನಡೆದು ಸಮಯ ವ್ಯರ್ಥ ವಾಗಿದೆ, ಇನ್ನೂ ಹಲವು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿರುವುದರಿಂದ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸೋಣ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದರು.

Translate »