ಕೆಆರ್‍ಎಸ್ ಹಿನ್ನೀರಿನ ಬಳಿ ಹುಟ್ಟುಹಬ್ಬದ ಪಾರ್ಟಿ: 34 ಮಂದಿ ಬಂಧನ ಠಾಣಾ ಜಾಮೀನಿನ ಮೇಲೆ ಬಿಡುಗಡೆ
ಮೈಸೂರು

ಕೆಆರ್‍ಎಸ್ ಹಿನ್ನೀರಿನ ಬಳಿ ಹುಟ್ಟುಹಬ್ಬದ ಪಾರ್ಟಿ: 34 ಮಂದಿ ಬಂಧನ ಠಾಣಾ ಜಾಮೀನಿನ ಮೇಲೆ ಬಿಡುಗಡೆ

June 12, 2020

ಮೈಸೂರು,ಜೂ.11-ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಾತ್ರಿ ವೇಳೆ ಕೆಆರ್‍ಎಸ್ ಹಿನ್ನೀರಿನ ಬಳಿ ಫಾರ್ಮ್ ಹೌಸ್‍ನಲ್ಲಿ ಹುಟ್ಟುಹಬ್ಬದ ಅಂಗವಾಗಿ ಪಾರ್ಟಿ ಮಾಡುತ್ತಿದ್ದ 34 ಮಂದಿ ಯನ್ನು ಬಂಧಿಸಿರುವ ಕೆಆರ್‍ಎಸ್ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ ದ್ದಾರೆ. ಶೇಖರ್ ಎಂಬುವರಿಗೆ ಸೇರಿದ ಫಾರ್ಮ್ ಹೌಸ್‍ನಲ್ಲಿ ಬುಧವಾರ ರಾತ್ರಿ ವೇದಿಕೆ ನಿರ್ಮಿಸಿ ಹಾಡುಗಾರಿಕೆಯೊಂದಿಗೆ ನೃತ್ಯ ಮಾಡುತ್ತಾ ದಾಸಪ್ಪ ಅಲಿಯಾಸ್ ದಾಸ ಎಂಬುವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ರಾತ್ರಿ ವೇಳೆ ಫಾರ್ಮ್ ಹೌಸ್‍ನಲ್ಲಿ ಮೋಜು ಮಸ್ತಿ ನಡೆಯುತ್ತಿದೆ ಎಂದು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಕೆಆರ್‍ಎಸ್ ಠಾಣೆ ಸಬ್‍ಇನ್ಸ್‍ಸ್ಪೆಕ್ಟರ್ ಎನ್.ಬಿ.ನವೀನ್‍ಗೌಡ ಮತ್ತವರ ತಂಡ ದಾಳಿ ನಡೆಸಿ, ಮೋಜು ಮಸ್ತಿಯಲ್ಲಿ ತೊಡಗಿದ್ದ 34 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಹಾಡುಗಾರಿಕೆಗೆ ಬಳಸುತ್ತಿದ್ದ ಡಕ್, ಮ್ಯೂಸಿಕಲ್ ಸ್ಪೀಕರ್‍ಗಳು ಸೇರಿದಂತೆ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಭರತ್‍ರಾಜ್ ಸೇರಿದಂತೆ 34 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ 269, 271, 290, 92(ಎ) ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳಿಗೆ ಸಿಆರ್‍ಪಿಸಿ ಕಲಂ 41 ಕ್ಲಾಸ್ ಎ ರೀತ್ಯಾ ನೋಟಿಸ್ ಜಾರಿ ಮಾಡಿ, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Translate »