ಮೈಸೂರಿನ ಫುಟ್ಸಲ್ ಪಟು ಯಶವಂತ ಕುಮಾರ್ ರೋಮ್‍ನಲ್ಲಿ ದುರಂತ ಸಾವು
ಮೈಸೂರು

ಮೈಸೂರಿನ ಫುಟ್ಸಲ್ ಪಟು ಯಶವಂತ ಕುಮಾರ್ ರೋಮ್‍ನಲ್ಲಿ ದುರಂತ ಸಾವು

August 11, 2021

ಮೈಸೂರು, ಆ.10(ಎಸ್‍ಬಿಡಿ)- ಭಾರತದ ಅತ್ಯುತ್ತಮ ಫುಟ್ಸಲ್ ಗೋಲ್ ಕೀಪರ್ ಆಗಬೇಕೆಂಬ ಗುರಿ ಹೊಂದಿದ್ದ ಮೈಸೂರಿನ ಪ್ರತಿಭಾನ್ವಿತ ಯುವ ಕ್ರೀಡಾಪಟು, ದೂರದ ಇಟಲಿ ದೇಶದ ರೋಮ್ ನಗರದಲ್ಲಿ ದುರಂತ ಸಾವಿಗೀಡಾ ಗಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದ ನಿವಾಸಿ, ಕರಕುಶಲ ಕಲಾವಿದ ಎನ್.ಕುಮಾರ್ ಹಾಗೂ ಎನ್. ರೂಪಾ ದಂಪತಿ ಪುತ್ರ ಯಶವಂತ ಕುಮಾರ್(23) ಇಟಲಿಯಲ್ಲಿ ಮೃತಪಟ್ಟಿರುವ ಫುಟ್ಸಲ್ ಆಟಗಾರ. ವಿದ್ಯಾ ವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ, `ಸೀರೀ ಬಿ ಫುಟ್ಸಲ್ ಲೀಗ್’ ನಲ್ಲಿ `ಕ್ಯಾಲ್ಸಿಯೊ ಸಿ 5 ತಂಡದೊಂದಿಗೆ ಭಾಗವಹಿಸಲು ಕಳೆದ 4 ತಿಂಗಳ ಹಿಂದೆಯಷ್ಟೇ ಇಟಲಿಗೆ ತೆರಳಿದ್ದ ಅವರು, ರೋಮ್‍ನಲ್ಲಿರುವ ಜಲಪಾತದಲ್ಲಿ ಕಾಲುಜಾರಿ ಬಿದ್ದು, ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಪುತ್ರ ಶೋಕ: ವಿಶೇಷ ಫುಟ್ಸಲ್ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡು, ತರಬೇತಿ ಪಡೆದು ನಿರಂತರ ಅಭ್ಯಾಸ ದೊಂದಿಗೆ ಉತ್ತಮ ಕ್ರೀಡಾ ಪಟುವಾಗಿದ್ದ ಯಶವಂತ ಕುಮಾರ್ ಸಾವಿನಿಂದ ಅವರ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಪುತ್ರ ಶೋಕದಲ್ಲೂ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಯಶವಂತ ಕುಮಾರ್ ತಂದೆ ಎನ್.ಕುಮಾರ್, ಮೂರ್ನಾಲ್ಕು ದಿನಗಳ ಕಾಲ ಮಗ ಯಶವಂತ್ ಕುಮಾರ್ ಮೊಬೈಲ್ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ. ಹಾಗಾಗಿ ತಂಡದ ಕ್ಯಾಪ್ಟನ್‍ಗೆ ಮೆಸೇಜ್ ಕಳುಹಿಸಿದ್ದೆವು. ಆದರೆ ಆತ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದನ್ನು ಆ.6ರಂದು ನಮಗೆ ತಿಳಿಸಿದ್ದರಾದರೂ ಖಚಿತಪಡಿಸಿರಲಿಲ್ಲ. ಪೊಲೀಸರು ಮರುದಿನ ಬೆರಳಚ್ಚಿನ ಆಧಾರದಲ್ಲಿ ದೃಢಪಡಿಸಿದರು. ಆ.31ರವರೆಗೂ ಅಲ್ಲಿಗೆ ವಿಮಾನ ಸೌಲಭ್ಯವಿಲ್ಲ, ಅಲ್ಲದೆ ಮೃತದೇಹವನ್ನು ಮೀನುಗಳು ತಿಂದಿರುವುದರಿಂದ ಕೊಳೆತ ಸ್ಥಿತಿ ತಲುಪಿದೆ. ಹಾಗಾಗಿ ಅಲ್ಲಿರುವ ಕನ್ನಡಿಗರೇ ಅಂತ್ಯಕ್ರಿಯೆ ನೆರವೇರಿಸಿ, ಅಸ್ತಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ದುಃಖದ ನಡುವೆ ನುಡಿದರು. ಕರ್ನಾಟಕ ರಾಜ್ಯ ಕರಕುಶಲ ಮತ್ತು ಉತ್ಪಾದಕರ ಸಂಘದ ಜಂಟಿ ಕಾರ್ಯದರ್ಶಿಯಾಗಿರುವ ಎನ್.ಕುಮಾರ್ ಹಾಗೂ ಅವರ ಪತ್ನಿ ಎನ್.ರೂಪಾ ಇಬ್ಬರೂ ಕರಕುಶಲ ಕಲಾವಿದರು. ಎನ್.ಕುಮಾರ್ ಅವರ ಕಲಾ ಸಾಧನೆಗೆ ರಾಜ್ಯ ಪ್ರಶಸ್ತಿ ಸಂದಿದೆ. ಈ ಕಲಾರಾಧಕ ದಂಪತಿಯ ಪುತ್ರ ಯಶವಂತ ಕುಮಾರ್ ಕ್ರೀಡಾ ಜಗತ್ತಿನಲ್ಲಿ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿದ್ದರು. ಆದರೆ ಕ್ರೂರಿ ವಿಧಿ ಪ್ರತಿಭಾನ್ವಿತ ಕ್ರೀಡಾಪಟುವನ್ನು ಬಲಿ ಪಡೆದಿದೆ. ವಿಷಯ ತಿಳಿದ ರಾಜ್ಯ ಕರಕುಶಲ ಮತ್ತು ಉತ್ಪಾದಕರ ಸಂಘದ ಅಧ್ಯಕ್ಷ ರಾಮು ಸೇರಿದಂತೆ ಅನೇಕ ಪದಾಧಿಕಾರಿಗಳು ಎನ್.ಕುಮಾರ್ ಹಾಗೂ ಎನ್.ರೂಪಾ ದಂಪತಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಯಶವಂತ್ ರೋಚಕ ಕ್ರೀಡಾ ಹಾದಿ: ಫುಟ್‍ಬಾಲ್ ಮಾದರಿಯ ಫುಟ್ಸಲ್ ಕ್ರೀಡೆ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಫುಟ್‍ಬಾಲ್ ರೂಪಾಂತರ ಕ್ರೀಡೆಯಾಗಿರುವ ಫುಟ್ಸಲ್ ಒಂದು ಒಳಾಂಗಣ ಕ್ರೀಡೆ. ಗೋಲ್ ಕೀಪರ್ ಸೇರಿದಂತೆ ಒಂದು ತಂಡದಲ್ಲಿ ಐವರು ಆಟಗಾರರು ಮಾತ್ರ ಇರುತ್ತಾರೆ. ಈ ವಿಶೇಷ ಕ್ರೀಡೆಯ ಬಗ್ಗೆ 7ನೇ ತರಗತಿ ವಿದ್ಯಾರ್ಥಿ ಯಾಗಿದ್ದಾಗಲೇ ಆಸಕ್ತಿ ಬೆಳೆಸಿಕೊಂಡಿದ್ದ ಯಶವಂತ್, ನಂತರದ ದಿನಗಳಲ್ಲಿ ತರಬೇತಿ ಪಡೆದುಕೊಂಡಿದ್ದರು. ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಹಾಗೂ ಸಾಧಿಸುವ ಛಲ ಹೊಂದಿದ್ದ ಇವರು ಉತ್ತಮ ಕ್ರೀಡಾಪಟುವಾಗಿ ಬೆಳೆದಿದ್ದರು. ಕರ್ನಾಟಕ ಮತ್ತು ಕೇರಳ ಫುಟ್ಸಲ್ ತಂಡಗಳನ್ನು ಪ್ರತಿನಿಧಿಸಿದ್ದಲ್ಲದೆ ಇಂಡಿಯನ್ ಫುಟ್ಸಲ್ ಜರ್ಸಿಯನ್ನೂ ಧರಿಸಿ, 2016ರಲ್ಲಿ ಗೋವಾದಲ್ಲಿ ನಡೆದ ಪ್ರೀಮಿಯರ್ ಫುಟ್ಸಲ್ ಲೀಗ್‍ನಲ್ಲೂ ಆಡಿದ್ದರು.

ಒಪ್ಪಂದದೊಂದಿಗೆ ಇಟಲಿಗೆ ಹೋಗಿದ್ದರು: ಬೆಂಗಳೂರು ಟ್ರಯಲ್ಸ್‍ನಲ್ಲಿ ಭಾಗವಹಿಸಿದ್ದ ಚೆನ್ನೈ, ಮುಂಬೈ, ಕೊಲ್ಕತ್ತಾ, ದೆಹಲಿ ಸೇರಿದಂತೆ ದೇಶದ ವಿವಿಧೆಡೆಯ 320 ಆಟಗಾರರಲ್ಲಿ ಆಯ್ಕೆಯಾದ 40 ಸದಸ್ಯರ ಪಟ್ಟಿಯಲ್ಲಿ ಯಶವಂತ್ ಕುಮಾರ್ ಸ್ಥಾನ ಪಡೆದಿದ್ದರು. ಇವರ ಕ್ರೀಡಾ ಸ್ಫೂರ್ತಿ, ನೈಪುಣ್ಯತೆಯನ್ನು `ಕ್ಯಾಲ್ಸಿಯೊ ಸಿ 5’ ತಂಡ ಗುರುತಿಸಿ, ಅಂತಾರಾಷ್ಟೀಯ `ಇಟಲಿ ಸೀರೀ ಬಿ ಲೀಗ್’ನಲ್ಲಿ ತಂಡ ಪ್ರತಿನಿಧಿಸಲು ಆಹ್ವಾನಿಸಿತ್ತು. ಅದರಂತೆ ತಂಡದಲ್ಲಿ ಆಡಲು 2 ವರ್ಷ ಒಪ್ಪಂದದೊಂದಿಗೆ 4 ತಿಂಗಳ ಹಿಂದಷ್ಟೇ ಇಟಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ 1 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ, ಸಂಭ್ರಮದಿಂದ ಬೀಳ್ಕೊಟ್ಟಿತ್ತು. ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಲೀಗ್‍ಗೆ ಆಯ್ಕೆಯಾಗಿದ್ದ ಯಶವಂತ ಕುಮಾರ್ ಅವರ ಸಾಧನೆ ಬಗ್ಗೆ 2019ರ ಜುಲೈ 18ರ `ಸ್ಟಾರ್ ಆಫ್ ಮೈಸೂರ್’ ಸಂಚಿಕೆಯಲ್ಲಿ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »